ಬೀದರ: ಪರಿಶುದ್ಧ ನಗುವೆ ದಿವ್ಯ ಔಷಧ. ನಗುವುದರಿಂದ ಶ್ವಾಸಕೋಶಗಳು ತೆರೆದುಕೊಂಡು ಹೆಚ್ಚು ಆಮ್ಲಜನಕ ಹೀರಿಕೊಳ್ಳುತ್ತವೆ. ನಗುವಿನಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ ಹೇಳಿದರು.
ನಗರದ ಶರಣ ಉದ್ಯಾನದಲ್ಲಿ ಹೋಳಿ ಹಬ್ಬದ ನಿಮಿತ್ತ ಆಯೋಜಿಸಿದ್ದ ನಗೆಮಾರಿ ತಂದೆಗಳ ಸ್ಮರಣೋತ್ಸವ ಮತ್ತು ನಗೆ ಹಬ್ಬ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಆದ್ದರಿಂದ ಪ್ರತಿಯೊಬ್ಬರೂ ಹಾಸ್ಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮನುಷ್ಯರಿಗೆ ನಗುವು ಒಂದು ವಿಟಾಮಿನ್. ಆದರೆ ನಗಿಸುವುದು ಅಸಾಮಾನ್ಯ ಕಲೆ. ನಗುವ ಸಾಮರ್ಥ್ಯ ಇರುವುದು ಮನುಷ್ಯರಿಗೆ ಮಾತ್ರ. ಅದಕ್ಕೆ ಬಿಗುಮಾನ ಅಹಂಕಾರ ಬಿಟ್ಟು ನಗಬೇಕು. ಮನಪೂರ್ತಿ ನಗುವುದರಿಂದ ಒತ್ತಡ ನಿವಾರಣೆಯಾಗಿ ಆನಂದ ಲಭಿಸುತ್ತದೆ ಎಂದರು. ಹನ್ನೆರಡನೇ ಶತಮಾನದ ಶರಣರು ನಗಿಸುವುದನ್ನು ಒಂದು ಕಾಯಕವಾಗಿ ಗೌರವಿಸಿದರು.
ಬಹುರೂಪಿ ಚೌಡಯ್ಯನವರು ಮತ್ತು ನಗೆಮಾರಿ ತಂದೆಗಳು ಜನರಿಗೆ ನಗಿಸುತ್ತಲೆ ಸುಂದರ ಬದುಕಿನ ತತ್ವ ಸಾರುವುದನ್ನು
ಕಾಯಕವಾಗಿಸಿಕೊಂಡಿದ್ದರು ಎಂದು ಬಣ್ಣಿಸಿ, ನಗುವನ್ನೇ ಜೀವನವಾಗಿಸಿಕೊಳ್ಳಬೇಕು ಎಂದು ಕರೆಯಿತ್ತರು. ಈ ಸಂದರ್ಭದಲ್ಲಿ ಔರಾದನ ರಾಮದಾಸ ಬಿರಾದಾರ ಅವರು ಶರಣರ ತತ್ವಗಳನ್ನು ಕೀರ್ತನ ಶೈಲಿಯಲ್ಲಿ ಬಣ್ಣಿಸುತ್ತಾ ಶರಣರ ಸಂಗಕ್ಕಿಂತ ಭಾಗ್ಯ ಮತ್ತೂಂದಿಲ್ಲ. ಶರಣರ ನೆನೆದರೆ ಪುಣ್ಯ ಎಂದು ವಿವರಿಸಿದರು.
ನಗೆಗಡಲಲ್ಲಿ ತೇಲಿದ ಸಭಿಕರು: ಟಿವಿ9 ಕಲಾವಿದರಾದ ಚಿಂಚೋಳಿಯ ರಾಚಯ್ಯಸ್ವಾಮಿ, ಆಕಾಶವಾಣಿ ಮತ್ತು ಚಂದನವಾಹಿನಿ ಕಲಾವಿದ ರೇವಣಸಿದ್ಧಯ್ಯ ಸ್ವಾಮಿ ಮತ್ತು ಹಾಸ್ಯಕಲಾವಿದ ಮಲ್ಲಿಕಾರ್ಜುನ ಟಂಕಸಾಲಿ ಅವರು ದಿನನಿತ್ಯ ಗಂಡ ಹೆಂಡತಿ ಮಧ್ಯದಲ್ಲಿ ಸಂಭವಿಸುವ ಹಾಸ್ಯ ಪ್ರಸಂಗಗಳು, ಗೆಳೆಯರ ಮಧ್ಯ ಮತ್ತು ಶಾಲೆಯಲ್ಲಿ ಶಿಕ್ಷಕರ-ವಿದ್ಯಾರ್ಥಿಗಳ ಮಧ್ಯ ಘಟಿಸುವ ಹಾಸ್ಯ ಪ್ರಸಂಗಗಳನ್ನು ಹೇಳಿ 2 ಗಂಟೆಗೂ ಅ ಧಿಕ ಸಮಯ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಮಿಮಿಕ್ರಿಗಳ ಮೂಲಕವೂ ಜನರನ್ನು ರಂಜಿಸಿದರು. ಡಾ| ಗಂಗಾಂಬಿಕೆ ಅಕ್ಕ ನೇತೃತ್ವ ವಹಿಸಿದ್ದರು.
ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಕೆ. ಪಾಟೀಲರು ಪರಿಸರ ಸ್ನೇಹಿ, ಹೊಗೆರಹಿತ ಪಟಾಕಿ ಸಿಡಿಸಿ ನಗೆಹಬ್ಬ ಉದ್ಘಾಟಿಸಿದರು. ಅಗ್ನಿಶಾಮಕದಳದ ನಿವೃತ್ತ ಅಧಿಕಾರಿ ಅಮೃತ ಚಿಮಕೋಡ ಅವರು ಧ್ವಜಾರೋಹಣ ನೆರವೇರಿಸಿದರು.
ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ವಚನ ವಾಚನ ಮಾಡಿಸಿದರು. ಪ್ರಭಾವತಿ ಗೋರನಾಳೆ ಗುರು ಪೂಜೆ ಮಾಡಿದರು. ಯುಕೆಜಿ ವಿದ್ಯಾರ್ಥಿನಿ ಭಕ್ತಿ ಪಾಟೀಲ ಕಿತ್ತೂರ ರಾಣಿ ಚನ್ನಮ್ಮನ ಛದ್ಮವೇಷದಲ್ಲಿ ಸಭಿಕರನ್ನು ರಂಜಿಸಿದರು. ಮಾಣಿಕಪ್ಪ ಗೋರನಾಳೆ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು.