Advertisement

ಕ್ವಾರಂಟೈನ್‌ ಅವಧಿ ಮೂರುಪಟ್ಟು ವಿಸ್ತರಣೆ

10:53 AM Apr 10, 2020 | Suhan S |

ಬೆಂಗಳೂರು: ಕೋವಿಡ್ 19 ವೈರಸ್‌ಗೆ ಸಂಬಂಧಿಸಿದಂತೆ ಕ್ವಾರಂಟೈನ್‌ ಆಗಿರುವವರಿಗೆ ಕಹಿ ಸುದ್ದಿ. 14 ದಿನಗಳಿದ್ದ “ಗೃಹಬಂಧನ’ದ ಅವಧಿ ಈಗ ಮೂರುಪಟ್ಟು ಅಂದರೆ 42 ದಿನಗಳಿಗೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ.

Advertisement

ಸೋಂಕಿತರೊಂದಿಗಿನ ಪ್ರಾಥಮಿಕ ಸಂಪರ್ಕ ಹೊಂದಿದವರು ಮತ್ತು ಸೋಂಕಿನ ಶಂಕೆ ಇರುವವರಿಗೆ ಈ ದೀರ್ಘಾವಧಿ ಕ್ವಾರಂಟೈನ್‌ ಅನ್ವಯ ಆಗಲಿದೆ. ಈಗಾಗಲೇ ನಿಗಾದಲ್ಲಿ ಇರುವ ಮತ್ತು ಇನ್ಮುಂದೆ ಹೊಸದಾಗಿ ಪತ್ತೆಯಾಗುವ ಎರಡೂ ವರ್ಗವೂ ಕಡ್ಡಾಯವಾಗಿ 42 ದಿನಗಳು ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ವಿದೇಶದಿಂದ ಬಂದವರನ್ನು ಈ ಮೊದಲು 14 ದಿನಗಳವರೆಗೆ ಕ್ವಾರಂಟೈನ್‌ ಮಾಡಲಾಗುತ್ತಿತ್ತು. ಆದರೆ, ಬೆಂಗಳೂರಿನಲ್ಲಿ ಅತಿ ಹೆಚ್ಚು 60 ಜನರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ದೀರ್ಘಾವಧಿ ಕ್ವಾರಂಟೈನ್‌ ಮಾಡಲು ಸರ್ಕಾರ ಸೂಚಿಸಿದೆ. ಅದರಂತೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ನೂರಾರು ಮಂದಿ 14 ದಿನಗಳ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿ, ಬಿಡುಗಡೆ ಹಂತದಲ್ಲಿದ್ದರು. ಅಷ್ಟರಲ್ಲಿ ಈ ಹೊಸ ಆದೇಶ “ಶಾಕ್‌’ ನೀಡಿದೆ. ನಗರದಲ್ಲಿ ಒಟ್ಟಾರೆ 69 ಸೋಂಕಿತರಿದ್ದು, 17 ಜನ ಈಗಾಗಲೇ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಈ ಮಧ್ಯೆ ಸೋಂಕಿತರೊಂದಿಗೆ 457 ಜನ ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದು, ಅವರೆಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದೆ. ಪರೋಕ್ಷವಾಗಿ ಅವರ ಕುಟುಂಬಗಳೂ ಒಂದು ರೀತಿಯ “ಗೃಹಬಂಧನ’ವನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ, ಅವರಿಗೂ ಈ ಬಿಸಿ ತಟ್ಟಲಿದೆ.

ಕೋವಿಡ್ 19  ಸೋಂಕಿತರ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು 14 ದಿನ ಪಾಲಿಕೆಯಿಂದ ಗುರುತಿಸಿದ ಸ್ಥಳಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತದೆ. ಈ ವೇಳೆ 12ನೇ ದಿನ ಶಂಕಿತರ ಮಾದರಿ ಪರೀಕ್ಷೆಗೊಳಪಡಿಸಿ, ವರದಿ “ನೆಗೆಟಿವ್‌’ ಬಂದರೆ ಮಾತ್ರ ಕ್ವಾರಂಟೈನ್‌ ಮುಕ್ತ ಮಾಡಲಾಗುವುದು. ಅಲ್ಲದೆ, ಮತ್ತೆ 14 ದಿನಗಳು ಪಾಲಿಕೆ ನಿಗಾ ವಹಿಸಿ ಕ್ವಾರಂ ಟೈನ್‌ ಮಾಡಲಾಗುವುದು. ನಂತರ ಇನ್ನು 15 ದಿನಗಳವರೆಗೆ ವೈಯಕ್ತಿಕ ಕಾಳಜಿ ನಿಟ್ಟಿನಲ್ಲಿ ಕ್ವಾರಂಟೈನ್‌ ಸೂಚನೆ ನೀಡಲಾಗುತ್ತದೆ. ಒಟ್ಟಾರೆ 42 ದಿನಗಳು ಕ್ವಾರಂಟೈನ್‌ ಮಾಡಿ ಕೊರೊನಾ ಹರಡುವುದಕ್ಕೆ ಕಡಿವಾಣ ಹಾಕಲಾಗುವುದು ಎಂದರು.

