Advertisement
ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಮಾಡಿದ ಉದ್ದೇಶವೇ ಉತ್ತರ ಕರ್ನಾಟಕ ಭಾಗದ ಜನರಿಗೆ ನ್ಯಾಯ ಒದಗಿಸಬೇಕು ಎಂಬ ಕಾರಣಕ್ಕೆ. ಬಿಜೆಪಿ ಸರ್ಕಾರದ ಅಲಕ್ಷ್ಯ ಧೋರಣೆಯಿಂದಾಗಿ ಇಂದು ಆ ಉದ್ದೇಶದ ಈಡೇರಿಕೆ ಆಗುತ್ತಿಲ್ಲ ಎಂಬುದು ದುರದೃಷ್ಟಕರ ಎಂದರು.
Related Articles
Advertisement
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೈದರಾಬಾದ್ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಬಿಟ್ಟರೆ ಆ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಕಳೆದ ಎರಡೂವರೆ ವರ್ಷದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸದಸ್ಯರು, ಅಧ್ಯಕ್ಷರ ನೇಮಕವಾಗಿಲ್ಲ. ಹೀಗಿದ್ದಾಗ ಅನುದಾನದ ಸದ್ಬಳಕೆಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ನಮ್ಮ ಐದು ವರ್ಷಗಳ ಆಡಳಿತದಲ್ಲಿ ಹೈದರಾಬಾದ್ ಕರ್ನಾಟಕ ವಿಶೇಷ ಮೀಸಲಾತಿ ಸೌಲಭ್ಯದಡಿ 30,000 ಹುದ್ದೆಗಳ ಭರ್ತಿ ಮಾಡಿದ್ದೆವು. ಬಿಜೆಪಿ ಸರ್ಕಾರ ಬಂದಮೇಲೆ ಒಂದೇ ಒಂದು ಹುದ್ದೆ ಭರ್ತಿಯಾದ ಉದಾಹರಣೆ ಇದೆಯಾ? ಎಂದರು.
2021-22 ನೇ ಸಾಲಿಗೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಘೋಷಣೆಯಾದ ಅನುದಾನ ರೂ. 1,500 ಕೋಟಿ. ಇದರಲ್ಲಿ ಬಿಡುಗಡೆ ಯಾಗಿರುವುದು ರೂ. 378 ಕೋಟಿ. ಇನ್ನು ಉಳಿದಿರೋದು ಕೇವಲ ಎರಡು ತಿಂಗಳು? ಹೆಚ್ಚೆಂದರೆ ರೂ. 200 ಕೋಟಿ ಹಣ ಖರ್ಚಾಗಬಹುದು.ಮುಖ್ಯಮಂತ್ರಿಗಳು ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿ, ವೀರಾವೇಶದಿಂದ ನೀವು ಅನುದಾನ ಅಷ್ಟನ್ನೂ ಖರ್ಚು ಮಾಡಿ ಈ ವರ್ಷ ರೂ. 3,000 ಕೋಟಿ ಅನುದಾನ ಕೊಡುತ್ತೇನೆ ಎಂದರು. ಎಲ್ಲಿದೆ ಹಣ? ಎಂದು ಪ್ರಶ್ನಿಸಿದರು. ಈ ಹಿಂದೆ ಸಿದ್ದರಾಮಯ್ಯ ಅವರು ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡಿ, ತಾವು ಅಧಿಕಾರಕ್ಕೆ ಬಂದರೆ ಕೃಷ್ಣ ಮೇಲ್ದಂಡೆ ಯೋಜನೆಗೆ ರೂ. 