Advertisement

ಯುವಕರ ಬಲಿ ಪಡೆದ ಭಾರೀ ಮಳೆ

12:44 AM Apr 18, 2019 | Lakshmi GovindaRaju |

ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಸಂಜೆ ಸುರಿದ ಈ ವರ್ಷದ ಮೊದಲ ಭಾರೀ ಮಳೆಗೆ ಇಬ್ಬರು ಯುವಕರು ಬಲಿಯಾಗಿದ್ದು, ಹದಿಮೂರಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಗಾಳಿ ಸಹಿತ ಭಾರೀ ಮಳೆಯಿಂದಾಗಿ ಎರಡು ಪ್ರತ್ಯೇಕ ದುರಂತಗಳಲ್ಲಿ ಕೊರಿಯರ್‌ ಸಂಸ್ಥೆ ಉದ್ಯೋಗಿ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

ಹೆಬ್ಟಾಳ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯ ಲುಂಬಿನಿ ಗಾರ್ಡನ್‌ ಬಳಿ ದ್ವಿಚಕ್ರ ವಾಹನ ಸವಾರನ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ, ಕೋರಿಯರ್‌ ಸಂಸ್ಥೆ ಉದ್ಯೋಗಿ ಕಿರಣ್‌ (28) ಮೃತಪಟ್ಟಿದ್ದಾನೆ. ಮತ್ತೂಂದೆಡೆ, ಜಾಲಹಳ್ಳಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಂಜಿನಿಯರಿಂಗ್‌ ವಿದ್ಯಾರ್ಥಿ ಆಶೀಶ್‌ ವರ್ಮಾ (21) ಮೃತಪಟ್ಟಿದ್ದಾರೆ.

ಕುಣಿಗಲ್‌ ಮೂಲದ ಕಿರಣ್‌ ಕೆಂಪಾಪುರ ಸಮೀಪದ ಕಾಫಿ ಬೋರ್ಡ್‌ ಲೇಔಟ್‌ನಲ್ಲಿ ವಾಸವಾಗಿದ್ದ. ನಗರದ ಕೊರಿಯರ್‌ ಕಚೇರಿಯೊಂದರಲ್ಲಿ ಕೊರಿಯರ್‌ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಕಿರಣ್‌, ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಕಾರ್ಯನಿಮಿತ್ತ ಮಾನ್ಯತಾ ಟೆಕ್‌ಪಾರ್ಕ್‌ ಕಡೆಯಿಂದ ಹೆಬ್ಟಾಳದ ಯೋಗೇಶ್ವರನಗರ ಮುಖ್ಯರಸ್ತೆ ಕಡೆ ಬೈಕ್‌ನಲ್ಲಿ ಬರುವಾಗ ಗಾಳಿ ಸಹಿತ ಜೋರು ಮಳೆ ಆರಂಭವಾಗಿದೆ.

ಈ ವೇಳೆ ರಸ್ತೆ ಬದಿ ಇದ್ದ ಮರದಲ್ಲಿನ ಒಣಗಿದ ಕೊಂಬೆ ಏಕಾಏಕಿ ಕಿರಣ್‌ ತಲೆ ಮೇಲೆ ಬಿದ್ದಿದೆ. ಕೂಡಲೇ ಸ್ಥಳೀಯರು ನೆರವಿಗೆ ಬಂದರಾದರೂ ಅಷ್ಟರಲ್ಲಿ ಕಿರಣ್‌ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದರು.

ನಂತರ ಸ್ಥಳಕ್ಕೆ ತೆರಳಿದ ಹೆಬ್ಟಾಳ ಸಂಚಾರ ಠಾಣೆ ಪೊಲೀಸರು, ಮೃತ ಕಿರಣ್‌ ದೇಹವನ್ನು ಆಸ್ಪತ್ರೆಗೆ ರವಾನಿಸಿ, ಪ್ರಕರಣವನ್ನು ಅಮೃತಹಳ್ಳಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕುಣಿಗಲ್‌ನಲ್ಲಿರುವ ಕಿರಣ್‌ ಪೋಷಕರಿಗೆ ವಿಷಯ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದರು. ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ವಿದ್ಯಾರ್ಥಿ ಸಾವು: ಹೆಬ್ಟಾಳದ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತೃತೀಯ ವರ್ಷದ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದ ಆಶಿಶ್‌ ವರ್ಮಾ, ಸ್ನೇಹಿತರಾದ ಜಾವೀದ್‌, ಆಕೀಬ್‌, ವಿನಯ್‌ ನಾಯಕ್‌ ಎಂಬುವರ ಜತೆ ಪೀಣ್ಯ ದಾಸರಹಳ್ಳಿಯಿಂದ ಹೆಸರುಘಟ್ಟ ಮುಖ್ಯರಸ್ತೆ ಮಾರ್ಗವಾಗಿ ಯಲಹಂಕ ಕಡೆ ಹೋಗುತ್ತಿದ್ದರು.

ಈ ಮಾರ್ಗ ಮಧ್ಯೆ ಸೆಂಟ್ರಲ್‌ ಪೌಲಿ ಡೆವಲಪ್‌ಮೆಂಟ್‌ ಆರ್ಗನೈಜೆಷನ್‌ (ಸಿಪಿಡಿಒ) ಸಮೀಪ ವೇಗವಾಗಿ ಹೋಗುವಾಗ ಕಾರು ಚಾಲನೆ ಮಾಡುತ್ತಿದ್ದ ಜಾವೀದ್‌ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಇದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಗಾಯಗೊಂಡ ಆಶಿಶ್‌ ವರ್ಮಾ, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಚಾಲಕ ಸೇರಿ ಇತರೆ ಇಬ್ಬರಿಗೂ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.

“ಭಾರೀ ಗಾಳಿ ಬೀಸುತ್ತಿದ್ದ ಪರಿಣಾಮ ರಸ್ತೆಯಲ್ಲಿ ಮರಗಳ ಕೊಂಬೆಗಳು ಬಿಳುತ್ತಿದ್ದವು. ಇದರಿಂದ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದೆ,’ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ಕಾರು ಚಾಲಕ ಜಾವೀದ್‌ ಹೇಳಿಕೆ ನೀಡಿದ್ದಾನೆ ಎಂದು ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರು ಹೇಳಿದರು. ಜಾಲಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next