ಗದಗ: ಹೋಳಿ ಹಬ್ಬ ಎಂದರೆ ಕಾಮ ದಹನ ಮಾಡಿ, ಪರಸ್ಪರ ಬಣ್ಣದೋಕುಳಿ ಆಡುವುದು ಸಾಮಾನ್ಯ. ಆದರೆ, ಶತಮಾನಗಳ ಇತಿಹಾಸ ಹೊಂದಿರುವ ನಗರದ ಕಿಲ್ಲಾ ಚಂದ್ರಸಾಲಿ ಬಡಾವಣೆಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಕಾಮ- ರತಿಯರನ್ನು ಸಾರ್ವಜನಿಕರ ಚಿನ್ನಾಭರಣಗಳಿಂದ ಅಲಂಕರಿಸಿ, ಐದು ದಿನ ವಿಶೇಷ ಪೂಜೆ ಕೈಂಕರ್ಯಗಳೊಂದಿಗೆ ಆರಾಧಿಸಲಾಗುತ್ತದೆ.
ನಗರದ ಕಿಲ್ಲಾ ಚಂದ್ರಸಾಲಿ ಬಡಾವಣೆಯಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಪ್ರತಿಷ್ಠಾಪಿಸುವ ಕಾಮ- ರತಿಯರು, ನಂಬಿದ ಭಕ್ತರನ್ನು ಕಾಯುತ್ತಾರೆ. ಮದುವೆಯಾಗದವರಿಗೆ ಕಂಕಣ ಭಾಗ್ಯ, ಮಕ್ಕಳಾಗದವರಿಗೆ ಸಂತಾನ, ನಿರುದ್ಯೋಗಿಗಳಿಗೆ ಉದ್ಯೋಗ, ದರಿದ್ರರಿಗೆ ಸಿರಿತನ ಕರುಣಿಸುವ ಕಲ್ಪವೃಕ್ಷ ಎಂಬುದು ಭಕ್ತರ ಅಚಲ ನಂಬಿಕೆ. ಸಾರ್ವಜನಿಕರ ಭಕ್ತಿಯಿಂದಾಗಿ ಇಲ್ಲಿನ ಕಾಮ- ರತಿಯರ ಪ್ರತಿಷ್ಠಾಪನೆ ಬರೋಬ್ಬರಿ 125 ವಸಂತಗಳನ್ನು ಪೂರೈಸಿದೆ ಎಂಬುದು ವಿಶೇಷವಾಗಿದೆ.
ಹೋಳಿ ಹುಣ್ಣಿಮೆಯಂದು ಪ್ರತಿಷ್ಠಾಪನೆ ಗೊಳ್ಳುವ ಕಾಮಣ್ಣ- ರತಿಯರಿಗೆ ಐದು ದಿನ ನಿತ್ಯ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತದೆ. ಮೊದಲ ಮೂರು ದಿನ ಕಾಯಿ, ಕರ್ಪೂರ, ಹಣ್ಣು, ಹೋಳಿಗೆ ನೈವೇದ್ಯ ಅರ್ಪಿಸಲಾಗುತ್ತದೆ.ಈ ವೇಳೆ ಮದುವೆಯಾಗದ ಯುವಕರು ರತಿಗೆ, ಯುವತಿಯರು ಮನ್ಮಥನ ಕೈಗೆ ಕಂಕಣ ಕಟ್ಟುತ್ತಾರೆ.ಸಂತಾನ ಭಾಗ್ಯ ಬಯಸುವವರು ಕಾಮಣ್ಣ ಕೈಗೆ ಬೆಳ್ಳಿಯ ತೊಟ್ಟಿಲು ಕಟ್ಟಿ, ಪೂಜೆ ಸಲ್ಲಿಸುತ್ತಾರೆ.