10,000 ಕೋಟಿ ಅನುದಾನ ನೀಡುವುದಾಗಿ ಹೇಳಿ, ಅನುದಾನ ನೀಡದೆ ಜನರಿಗೆ ಮೋಸ ಮಾಡಿದ್ದಾರೆ ಎಂದು ಗೋವಿಂದ ಕಾರಜೋಳ ಹಲವು ಬಾರಿ ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. 2013 ರ ಚುನಾವಣೆ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಕೃಷ್ಣ ಹಾಗೂ ಕಾವೇರಿ ನದಿ ಕಣಿವೆ ಪ್ರದೇಶದ ಅಭಿವೃದ್ಧಿ, ಆಧುನೀಕರಣ ಹಾಗೂ ನೀರಾವರಿ ಯೋಜನೆಗಳಿಗಾಗಿ ವಾರ್ಷಿಕ ರೂ. 10,000 ಕೋಟಿ ಅನುದಾನ ನೀಡುತ್ತೇವೆ ಎಂಬ ಭರವಸೆ ನೀಡಿದ್ದೆವು. ನಮ್ಮ ಐದು ವರ್ಷಗಳ ಅವಧಿಯಲ್ಲಿ ರೂ. 52,000 ಕೋಟಿ ಅನುದಾನವನ್ನು ನೀರಾವರಿ ಉದ್ದೇಶಕ್ಕಾಗಿ ಖರ್ಚು ಮಾಡಿದ್ದೇವೆ. ಬಿಜೆಪಿಯವರು 2018ರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸುಜಲಾಂ, ಸುಫಲಾಂ ಯೋಜನೆಯಡಿ 1.5 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಯಡಿಯೂರಪ್ಪ ಅವರು ಸದನದಲ್ಲಿ ಮಾತನಾಡುತ್ತಾ ತಕ್ಷಣ ಆಲಮಟ್ಟಿ ಜಲಾಶಯವನ್ನು 519 ಮೀಟರ್ ನಿಂದ 524 ಮೀಟರ್ ಗೆ ಏರಿಸಿ, ಭೂಮಿ ಕಳೆದುಕೊಂಡವರಿಗೆ 25 – 30 ಲಕ್ಷ ಪರಿಹಾರ ನೀಡಲು ಸುಮಾರು 1.5 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಬೇಕೆಂದು ಸಂಕಲ್ಪ ಮಾಡಿದ್ದೇನೆ ಎಂದಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಾ ಬಂದಿದೆ, ಅವರ ಪ್ರಣಾಳಿಕೆಯ ಭರವಸೆ ಪ್ರಕಾರ ಈಗ ಕನಿಷ್ಠ 90,000 ಕೋಟಿ ಹಣ ಖರ್ಚು ಮಾಡಬೇಕಿತ್ತಲ್ಲವಾ? ಆದರೆ ಖರ್ಚಾದ ಒಟ್ಟು ಹಣ ರೂ. 33,835 ಕೋಟಿ ಮಾತ್ರ.ಬಿಜೆಪಿ ಸರ್ಕಾರ 2008 ರಿಂದ 2013 ರ ವರೆಗೆ ನೀರಾವರಿ ಉದ್ದೇಶಕ್ಕಾಗಿ ಖರ್ಚು ಮಾಡಿರುವ ಅನುದಾನ ರೂ. 17,734 ಕೋಟಿ. ಬಿಜೆಪಿ ಅವಧಿಯಲ್ಲಿ ಖರ್ಚಾದ ಮೂರು ಪಟ್ಟು ಹಣವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ನೀರಾವರಿ ಉದ್ದೇಶಕ್ಕೆ ಖರ್ಚು ಮಾಡಿದೆ.ನಮ್ಮ ಐದು ವರ್ಷಗಳ ಆಡಳಿತದಲ್ಲಿ ನೀರಾವರಿ ಸೃಜನೆಗೊಳಪಟ್ಟ ಪ್ರದೇಶ ಒಟ್ಟು 6.54 ಲಕ್ಷ ಎಕರೆ. ನಾವು ನುಡಿದಂತೆ ನಡೆದಿದ್ದೇವೆ, ಬಿಜೆಪಿ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸದ ವಚನ ಭ್ರಷ್ಟ ಸರ್ಕಾರವಾಗಿದೆ ಎಂದು ಕಿಡಿ ಕಾರಿದರು.