Advertisement

ಏರುತ್ತಲೇ ಇದೆ ಕೋವಿಡ್ ಸೋಂಕು ; ಸಾರ್ವಜನಿಕರಿಗೆ ಇನ್ನೂ ಸಿಕ್ಕಿಲ್ಲ ಉಚಿತ “ಆಯುಷ್‌’ಔಷಧ

09:49 AM Jun 06, 2020 | mahesh |

ಮಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವತಿಯಿಂದ “ಆಯುಷ್‌’ ಇಲಾಖೆ ಮೂಲಕ ಸಾರ್ವಜನಿಕರಿಗೆ ರೋಗ ನಿರೋಧಕ ಶಕ್ತಿ
ವೃದ್ಧಿಸುವ ಔಷಧ ವಿತರಿಸುವುದಾಗಿ ಹೇಳಿದ್ದರೂ ದ.ಕ. ಸಹಿತ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇನ್ನೂ ಲಭ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಪ್ರಸ್ತುತ “ಕೋವಿಡ್ ವಾರಿಯರ್’ಗಳಾಗಿರುವ ಆಶಾ ಕಾರ್ಯಕರ್ತೆಯರಿಗೆ ಮಾತ್ರ ಔಷಧ ವಿತರಿಸಲಾಗಿದೆ.

Advertisement

ಪೊಲೀಸರಿಗೆ ಶೀಘ್ರದಲ್ಲೇ ಈ ಔಷಧ ವಿತರಣೆ ಯಾಗಲಿದೆ. ಆದರೆ ಸಾರ್ವ ಜನಿಕರಿಗೆ ವಿತರಿಸಲು ಔಷಧದ ಕೊರತೆಯಿದೆ. ಸದ್ಯಕ್ಕೆ ಪೂರೈಕೆ ಯಾಗಿರುವ ಔಷಧವನ್ನು ಆಯುಷ್‌ ರಾಜ್ಯ ಕಚೇರಿಯಿಂದ ಜಿಲ್ಲಾವಾರು ಹಂಚಿಕೆ ಮಾಡಿ ರವಾನಿಸುತ್ತಿದ್ದು, ಜಿಲ್ಲೆಗೆ ಸದ್ಯಕ್ಕೆ 5,000 ಆಯುಷ್‌ ಕಿಟ್‌ಗಳು ಬರಲಿವೆ. ಜಿಲ್ಲೆಯ ಕೆಲವು ಖಾಸಗಿ ಆಯುರ್ವೇದ ಸಂಸ್ಥೆಗಳಿಂದಲೂ ಔಷಧ ಪಡೆದು ಕೊಳ್ಳಲು ಆಯುಷ್‌ ಇಲಾಖೆ ನಿರ್ಧರಿಸಿದೆ. ಜಿಲ್ಲೆಯಲ್ಲಿ ಕೋವಿಡ್ ವಾರಿಯರ್ ಗಳಾಗಿರುವವರೇ ಸುಮಾರು 25,000 ಮಂದಿಯಿದ್ದಾರೆ. ಜಿಲ್ಲೆಯ ಜನಸಂಖ್ಯೆ 20 ಲಕ್ಷಕ್ಕೂ ಅಧಿಕವಿದೆ. ಹಾಗಾಗಿ, ಮತ್ತಷ್ಟು ಔಷಧಕ್ಕಾಗಿ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

2 ಗ್ರಾಮಗಳಲ್ಲಿ ವಿತರಣೆ
ಬಂಟ್ವಾಳ ತಾ|ನ ಬಾಳೆಪುಣಿ ಗ್ರಾ.ಪಂ.ನ ಬಾಳೆಪುಣಿ ಮತ್ತು ಕೈರಂಗಳ ಗ್ರಾಮಗಳ ಸುಮಾರು 10,000 ಮಂದಿ ಗ್ರಾಮಸ್ಥರಿಗೆ ಉಚಿತವಾಗಿ ಹೋಮಿಯೋಪತಿ ಔಷಧ ವಿತರಣಾ ಪ್ರಕ್ರಿಯೆ ಆರಂಭಗೊಂಡಿದೆ. ಇದು ಗ್ರಾ.ಪಂ., ಜನ ಶಿಕ್ಷಣ ಟ್ರಸ್ಟ್‌, ಆಯುಷ್‌ ಇಲಾಖೆ ಮತ್ತು ದೇರಳ ಕಟ್ಟೆಯ ಫಾದರ್‌ ಮುಲ್ಲರ್‌ ಹೋಮಿಯೋಪತಿ ಕಾಲೇಜಿನ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ನಡೆಯುತ್ತಿದೆ. ಇತರ ಗ್ರಾಮಗಳಲ್ಲಿಯೂ ವಿವಿಧ
ಸಂಘ-ಸಂಸ್ಥೆ ಗಳು ಇದೇ ರೀತಿ ಔಷಧ ವಿತರಣೆ ಕಾರ್ಯದಲ್ಲಿ ಕೈ ಜೋಡಿಸಿದರೆ ಅನುಕೂಲವಾಗಬಹುದು ಎನ್ನುತ್ತಾರೆ ಜಿಲ್ಲೆ ಆಯುಷ್‌ ಅಧಿಕಾರಿಗಳು.

