Advertisement

ಪಬ್‌ನವರೇ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದರು

01:10 AM Jul 27, 2022 | Team Udayavani |

ಮಂಗಳೂರು: ನಗರದ ಪಬ್‌ವೊಂದಕ್ಕೆ ಸೋಮವಾರ ರಾತ್ರಿ ಸಂಘಟನೆಯೊಂದರ ಸದಸ್ಯರು ತೆರಳಿದ್ದ ಸಂದರ್ಭದಲ್ಲಿ ಪಬ್‌ನವರೇ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದರು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

Advertisement

ರಾತ್ರಿ 9 ಗಂಟೆಯ ಸುಮಾರಿಗೆ ಸಂಘ ಟನೆಯೊಂದರ ಸದಸ್ಯರೆಂದು ಹೇಳಿಕೊಂಡ 5-6 ಮಂದಿ ರೆಸ್ಟೋರೆಂಟ್‌ ಕಂ ಪಬ್‌ವೊಂದಕ್ಕೆ ತೆರಳಿ ಬೌನ್ಸರ್‌ನ ಜತೆಗೆ ಮಾತನಾಡಿ, “ಅಪ್ರಾಪ್ತ ವಯಸ್ಕ ಬಾಲಕ ಬಾಲಕಿಯರಿಗೆ ಮದ್ಯ ಪೂರೈಕೆ ಮಾಡುತ್ತಿದ್ದೀರಿ. ಇದರ ಬಗ್ಗೆ ಹಲವು ಬಾರಿ ಹೇಳಿದರೂ ನಿಲ್ಲಿಸಿಲ್ಲ. ಅಪ್ರಾಪ್ತ ವಯಸ್ಕರನ್ನು ಹೊರಗೆ ಕಳುಹಿಸುವಂತೆ ಮ್ಯಾನೇಜರ್‌ಗೆ ತಿಳಿಸಿ’ ಎಂದು ಹೇಳಿದರು. ಅದರಂತೆ ಮ್ಯಾನೇಜರ್‌ ಪಾರ್ಟಿಗೆ ಬಂದಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದಾರೆ ಎಂದು ಆಯುಕ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ಮಾತನಾಡಿಲ್ಲ
ಸಂಘಟನೆಯವರು ಪಬ್‌ನ ಬೌನ್ಸರ್‌ ಜತೆ ಮಾತ್ರ ಮಾತನಾಡಿದ್ದಾರೆ. ಗ್ರಾಹಕರಾಗಿದ್ದ ವಿದ್ಯಾರ್ಥಿಗಳ ಜತೆ ಮಾತನಾಡಿಲ್ಲ. ಅಲ್ಲದೆ ಇತ್ತೀಚೆಗೆ ನಡೆದ ಚುಂಬನ ಪ್ರಕರಣದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೇ ಪಬ್‌ನಲ್ಲಿ ಇದ್ದರು ಎಂಬುದು ಕೂಡ ಸರಿಯಲ್ಲ. ಆ ವಿದ್ಯಾರ್ಥಿ ಗಳಿಗೂ ಪಬ್‌ನಲ್ಲಿದ್ದ ವಿದ್ಯಾರ್ಥಿಗಳಿಗೂ ಸಂಬಂಧವಿಲ್ಲ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಎಂಟು ಮಂದಿ ಅಪ್ರಾಪ್ತ ವಯಸ್ಕರು
ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪೈಕಿ 18 ಮಂದಿಯನ್ನು ಗುರುತಿಸಲಾಗಿದ್ದು ಅವರಲ್ಲಿ 8 ಮಂದಿ ಅಪ್ರಾಪ್ತ ವಯಸ್ಕರು. ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಅಬಕಾರಿ ಇಲಾಖೆಗೆಗೆ ವರದಿ ನೀಡಲಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಅಕ್ರಮ ಚಟುವಟಿಕೆಗೆ
ಕಡಿವಾಣ: ವಿಎಚ್‌ಪಿ ಆಗ್ರಹ
ಮಂಗಳೂರು ನಗರದಲ್ಲಿ ಪಬ್‌, ಡ್ಯಾನ್ಸ್‌ ಬಾರ್‌ಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಪಾರ್ಟಿಯ ಹೆಸರಿನಲ್ಲಿ ಡ್ರಗ್ಸ್‌, ಗಾಂಜಾ ಸೇವನೆಯಾಗುತ್ತಿದೆ. ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಯುವಕ ಯುವತಿಯರು ಬಲಿಯಾಗುತ್ತಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಪಾರ್ಟಿ ಹೆಸರಿನಲ್ಲಿ ತಡರಾತ್ರಿಯವರೆಗೆ ಪಬ್‌ಗಳನ್ನು ತೆರೆದು ಮೋಜು ಮಸ್ತಿ ನಡೆಸಲಾಗುತ್ತಿದೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಪೊಲೀಸರು ಕಡಿವಾಣ ಹಾಕಬೇಕು ಎಂದು ವಿಶ್ವಹಿಂದೂ ಪರಿಷತ್‌ ಬಜರಂಗದಳ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದೆ.