Advertisement

ದೆಹಲಿಯ ನಿಜಾಮುದ್ದೀನ್‌ನ ತಬ್ಲೀಘಿ  ಜಮಾತ್‌ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 148 ಜನರನ್ನು ಹಜ್‌ ಭವನದಲ್ಲಿ ಕ್ವಾರಂಟೈನ್‌ ಮಾಡಿ ತಪಾಸಣೆ ಒಳಪಡಿಸಲಾಗಿತ್ತು. ಇದರಲ್ಲಿ 4 ಜನರಿಗೆ ಮಾತ್ರ ಸೋಂಕು ದೃಢಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ಉಳಿದಂತೆ ಸೋಂಕು ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದವರನ್ನು ಮನೆಗಳಿಗೆ ಕಳುಹಿಸಲಾಗಿದೆ. ಇವರನ್ನು ಕಡ್ಡಾಯವಾಗಿ ಮುಂದಿನ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ತಪಾಸಣೆ ಮತ್ತಷ್ಟು ಬಿಗಿ: ಈ ಮಧ್ಯೆ ಕೋವಿಡ್ 19  ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಟೋಲ್‌ಗೇಟ್‌ಗಳು ಹಾಗೂ ಚೆಕ್‌ ಪೋಸ್ಟ್ ಗಳಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಿಯಾಲಿಟಿ ಚೆಕ್‌ಗಾಗಿ ರಸ್ತೆಗಿಳಿದು ದಿಢೀರ್‌ ತಪಾಸಣೆ ನಡೆಸುತ್ತಿದ್ದಾರೆ. ಈ ನಡುವೆ ಸಚಿವರು ಗಡಿಭಾಗದಲ್ಲಿ ತಪಾಸಣೆ ನಡೆಸುತ್ತಿದ್ದ ವೈದ್ಯಕೀಯ ಸಿಬ್ಬಂದಿ ಬಳಿ ತೆರಳಿ ಸ್ವತಃ ತಪಾಸಣೆಗೊಳಪಟ್ಟರು.

 

ಚೆಕ್‌ಪೋಸ್ಟ್ ಗಳಲ್ಲಿ ಭಾರೀ ಕಟ್ಟುನಿಟ್ಟು! :  ರಾಜ್ಯದ ಪ್ರತಿ ಜಿಲ್ಲೆಗಳ ಗಡಿಭಾಗದ ಚೆಕ್‌ಪೋಸ್ಟ್ ಗಳಲ್ಲಿ ಭಾರಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ವಾಹನಗಳಲ್ಲಿ ಬರುವವರ ಹೆಸರು, ವಿಳಾಸ, ಅವರ ದೂರವಾಣಿ ಸಂಖ್ಯೆ, ಬೇರೆ ಊರು ಅಥವಾ ನಗರಕ್ಕೆ ತೆರಳುತ್ತಿರುವ ನಿರ್ದಿಷ್ಟ ಉದ್ದೇಶದ ಮಾಹಿತಿಯನ್ನು ಪೊಲೀಸರು ಪಡೆದುಕೊಳ್ಳುತ್ತಿ ದ್ದಾರೆ. ಜತೆಗೆ ಪಾಸ್‌ ಹೊಂದಿಲ್ಲ ದವರನ್ನು ವಾಪಾಸ್‌ ಕಳುಹಿಸುತ್ತಿದ್ದಾರೆ. ಕೋವಿಡ್ 19 ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಹೋಗುತ್ತಿರುವವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದರಿಂದ ಒಂದು ವೇಳೆ ಹೋಗಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾದರೆ, ಆ ಜಾಲವನ್ನು ಸುಲಭವಾಗಿ ಪತ್ತೆಹಚ್ಚಲು ಸಹಕಾರಿಯಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next