ಸಿರಿತನ ಬಯಸುವವರು 4ನೇ ದಿನ ತಮ್ಮ ಮನೆಯಲ್ಲಿರುವ ಚಿನ್ನದ ತಾಳಿಸರ, ಬಾಜುಬಂದ, ಚಪ್ಪಹಾರ, ಕಿವಿಯೋಲೆ, ಕಡಗ, ಡಾಬು,ನೆಕ್ಲೇಸ್ ಸೇರಿ ಬಗೆ ಬಗೆಯ ಚಿನ್ನ- ಬೆಳ್ಳಿಯ ಆಭರಣಗಳನ್ನು ದೇವರಿಗೆ ತೊಡಿಸುತ್ತಾರೆ. ಬಳಿಕ ಅಂದು ಸಂಜೆ ನಗರದ ಪ್ರಮುಖ ಮಾರ್ಗಗಳಲ್ಲಿ ಅದೂಟಛಿರಿಯಾಗಿ ಕಾಮ- ರತಿಯರ ಮೂರ್ತಿಗಳ ಮೆರವಣಿಗೆ ನಡೆಸಲಾಗುತ್ತದೆ. ಈ ವೇಳೆ ಸಾರ್ವಜನಿಕರು ತೊಡಿಸಿರುವ ಸುಮಾರು 18ರಿಂದ 20 ಕೆಜಿ ತೂಕದ ತರಹೇವಾರಿ ಚಿನ್ನಾಭರಣಗಳಿಂದ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಶೃಂಗರಿಸಲಾಗುತ್ತದೆ.ಝಗಮಗಿಸುವ ಬೆಳಕಿನ ಮಧ್ಯೆ ವಿವಿಧ ಬಗೆಯ ಆಭರಣಗಳಿಂದ ಅಲಂಕರಿಸಿರುವ ಕಾಮ-ರತಿಯರನ್ನು ನೋಡುವುದೇ ಕಣ್ಣಿಗೆ ಹಬ್ಬ.
152 ವರ್ಷಗಳ ಇತಿಹಾಸ: ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಿಂದ ಹೊರಸಿನಲ್ಲಿ ಹೊತ್ತು ತಂದಿದ್ದ ರತಿ- ಕಾಮಣ್ಣ ಮೂರ್ತಿಗಳಿಗೆ ಬರೊಬ್ಬರಿ 152 ವರ್ಷ ಸಂದಿವೆ. ಕಾಮ- ರತಿಯರ ಮೂರ್ತಿಗೆ ಯಾವುದೇ ಬಗೆಯ ದುರಸ್ತಿ ಆಗಬೇಕಿದ್ದರೂ, ಅದು ಕಿನ್ನಾಳ ಗ್ರಾಮದ ಮೂರ್ತಿ ತಯಾರಕರಿಂದಲೇ ಆಗಬೇಕು. ಅಲ್ಲದೇ, ಕಾಮ- ರತಿಯರ ಮೂರ್ತಿಗಳಿಗೆ 10 ವರ್ಷಗಳಿಗೊಮ್ಮೆ ಬಣ್ಣ ಹಚ್ಚಲಾಗುತ್ತದೆ ಎಂಬುದು ಸ್ಥಳೀಯರ ಹೇಳಿಕೆ.
ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷ್ ಆಡಳಿತದಿಂದ ಇಲ್ಲಿನ ಕಾಮ- ರತಿಯರ ಉತ್ಸವಕ್ಕೆ ವಾರ್ಷಿಕ 5 ರೂ. ದೇಣಿಗೆ ನೀಡಲಾಗುತ್ತಿತ್ತಂತೆ. ಅದರಂತೆ ಈಗಿನ ಸರ್ಕಾರದಿಂದಲೂ ಕಾಮ-ರತಿಯ ದೇಗುಲ ನಿರ್ಮಾಣ ಹಾಗೂ ಉತ್ಸವಕ್ಕೆ ಅನುಕೂಲವಾಗುವಂತೆ ಹೆಚ್ಚಿನ ನೆರವು ನೀಡಬೇಕು ಎಂಬುದು ಭಕ್ತರ ಮನವಿ.ಹೋಳಿ ಹುಣ್ಣಿಮೆಯಾದ ಐದನೇ ದಿನ ನಡೆಯುವ ಕಾಮ- ರತಿಯರ ಮೆರವಣಿಗೆ ಬಳಿಕ ಈ ಭಾಗದಲ್ಲಿ ರಂಗ ಪಂಚಮಿ ಅಂಗವಾಗಿ ಕಾಮ ದಹನ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಬಳಿಕ ಸಾರ್ವಜನಿಕರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಾರೆ.
ಕಾಮ- ರತಿಯರಿಗೆ ಚಿನ್ನಾಭರಣ ತೊಡಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬುದು ಜನರ ನಂಬಿಕೆ. ಹೀಗಾಗಿ ಶತಮಾನಗಳಿಂದ ಸಂಪ್ರದಾಯ ಆಚರಣೆಯಲ್ಲಿದೆ. ಸರ್ಕಾರಿ ಕಾಮ- ರತಿಯರ ಕೊರಳಲ್ಲಿ ಕೇಜಿಗಟ್ಟಲೆ ಚಿನ್ನಾಭರಣವನ್ನು ಮೆರವಣಿಗೆ ಬಳಿಕ ವಾರಸುದಾರರಿಗೆ ಮರಳಿಸಲಾಗುತ್ತದೆ.
– ಕೃಷ್ಣಾಸಾ ಲದ್ವಾ, ಸ್ಥಳೀಯ ನಿವಾಸಿ
– ವೀರೇಂದ್ರ ನಾಗಲದಿನ್ನಿ