ಹೊಸದಿಲ್ಲಿ: ಟಿಕೆಟ್ ಖರೀದಿ ವೇಳೆ ರೈಲ್ವೇ ಅಧಿಕಾರಿಯೊಬ್ಬರು ಪ್ರಯಾಣಿಕರಿಗೆ ವಂಚಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ದಿಲ್ಲಿಯ ಹಜರತ್ ನಿಜಾ ಮುದ್ದೀನ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, “ರೈಲ್ವೇ ಉದ್ಯೋಗಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಉತ್ತರ ರೈಲ್ವೇಯ ಸೇವಾ ಮತ್ತು ದಿಲ್ಲಿ ವಿಭಾಗ ಹೇಳಿದೆ.
ಸೂಪರ್‌ಫಾಸ್ಟ್ ಗ್ವಾಲಿಯರ್ ರೈಲಿನಲ್ಲಿ ಸಂಚರಿಸಬೇಕಾಗಿದ್ದ ಪ್ರಯಾಣಿಕ 125 ರೂ.ಗಳ ಟಿಕೆಟ್ ಖರೀದಿಸಬೇಕಿತ್ತು. ಅದರಂತೆ, ಅವನು 500 ರೂ.ಗಳ ನೋಟನ್ನು ಟಿಕೆಟ್ ಕೌಂಟರ್‌ನಲ್ಲಿ ಕುಳಿತಿದ್ದ ವ್ಯಕ್ತಿಗೆ ನೀಡುತ್ತಾನೆ. ಆದರೆ ಕ್ಷಣಮಾತ್ರದಲ್ಲಿ ಆ 500 ರೂ. ನೋಟನ್ನು ಮತ್ತೂಂದು ಕೈಗೆ ಬದಲಾಯಿಸುವ ರೈಲ್ವೇ ಉದ್ಯೋಗಿ, 500ರೂ. ಇದ್ದ ಜಾಗದಲ್ಲಿ 20 ರೂ. ನೋಟನ್ನು ಇಡುತ್ತಾನೆ. ಅನಂತರ “ಇದೇನಿದು? 20 ರೂ. ಕೊಟ್ಟಿದ್ದಿ. ಟಿಕೆಟ್‌ಗೆ 125 ರೂ. ಆಗುತ್ತೆ. ಉಳಿದ 105 ರೂ. ಕೊಡು’ ಎಂದು ಕೇಳುತ್ತಾನೆ. ಆದರೆ ರೈಲ್ವೇ ಸಿಬಂದಿಯ ಈ “ಕಣ್ಣಾಮುಚ್ಚಾಲೆ ಆಟ’ ಪ್ರಯಾಣಿಕನ ಮೊಬೈಲ್‌ನಲ್ಲಿ ಸೆರೆಯಾಗಿರುತ್ತದೆ.
ಇದರ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ತಮಗೂ ಇಂಥದ್ದೇ ಅನುಭವ ಹಲವು ಬಾರಿ ಆಗಿರುವುದಾಗಿ ಅಳಲು ತೋಡಿ ಕೊಂಡಿದ್ದಾರೆ. ರೈಲ್ವೇ ಅಧಿಕಾರಿಗಳು ಆ ವ್ಯಕ್ತಿಯ ವಿರುದ್ಧ ಶಿಸ್ತುಕ್ರಮದ ಭರವಸೆ ನೀಡಿದ್ದಾರೆ.