Advertisement

ಗೋವುಗಳ ರಕ್ಷಣೆ ಅಗತ್ಯ: ಪೇಜಾವರ ಶ್ರೀ

11:41 AM Jul 10, 2018 | Team Udayavani |

ಹಟ್ಟಿ ಚಿನ್ನದ ಗಣಿ: ಹಿಂದೂ ಧರ್ಮ ಸಂಸ್ಕೃತಿ ಉಳಿಯಬೇಕಾದರೆ ಹಿಂದೂಗಳೆಲ್ಲ ಒಗ್ಗಟ್ಟಾಗುವುದು ಮತ್ತು ಗೋವುಗಳ ರಕ್ಷಣೆ ಅಗತ್ಯವಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ನುಡಿದರು.

Advertisement

ಪಟ್ಟಣದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ರವಿವಾರ ನಡೆದ ಶ್ರೀಗಳ ಶೋಭಾಯಾತ್ರೆ ಹಾಗೂ ಪುರ ಪ್ರವೇಶ ಕಾರ್ಯಕ್ರಮದಲ್ಲಿ ಪೂಜ್ಯರು ಆಶೀರ್ವಚನ ನೀಡಿದರು.

ಹಿಂದೂಗಳೆಲ್ಲ ಒಗ್ಗಟ್ಟಾಗಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೋಯ್ಯೋಣ. ಹೃದಯ ಮಂದಿರದಲ್ಲಿ ಭಗವಂತ ನೆಲೆಸಿದ್ದಾನೆ. ಜೀವನದಲ್ಲಿ ದುರ್ಬಲರ ಸೇವೆ ಮಾಡುವುದು ನಾಗರಿಕನಾದವರ ಕರ್ತವ್ಯವಾಗಿದೆ. ಜನರ ಸೇವೆ ದೇವರಿಗೆ ಕೊಡುವ ಕರವಾಗಿದೆ ಎಂದರು. 

67 ವರ್ಷಗಳ ಹಿಂದೆ ಹಟ್ಟಿ ಚಿನ್ನದ ಗಣಿಗೆ ತಾವು ಆಗಮಿಸಿದ್ದು ಕೃಷ್ಣನ ಲೀಲೆಯಂತೆ ಮತ್ತೂಮ್ಮೆ ಚಿನ್ನದ ನಾಡಿಗೆ ಬಂದಿದ್ದು ಅತೀವ ಸಂತಸ ತಂದಿದೆ. ದೇಶದಲ್ಲಿಯೇ ಚಿನ್ನದ ಉತ್ಪಾದನೆಯಲ್ಲಿ ಏಕಸ್ವಾಮ್ಯತೆ ಸಾಧಿಸಲು ಕಾರಣೀಕರ್ತರಾದ ಕಾರ್ಮಿಕರ ಬದುಕು ಸುಖ-ಸಮೃದ್ಧಿಯಿಂದ ಸಾಗಲಿ ಎಂದು ಆಶಿಸಿದರು.
 
ಮರಣಾನಂತರ ನೇತ್ರ ಸೇರಿದಂತೆ ಅಂಗಾಂಗಗಳನ್ನು ದಾನ ಮಾಡಬೇಕು. ತಂದೆ-ತಾಯಿಯನ್ನು ಗೌರವದಿಂದ ಕಾಣಬೇಕು. ಅನಾಥ ಬಾಲಕರಿಗೆ ಶಾಲೆ ಕಾಲೇಜು ತೆರೆಯಬೇಕು. ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು. ಪ್ರತಿಯೊಬ್ಬರು ವೃದ್ಧ ತಂದೆ-ತಾಯಿಗಳ ಪಾಲನೆ, ಪೋಷಣೆ
ಮಾಡಬೇಕು ಎಂದರು. 

ಧಾರ್ಮಿಕ ಚಿಂತನೆಗಳಿಂದ ಮಾತ್ರ ಮನುಷ್ಯನಿಗೆ ನೆಮ್ಮದಿ ಸಾಧ್ಯ. ಪ್ರತಿಯೊಬ್ಬರು ಮನುಷ್ಯತ್ವ ಅರಿತು ಮಾನವ ಧರ್ಮದ ನೆಲೆಗಟ್ಟಿನಲ್ಲಿ ಬದುಕಬೇಕೆಂದು ಸಲಹೆ ನೀಡಿದರು.

Advertisement

ವೇದ ಮತ್ತು ಸಂಗೀತ ಶಾಲೆ ಆರಂಭ: ರಾಜ್ಯದಲ್ಲಿ 7 ಕಣ್ವ ಮಠಗಳಿವೆ. ನಿರಂತರ ಧರ್ಮ ಪ್ರಚಾರ ಕಾರ್ಯ ಮಾಡಿಕೊಂಡು ಬರುತ್ತಿವೆ. ಈಗಾಗಲೇ ಕಣ್ವ ಮಠದಲ್ಲಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಅನೇಕ ವಿಪ್ರ ವಿದ್ಯಾರ್ಥಿಗಳು ವೇದ ಪಾಠಶಾಲೆಯಲ್ಲಿ ಸಂಸ್ಕೃತ ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲದೆ ಜುಲೈ ಅಂತ್ಯದೋಳಗೆ ಸಂಗೀತ, ವೇದ ಪಾಠಶಾಲೆ ಕೂಡ ಆರಂಭಗೊಳ್ಳಲಿದೆ. ಇಲ್ಲಿ ಎಲ್ಲರಿಗೂ ಸಂಗೀತ ಕಲಿಯುವ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಶೋಭಾಯಾತ್ರೆ: ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ನಾಗಲಿಂಗೇಶ್ವರ ದೇವಸ್ಥಾನದಿಂದ ರಾಘವೇಂದ್ರ ಮಠದವರೆಗೆ ಪೇಜಾವರ ಶ್ರೀಗಳ ಶೋಭಾಯಾತ್ರೆ ನಡೆಸಲಾಯಿತು. ವಿವಿಧ ವಾದ್ಯಮೇಳ, ಭಜನಾ ಮಂಡಳಿಗಳ ಭಜನೆಯೊಂದಿಗೆ ನಡೆದ ಶೋಭಾಯಾತ್ರೆಯಲ್ಲಿ ಸುಮಂಗಲೆಯರು ಕುಂಭ, ಕಳಶ ಹೊತ್ತು ಸಾಗಿದರು.
 
ರಾಯರ ಮಠದಲ್ಲಿ ಪೇಜಾವರ ಶ್ರೀಗಳು ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.
 
ಕಾರ್ಯಕ್ರಮದ ನೇತೃತ್ವವನ್ನು ಗುರು ಭೀಮರಾವ್‌ ಕುಲಕರ್ಣಿ ವಂದಲಿ ಹಾಗೂ ಹಟ್ಟಿ ಕಂಪನಿ ನೌಕರ ಬಲಭೀಮರಾವ್‌, ವೆಂಕಟೇಶ, ಪ್ರಾಣೇಶ, ಪವನಕುಮಾರ, ಪದ್ಮಾವತಿ, ವೀಣಾಶ್ರೀ, ಭಾರತಿ ಕುಲಕರ್ಣಿ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next