ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಹೊಂಡಾ ಆಕ್ಟೀವಾ ಸವಾರನೊಬ್ಬ ಪಿಎಸ್‌ಐಗೆ ಡಿಕ್ಕಿಹೊಡೆದಿದ್ದಾನೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಪ್ರೊಬೆಷನರಿ ಪಿಎಸ್‌ಐ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಗಲಗುಂಟೆಯ ಆಚಾರ್ಯ ಕಾಲೇಜು ಬಳಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.
ಸೋಲದೇವನಹಳ್ಳಿಯ ಪ್ರೊಬೆಷನರಿ ಪಿಎಸ್‌ಐ ನವೀನ್ ಕುಮಾರ್ ಗಾಯಗೊಂಡವರು. ಸದ್ಯ ಹಾಸೆಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಬಲಗಾಲಿಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು, ಸೋಮವಾರ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಹಾಗೆಯೇ ನವೀನ್ ಕುಮಾರ್‌ಗೆ ಡಿಕ್ಕಿಹೊಡೆದ ಕಮ್ಮಗೊಂಡನಹಳ್ಳಿ ನಿವಾಸಿ ಕಾಲ್‌ಸೆಂಟರ್ ಉದ್ಯೋಗಿ ಪುನೀತ್‌ರಾವ್‌ಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸೋಲದೇವನಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಜುಲೈ 29ರಂದು ರಾತ್ರಿಪಾಳಿಯಲ್ಲಿದ್ದ ಪಿಎಸ್‌ಐ ನವೀನ್‌ಕುಮಾರ್ ತಮ್ಮ ಇತರೆ ಸಿಬ್ಬಂದಿ ಜತೆ ಆಚಾರ್ಯ ಕಾಲೇಜು ಬಳಿ ನಾಕಬಂದಿ ಹಾಕಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಇದೇ ವೇಳೆ ಆಚಾರ್ಯ ಕಾಲೇಜು ಬಳಿಯ ಸ್ನೇಹಿತನನ್ನು ಭೇಟಿಯಾಗಿ ವಾಪಸ್ ಹೋಗುವಾಗ ಪೊಲೀಸರನ್ನು ಕಂಡ ಪುನೀತ್ ಗಾಬರಿಗೊಂಡು ಮುಂದೆ ನುಗ್ಗಲು ಯತ್ನಿಸಿದ್ದಾನೆ. ಇದಕ್ಕೆ ಪೊಲೀಸರು ಅಡ್ಡಿ ಪಡಿಸಿದಾಗ ಏಕಾಏಕಿ ಬಲಗಡೆ ಬ್ಯಾರಿಕೇಡ್ ಹಾಕಿಕೊಂಡು ನಿಂತಿದ್ದ ಪಿಎಸ್‌ಐ ನವೀನ್‌ಕುಮಾರ್‌ಗೆ ಡಿಕ್ಕಿಯೊಡೆದಿದ್ದಾನೆ.
ಪರಿಣಾಮ ಪಿಎಸ್‌ಐ ನವೀನ್‌ಕುಮಾರ್ ಬಲಗಾಲಿನ ಮಂಡಿಯ ಕೆಳ ಭಾಗಕ್ಕೆ ಬಲವಾದ ಪೆಟ್ಟು ಬಿದಿದ್ದು, ಕೂಡಲೇ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಗಂಭೀರವಾಗಿ ಪೆಟ್ಟು ಬಿದಿದ್ದರಿಂದ ಸೋಮವಾರ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇತ್ತ ಪುನೀತ್‌ರಾವ್ ವಿರುದ್ಧ ಜಾಲಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಪುನೀತ್‌ರಾವ್ ಮದ್ಯ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಈತ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಬಂಧಿಸಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.