ಅಫಜಲಪುರ: ತಾಲೂಕಿನ ಹವಳಗಾದಲ್ಲಿರುವ ರೇಣುಕಾ ಸಕ್ಕರೆ ಕಾರ್ಖಾನೆ ಕಬ್ಬಿಗೆ 3100 ರೂ. ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರ ರೈತರು ಮಾಡುತ್ತಿರುವ ಧರಣಿ ಸತ್ಯಾಗ್ರಹ 8ನೇ ದಿನಕ್ಕೆ ಕಾಲಿಟ್ಟಿದೆ.
ತಾಲೂಕಿನ ಹವಳಗಾದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಚಿನ್ಮಯಗಿರಿ ಸಿದ್ದರಾಮ ಶಿವಾಚಾರ್ಯರು ಭೇಟಿ ನೀಡಿ ಧರಣಿಗೆ ಬೆಂಬಲ ನೀಡಿ ಮಾತನಾಡಿ, ಸರ್ಕಾರಗಳು ರೈತ ಪರವಾದ ಯೋಜನೆಗಳನ್ನು ತರುತ್ತೇವೆ, ನಾವು ರೈತರೊಂದಿಗೆ ಇದ್ದೇವೆ ಎಂದು ಹೇಳುತ್ತವೆ. ಆದರೆ ನಮ್ಮ ಸಮಸ್ಯೆಗೆ ಯಾರು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿಕರಣ ಮಾಡಿ ಖಾಸಗಿ ಕಾರ್ಖಾನೆಗಳಿಗೆ ಪರಮಾಧಿಕಾರ ನೀಡಿದ್ದರಿಂದ ಕಾರ್ಖಾನೆಯವರು ಮನಸ್ಸಿಗೆ ಬಂದ ಹಾಗೆ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ರೈತರು ಬೆಳೆದ ಬೆಳೆಯನ್ನು ಕಡಿಮೆ ಬೆಲೆಗೆ ಖರೀದಿಸಿ, ನಂತರ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ಮಾತನಾಡಿ, ಬೇಡಿಕೆಗೆ ಸಂಬಂಧಪಟ್ಟವರು ಸ್ಪಂದಿಸುವ ವರೆಗೂ ಧರಣಿ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ರೈತರಾದ ಮಲ್ಲು ಬಳೂರ್ಗಿ, ಪರೇಪ್ಪ ಬಳೂರ್ಗಿ, ಮಲ್ಲು ಸೋಲಾಪುರ, ಗೌಡಪ್ಪಗೌಡ ಪಾಟೀಲ, ಚನ್ನಬಸಯ್ಯ
ಹಿರೇಮಠ, ಡಾ| ಎಂ.ಎಸ್ ಜೋಗದ, ಮಾಹಾಂತಗೌಡ ಪಾಟೀಲ ಹಾಗೂ ಮತ್ತಿತರ ರೈತರು ಇದ್ದರು.