Advertisement

ಜ್ಞಾನದೇಗುಲದಂತಿದೆ ಸಾರ್ವಜನಿಕ ಗ್ರಂಥಾಲಯ

03:17 PM Nov 09, 2019 | Suhan S |

ದಾಂಡೇಲಿ: ಒಂದು ಊರಿನ ಪ್ರಗತಿಯಲ್ಲಿ ಅಲ್ಲಿನ ಸಾರ್ವಜನಿಕ ಗ್ರಂಥಾಲಯಗಳ ಪಾತ್ರ ಅವಿಸ್ಮರಣೀಯ. ಅದೇಷ್ಟೋ ಮಕ್ಕಳು, ವಿದ್ಯಾರ್ಥಿಗಳು ಬಿಡುವಿನ ವೇಳೆ ಸಾರ್ವಜನಿಕ ಗ್ರಂಥಾಲಯದ ಪ್ರಯೋಜನ ಪಡೆದು ಜೀವನದ ಮಹತ್ವಾಂಕ್ಷೆ ಈಡೇರಿಸಿಕೊಂಡು ಉಜ್ವಲ ಬದುಕಿನೆಡೆಗೆ ಹಜ್ಜೆಯಿಟ್ಟಿರುವ ಉದಾಹರಣೆಗಳು ಸಾಕಷ್ಟಿವೆ.

Advertisement

ಇಂತಹ ಸ್ಮರಣೀಯ ಸೇವೆ ನೀಡುವ ಹೆಮ್ಮೆಯ ಸಾರ್ವಜನಿಕ ಗ್ರಂಥಾಲಯ ದಾಂಡೇಲಿಯಲ್ಲಿದೆ. ಹಲವಾರು ಏಳು-ಬೀಳುಗಳ ನಡುವೆ ವಿಶಿಷ್ಟ ರೀತಿಯ ಸ್ವಂತಿಕೆ ಮೂಲಕ ಗಟ್ಟಿತನದ ಬೇರೂರಿ ತನ್ನದೇ ಆದ ಸಾಮ್ರಾಜ್ಯ ಕಟ್ಟಿ ದಾಂಡೇಲಿಗರ ಒಲುಮೆಗೆ ಪಾತ್ರವಾಗಿದೆ ದಾಂಡೇಲಿ ಗ್ರಂಥಾಲಯ. ಬಹುಜನರ ಬೇಡಿಕೆಯಂತೆ 1984ರಲ್ಲಿ ಆರಂಭಗೊಂಡ ಈ ಗ್ರಂಥಾಲಯ ಆರಂಭದ 24 ವರ್ಷ ನಗರಸಭೆಯ ಖಾಲಿ ವಸತಿಗೃಹವೊಂದರಲ್ಲೆ ಸೇವೆ ನೀಡಿ ಗಮನ ಸೆಳೆದಿದೆ. ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಓದುಗರಿಗೆ ತೊಂದರೆಯಾಗದಂತೆ ಸೇವೆ ನೀಡಿರುವುದು ಶ್ಲಾಘನೀಯ.

ಅವರಿವರ ಕಟ್ಟಡದಲ್ಲಿ ಸೇವೆ ನೀಡುತ್ತಿದ್ದ ಈ ಗ್ರಂಥಾಲಯಕ್ಕೆ ಜಿಲ್ಲಾ ಗ್ರಂಥಾಲಯ, ಸ್ಥಳೀಯ ನಗರಸಭೆ ಹಾಗೂ ಜನಪ್ರತಿನಿಧಿಗಳ ಸರ್ವ ಸಹಕಾರದಲ್ಲಿ 2008ರಲ್ಲಿ ಸ್ವಂತ ಜಾಗ ನೀಡಿದ ಪರಿಣಾಮವಾಗಿ ನಗರದ ಸೋಮಾನಿ ವೃತ್ತದ ಬಳಿ ವಿಶಾಲವಾದ 464.50 ಚ.ಮೀ ವಿಸ್ತೀರ್ಣದಲ್ಲಿ ಮನೋಜ್ಞ ಗ್ರಂಥಾಲಯ ನಿರ್ಮಾಣಗೊಂಡು ಎಲ್ಲರ ಪ್ರೀತಿಗೆ ಪಾತ್ರವಾಗಿದೆ.