Advertisement

ಪಬ್‌ನಲ್ಲಿ ನಡೆದಿರುವುದು ಬ್ಲ್ಯಾಕ್ ಮೇಲ್ : ಖಾದರ್‌
ಮಂಗಳೂರು: ಮಂಗಳೂರಿನ ಪಬ್‌ನಲ್ಲಿ ನಡೆದಿರುವುದು ಬ್ಲ್ಯಾಕ್ ಮೇಲ್ ಮತ್ತು ಹಫ್ತಾ ವಸೂಲಿ ಯತ್ನ. ಇಂತಹ ಘಟನೆಗಳು ಬ್ರ್ಯಾಂಡ್ ಮಂಗಳೂರು ವರ್ಚಸ್ಸಿಗೆ ಚ್ಯುತಿ ತರುತ್ತವೆ. ಈ ಬಗ್ಗೆ ಪೊಲೀಸ್‌ ಇಲಾಖೆ ಕಠಿನ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಕೋವಿಡ್‌ನಿಂದಾಗಿ ವ್ಯಾಪಾರಿಗಳು, ಹೊಟೇಲ್‌ನವರು ಕಂಗೆಟ್ಟಿದ್ದು, ಈಗಷ್ಟೇ ವ್ಯಾಪಾರ ಏರುಗತಿ ಕಾಣುತ್ತಿದೆ. ಸರಕಾರದಿಂದ ಲೈಸನ್ಸ್‌ ಪಡೆದು, ತೆರಿಗೆ ಕಟ್ಟಿ, ಜಿಎಸ್‌ಟಿ ಕಟ್ಟಿ, ನೆಮ್ಮದಿಯಿಂದ ವ್ಯಾಪಾರ ಮಾಡಬೇಕು ಎನ್ನುವಷ್ಟರಲ್ಲಿ ಇಂಥ ಕಿಡಿಗೇಡಿಗಳ ಹಫ್ತಾ ವಸೂಲಿ ಕಾಟ ಆರಂಭವಾಗಿದೆ ಎಂದರು.

ಮಕ್ಕಳು ತಪ್ಪು ಮಾಡಿದರೆ ಅದನ್ನು ಹೆತ್ತವರು ನೋಡಿಕೊಳ್ಳುತ್ತಾರೆ. ಯಾರ್ಯಾರ ಮಕ್ಕಳನ್ನು ಗದರಿಸಲು ಇವರಿಗೆ ಅಧಿಕಾರ ನೀಡಿದ್ದು ಯಾರು? ಮಂಗಳೂರಿನಲ್ಲಿ ಶಾಲೆ ಮಕ್ಕಳು ವೀಡಿಯೋ ಗೇಮ್‌ಗೆ ಹೋಗುತ್ತಿರುವುದು ಈ ಸಂಘಟನೆಯವರ ಕಣ್ಣಿಗೆ ಕಾಣುವುದಿಲ್ಲವೇ? ಅನೈತಿಕ ಮಸಾಜ್‌ ಪಾರ್ಲರ್‌ಗಳ ಎದುರು ಇವರು ಯಾಕೆ ಧರಣಿ ಮಾಡುವುದಿಲ್ಲ ಎಂದರು.

ಈ ಹಿಂದೆ ಮುಖ್ಯಮಂತ್ರಿ “ಆಕ್ಷನ್‌ ರಿಯಾಕ್ಷನ್‌’ ಹೇಳಿಕೆ ನೀಡಿದ್ದು, ಅದೇ ಈ ಯುವಕರ ತಲೆಯಲ್ಲಿ ಉಳಿದುಕೊಂಡುಬಿಟ್ಟಿದೆ.

ಹಾಗಾಗಿಯೇ ಪಬ್‌ಗ ಹೋಗಿ ಗಲಾಟೆ ಮಾಡಿದವರು ಅದನ್ನು “ಆಕ್ಷನ್‌ಗೆ ರಿಯಾಕ್ಷನ್‌’ ಎಂದು ಹೇಳಿದ್ದಾರೆ. ಇದಕ್ಕೆ ಸಿಎಂ ಅವರೇ ನೇರ ಹೊಣೆ ಎಂದರು.

ಮುಖಂಡರಾದ ಸಂತೋಷ್‌ ಕುಮಾರ್‌ ಶೆಟ್ಟಿ, ಸದಾಶಿವ ಉಳ್ಳಾಲ, ಮುಹಮ್ಮದ್‌ ಮೋನು, ಮುಸ್ತಾಫಾ, ಸುಹೇಲ್‌ ಕಂದಕ್‌, ರಮೇಶ್‌ ಶೆಟ್ಟಿ ಬೊಳಿಯಾರ್‌, ರೋಶನ್‌ ಶೆಟ್ಟಿ ಉಪಸ್ಥಿತರಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next