Advertisement

ಗಂಗಾನದಿ ಉಳಿವಿಗಾಗಿ ನೇತೃತ್ವ: ಪೇಜಾವರ ಶ್ರೀ

04:20 AM Feb 07, 2019 | Team Udayavani |

ಬೆಂಗಳೂರು: ಗಂಗಾನದಿಯ ಉಳಿವಿಗಾಗಿ ಹೋರಾಟದ ನೇತೃತ್ವವನ್ನು ನಾನೇ ವಹಿಸುತ್ತೇನೆ ಎಂದು ಪೇಜಾವರದ ಶ್ರೀವಿಶ್ವೇಶ ತೀರ್ಥರು ಹೇಳಿದರು.

Advertisement

ನಗರದ ಬಾಲಭವನದಲ್ಲಿ ಬುಧವಾರ ಪೂರ್ಣಪ್ರಮತಿ ಶಾಲೆ ಆಯೋಜಿಸಿದ್ದ ಪೂರ್ಣಪ್ರಮತಿ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಗಂಗಾನದಿ ಉಳಿಸುವ ಸಲುವಾಗಿ ಈಗಾಗಲೇ ಮೂವರು ಸ್ವಾಮೀಜಿಗಳು ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಕೆಲವರು ಹೋರಾಟವನ್ನು ಮುಂದುವರಿಸಿದ್ದಾರೆ. ಗಂಗಾನದಿಯ ರಕ್ಷಣೆಗೆ ಹೋರಾಟದ ನೇತೃತ್ವ ವಹಿಸುವಂತೆ ನನಗೆ ಸಾಕಷ್ಟು ಮಂದಿ ಈ ಹಿಂದೆ ವಿನಂತಿಸಿಕೊಂಡಿದ್ದರು. ಈಗ ಅವರ ಮನವಿಯನ್ನು ಸ್ವೀಕರಿಸಿದ್ದೇನೆ ಎಂದರು.

ಗಂಗಾ ನದಿಗೆ ಅಣೆಕಟ್ಟು ನಿರ್ಮಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಗಂಗಾ ನದಿ ನಿರಂತರವಾಗಿ ಹರಿಯುತ್ತಿರಬೇಕು. ಯಾವತ್ತೂ ಅದು ನಿಲ್ಲಬಾರದು. ನಿಂತರೆ ಅಶುದ್ಧವಾಗುತ್ತದೆ. ಹೀಗಾಗಿ ನದಿಗೆ ಅಣೆಕಟ್ಟೆ ಕಟ್ಟುವುದು ಬೇಡ. ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ಚುನಾವಣೆಗಾಗಿ ಕೆಲಸ ಮಾಡುತ್ತಾರೆ: ರಾಜಕೀಯ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜಕೀಯ ಮುಖಂಡರು ಬರೀ ಚುನಾವಣೆಗೆ ಕೆಲಸ ಮಾಡುತ್ತಾರೆ.ಇಂಥ ಧಾರ್ಮಿಕ ಕಾರ್ಯಗಳಿಗೆ ಗೈರಾಗುತ್ತಾರೆ. ಯಾರೂ ಕೂಡ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಹೋರಾಟ ಕೈಗೊಳ್ಳಬಾರದು. ಅದಕ್ಕೆ ಅವಕಾಶ ಕೊಡಬಾರದು.ಇದಕ್ಕಾಗಿ ಪರ್ಯಾಯ ವ್ಯವಸ್ಥೆ ಕೈಗೊಳ್ಳೋಣ ಎಂದು ನುಡಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಮಾತನಾಡಿ, ನದಿಗಳಿಗೆ ಅಣೆಕಟ್ಟು ಕಟ್ಟುವುದರಿಂದ ಅನೇಕ ಕಾರ್ಖಾನೆಗಳು ಹುಟ್ಟಿಕೊಳ್ಳಲಿವೆ. ಬಳಿಕ ಅವುಗಳ ಕೊಳಚೆ ನೀರು, ನದಿ ಸೇರಿ ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವಾಗಲಿದೆ. ಗಂಗಾನದಿ ಪವಿತ್ರ ಸ್ಥಳ ಎಂದು ನಾವೆಲ್ಲರೂ ನಂಬಿದ್ದೇವೆ. ಆದರೆ ಅಣೆಕಟ್ಟು ಕಟ್ಟುವುದರಿಂದ ಆ ನಂಬಿಕೆಗೆ ಧಕ್ಕೆ ಉಂಟಾಗಲಿದೆ ಎಂದರು. ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಗೌತಮ್ ಮಾತನಾಡಿ,ನದಿಗೆ ಅಣೆಕಟ್ಟು ಕಟ್ಟಿದರೆ ಹಲವು ರೀತಿಯ ಅಪಾಯಗಳಿಗೆ ಮತ್ತು ಅನಾಹುತಗಳಿಗೆ ಕಾರಣವಾಗಲಿದೆ ಈ ಬಗ್ಗೆ ಎಚ್ಚರದಿಂದಿರಬೇಕು. ನಮ್ಮ ಸುತ್ತಮುತ್ತಲಿನ ಪ್ರಾಣಿಪಕ್ಷಿ ಸಂಕುಲದ ಉಳಿವಿಗೂ ಅವಕಾಶ ನೀಡಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next