ಜಿಲ್ಲೆಯಲ್ಲೆ ವಿಶಾಲ ಗ್ರಂಥಾಲಯ: ಇಡೀ ಉತ್ತರಕನ್ನಡ ಜಿಲ್ಲೆಯಲ್ಲೆ ವಿಶಾಲ ಸಾರ್ವಜನಿಕ ಗ್ರಂಥಾಲಯ ಇಲ್ಲಿಯದು. 60 ಆಸನವುಳ್ಳ ಸುಸಜ್ಜಿತ ಗ್ರಂಥಾಲಯದಲ್ಲಿ ಈಗಾಗಲೆ 1378 ಸದಸ್ಯರಿರುವುದು ವಿಶೇಷ. ರೂ: 212/- ಸದಸ್ಯತ್ವ ಶುಲ್ಕದೊಂದಿಗೆ ಅಜೀವ ಸದಸ್ಯರಾಗಲು ಇಲ್ಲಿ ಅವಕಾಶವಿದ್ದು, ಉಳಿದಂತೆ ರೂ:112 ಪಾವತಿಸಿ ಅಜೀವ ಓದುಗರಾಗಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೆ ಕೇಂದ್ರ ಗ್ರಂಥಾಲಯದಿಂದ 30691 ವಿವಿಧ ಪುಸ್ತಕಗಳು, ಗ್ರಂಥಗಳು ಇಲ್ಲಿ ಓದುಗರ ಜ್ಞಾನ ವೃದ್ಧಿಸಲು ನೆರವಾಗುತ್ತಿವೆ. ಪ್ರತಿದಿನ 17 ದಿನ ಪತ್ರಿಕೆಗಳು, 10 ವಾರ ಪತ್ರಿಕೆಗಳು ಮತ್ತು 5 ಮಾಸಪತ್ರಿಕೆ ತರಿಸಲಾಗುತ್ತಿದೆ.

ಮೂಲಸೌಕರ್ಯಗಳ ಅವಶ್ಯಕತೆ: ಎಲ್ಲವೂ ಇದ್ದರೂ ಇನ್ನೂ ಕೆಲವೊಂದು ಮೂಲಸೌಕರ್ಯಗಳ ಅವಶ್ಯಕತೆ ಇಲ್ಲಿದೆ. ಬಹುಮುಖ್ಯವಾಗಿ ಕುಡಿಯುವ ನೀರು, ಶೌಚಾಲಯ ಹಾಗೂ ಗ್ರಂಥಾಲಯದ ಮುಂಭಾಗದ ಖಾಲಿ ಜಾಗದಲ್ಲಿ ಉದ್ಯಾನವನ ನಿರ್ಮಾಣದ ಅವಶ್ಯಕತೆ ಇದೆ. ಈಗಾಗಲೆ ಸಿಎಸ್‌ಆರ್‌ ಯೋಜನೆ ಮೂಲಕ ಸಾರ್ವಜನಿಕ ವಲಯಗಳಿಗೆ ಲಕ್ಷಗಟ್ಟಲೆ ಹಣ ಸುರಿಯುತ್ತಿರುವ ವೆಸ್‌ ಕೋಸ್ಟ್‌ ಪೇಪರ್‌ ಮಿಲ್‌ ಇಲ್ಲೊಂದು ಶುದ್ಧ ನೀರಿನ ಘಟಕ, ಶೌಚಾಲಯ ಹಾಗೂ ಗಾರ್ಡನ್‌ ಸ್ಥಾಪಿಸಿಕೊಡಬೇಕೆಂಬುದು ಓದುಗರಾದ್ದಾಗಿದೆ. ಈಗಾಗಲೆ ಕಾಗದ ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿಯವರಿಂದ ಸಕರಾತ್ಮಕ ಸ್ಪಂದನೆ ದೊರೆತಿದೆ ಎನ್ನಲಾಗಿದೆ.

Advertisement

ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಅಧಿಕಾರಿಗಳ ಮಾನವೀಯ ಸ್ಪಂದನೆ ಮತ್ತು ಧನಾತ್ಮಕ ಅಂಶಗಳು ಬಹುಮುಖ್ಯವಾಗಿರುತ್ತದೆ. ಮನೆಯ ಕೆಲಸವೆಂಬಂತೆ ಶ್ರದ್ಧೆಯಿಂದ ದುಡಿಯುವ ಗ್ರಂಥಾಲಯ ಸಹಾಯಕ ಶಿವಪ್ಪ ಗುಡಗುಡಿಯವರ ಕರ್ತವ್ಯ ನಿಷ್ಠೆ ಮತ್ತು ಸಮಾಜಮುಖೀ ಸನ್ನಡತೆ ಈ ಗ್ರಂಥಾಲಯಕ್ಕೆ ವಿಶೇಷ ಶೋಭೆ ತಂದಿದೆ. ಇನ್ನೂ ಸಹಾಯಕಿ ರೇಣುಕಾ ಬೆಳ್ಳಿಗಟ್ಟಿ ಮಕ್ಕಳನ್ನು ಪೋಷಿಸಿದಂತೆ ಗ್ರಂಥಾಲಯವನ್ನು ಪೋಷಿಸಿಕೊಂಡು ಬರುತ್ತಿದ್ದಾರೆ.

ನಮ್ಮ ಗ್ರಂಥಾಲಯ ಇಡೀ ಜಿಲ್ಲೆಯಲ್ಲೆ ಜಬರ್ದಸ್ತು. ಮನಸ್ಸಿಗೆ ಮುದ ನೀಡುವುದರ ಜೊತೆಗೆ ಎಲ್ಲಿಯೂ ಸಿಗದಿರುವ ಮಹತ್ವದ ದಾಖಲೆ ಗ್ರಂಥಗಳು ಇಲ್ಲಿದೆ. ಹಾಗಾಗಿ ಈ ಗ್ರಂಥಾಲಯ ನಮಗೆ ದೇವಾಲಯವಿದ್ದಂತೆ.  ಸಂಜಯ್‌ ಬಾಗಡೆ, ಓದುಗ

 

-ಸಂದೇಶ್‌ ಎಸ್‌. ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next