ದಾಸ್ತಾನು ಬಂದರೆ ಪೂರೈಕೆ
ಸದ್ಯಕ್ಕೆ ಹೋಮಿಯೋಪತಿ, ಆಯುಷ್‌, ಯುನಾನಿ ಔಷಧಗಳ ಪೂರೈಕೆಗೆ ತಕ್ಕಂತೆ ಆಯಾ ಜಿಲ್ಲೆಗಳಿಗೆ ಕಳುಹಿಸಿ ಕೊಡಲಾಗುತ್ತಿದೆ. ಹೆಚ್ಚಿನ ಜಿಲ್ಲೆ ಗಳಲ್ಲಿ ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರು ಸಹಿತ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ವಿತರಿಸ ಲಾಗುತ್ತಿದೆ. ಮುಂದಿನ ಹಂತದಲ್ಲಿ ಸಾರ್ವಜನಿಕರಿಗೂ ಉಚಿತವಾಗಿ ವಿತರಣೆ ಯಾಗಲಿದೆ ಎನ್ನುತ್ತಾರೆ ಆಯುಷ್‌ ಇಲಾಖೆ ಬೆಂಗಳೂರಿನ ಆಯುಕ್ತರ ಕಚೇರಿ ಅಧಿಕಾರಿಗಳು.

ಆಯುಷ್‌ ಕಿಟ್‌ನಲ್ಲೇನಿದೆ?
ಕೋವಿಡ್ ಸಂದರ್ಭದಲ್ಲಿ ಇಲಾಖೆ ವತಿಯಿಂದ ನೀಡುವ ಆಯುಷ್‌ ಕಿಟ್‌ನಲ್ಲಿ ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ ಔಷಧಗಳಿರುತ್ತವೆ. ಅಂದರೆ, ಆಯುರ್ವೇದ ಮತ್ತು ಹೋಮಿಯೋಪತಿಯ ಮಾತ್ರೆಗಳು ಹಾಗೂ ಮೂಗಿಗೆ ಹಾಕುವ ಯುನಾನಿ ಡ್ರಾಪ್‌ ಒಳಗೊಂಡಿರುತ್ತದೆ.

Advertisement

ಸಾರ್ವಜನಿಕರಿಗೆ ಸದ್ಯಕ್ಕಿಲ್ಲ
ಕೇಂದ್ರ ಸರಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪತಿ, ಆಯುರ್ವೇದ ಮತ್ತು ಯುನಾನಿ ಔಷಧ ವಿತರಿಸಲು ಸಿದ್ಧತೆ ನಡೆಸಲಾಗಿದೆ. ಆದರೆ, ಔಷಧದ ಕೊರತೆಯಿಂದಾಗಿ ಸದ್ಯಕ್ಕೆ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವುದು ಅಸಾಧ್ಯವಾಗಿದೆ. ಖಾಸಗಿ ಆಯುರ್ವೇದ ಸಂಸ್ಥೆಗಳ ಸಹಾಯದಿಂದ ಪೊಲೀಸರು ಹಾಗೂ ಇತರ ಕೋವಿಡ್ ವಾರಿಯರ್ಗಳಿಗೂ ವಿತರಿಸಲಾಗವುದು. ಆಯುಷ್‌ ಔಷಧವಲ್ಲದೆ ಸಾರ್ವಜನಿಕರು ಮನೆಗಳಲ್ಲಿಯೇ ಮಾಡಬಹುದಾದ ಹಲವು ಔಷಧಗಳಿವೆ. ಈ ಬಗ್ಗೆಯೂ ಆಯುಷ್‌ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ ಇಲಾಖೆ ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದು.
 -ಡಾ| ಮಹಮ್ಮದ್‌ ಇಕ್ಬಾಲ್‌, ಜಿಲ್ಲಾ “ಆಯುಷ್‌’ ಅಧಿಕಾರಿ, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next