Advertisement

ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರ

02:26 AM Apr 25, 2019 | sudhir |

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ 9 ಮಂದಿ ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರದಲ್ಲಿ ಭದ್ರವಾಗಿದೆ. ಮೇ 23ರಂದು ನಡೆಯುವ ಮತಎಣಿಕೆಯ ತನಕ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿರುವುದು. ಮತದಾರರು ಈಗಾಗಲೇ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಣಯಿಸಿದ್ದು, ವಿಜಯದ ಹಾರ ಯಾರ ಪಾಲಿಗೆ ಒಲಿದಿದೆ ಎಂಬುದು ಒಂದು ತಿಂಗಳ ಬಳಿಕ ಬಯಲಾಗಲಿದೆ. ಅಷ್ಟರ ವರೆಗೆ ಕಾಯಬೇಕು.

Advertisement

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 9 ಮಂದಿ ಉಮೇದ್ವಾರರು ಸ್ಪರ್ಧಿಸಿದ್ದು, ಈ ಪೈಕಿ ಎನ್‌ಡಿಎ ಅಭ್ಯರ್ಥಿ ಬಿಜೆಪಿಯ ರವೀಶ ತಂತ್ರಿ ಕುಂಟಾರು, ಯುಡಿಎಫ್‌ ಅಭ್ಯರ್ಥಿ ಕಾಂಗ್ರೆಸ್‌ನ ರಾಜ್‌ಮೋಹನ್‌ ಉಣ್ಣಿತ್ತಾನ್‌, ಎಲ್‌ಡಿಎಫ್‌ ಅಭ್ಯರ್ಥಿ ಸಿಪಿಎಂನ ಕೆ.ಪಿ. ಸತೀಶ್ಚಂದ್ರನ್‌ ಮಧ್ಯೆ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ನಡೆದಿದ್ದು, ಈ ಮೂವರಲ್ಲೊಬ್ಬರು ಗೆಲುವಿನ ನಗು ಬೀರಲಿದ್ದಾರೆ.

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮಂಜೇಶ್ವರ, ಕಾಸರಗೋಡು, ಉದುಮ, ಕಾಂಞಂಗಾಡ್‌, ತೃಕ್ಕರಿಪುರ, ಕಣ್ಣೂರು ಜಿಲ್ಲೆಯ ಪಯ್ಯನ್ನೂರು ಮತ್ತು ಕಲ್ಯಾಶೆÏàರಿ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿವೆೆ.

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರವೀಶ ತಂತ್ರಿ ಕುಂಟಾರು, ಸಿಪಿಎಂನ ಕೆ.ಪಿ.ಸತೀಶ್ಚಂದ್ರನ್‌, ಕಾಂಗ್ರೆಸ್‌ನ ರಾಜ್‌ಮೋಹನ್‌ ಉಣ್ಣಿತ್ತಾನ್‌, ಬಿಎಸ್‌ಪಿಯ ನ್ಯಾಯವಾದಿ ಬಶೀರ್‌ ಆಲಡಿ, ಸ್ವತಂತ್ರ ಅಭ್ಯರ್ಥಿಗಳಾಗಿ ಗೋವಿಂದನ್‌ ಬಿ. ಆಲಿನ್‌ತಾಳೆ, ಕೆ. ನರೇಂದ್ರನ್‌, ಆರ್‌.ಕೆ. ರಣದಿವಾನ್‌, ರವೀಶ್‌ ಬಂದಡ್ಕ, ಸಜಿ ಸ್ಪರ್ಧಾ ಕಣದಲ್ಲಿದ್ದಾರೆ. ಇವರಲ್ಲಿ ಯಾರನ್ನು ಗೆಲ್ಲಿಸಿ ಲೋಸಭೆಗೆ ಕಳುಹಿಸಬೇಕೆಂಬುದನ್ನು ಮತದಾರರು ಮಂಗಳವಾರ ನಿರ್ಧರಿಸಿ ಮತಯಂತ್ರದೊಳಗೆ ನಮೂದಿಸಿದ್ದಾರೆ.

ಮೇ 23ರಂದು ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಬಿಗು ಭದ್ರತೆಯಲ್ಲಿ ಮತ ಯಂತ್ರಗಳನ್ನು ಇರಿಸಲಾಗಿದೆ. ಮತದಾರರು ತಮ್ಮ ಹಕ್ಕನ್ನು ಈಗಾಗಲೇ ಚಲಾಯಿಸಿದ್ದು, ಫಲಿತಾಂಶದತ್ತ ಎದುರು ನೋಡುತ್ತಿದ್ದಾರೆ. ಈ ಮಧ್ಯೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಮತದಾರರು ವಿವಿಧ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

Advertisement

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಶೇ. 80.57 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಏಳು ವಿಧಾನಸಭಾ ಕ್ಷೇತ್ರಗಳ 13,60,827 ಮತದಾರರ ಪೈಕಿ 10,90,421 ಮಂದಿ ಮತದಾರರು ಮತದಾನಗೈದಿದ್ದಾರೆ. ಇದರಲ್ಲಿ 5,04,394 (ಶೇ.76.83) ಪುರುಷರು ಮತ್ತು 5,86,026 (ಶೇ.83.19) ಮಹಿಳೆಯರು ಮತದಾನ ಮಾಡಿದ್ದಾರೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಶೇ. 78.49 ಮಂದಿ ಮತದಾನ ಮಾಡಿದ್ದರು.

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಡೆದ ಮತದಾನ : ಮಂಜೇಶ್ವರ ವಿಧಾನಸಭೆ – ಶೇ. 74.72, ಕಾಸರಗೋಡು – ಶೇ.76.01, ಉದುಮ – ಶೇ. 78.91, ಕಾಂಞಂಗಾಡ್‌ – ಶೇ. 81.20, ತೃಕ್ಕರಿಪುರ – ಶೇ.83.12, ಪಯ್ಯನ್ನೂರು – ಶೇ. 85.03, ಕಲ್ಯಾಶೆÏàರಿ – ಶೇ. 82.32.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ನಡೆದ ಮತದಾನ : ಮಂಜೇಶ್ವರ – ಶೇ. 71.35, ಕಾಸರಗೋಡು – ಶೇ. 72.59, ಉದುಮ – ಶೇ.76.95, ಕಾಂಞಂಗಾಡ್‌ – ಶೇ.79.44, ತೃಕ್ಕರಿಪುರ – ಶೇ. 81.82, ಪಯ್ಯನ್ನೂರು – ಶೇ. 84.31, ಕಲ್ಯಾಶೆÏàರಿ – ಶೇ. 81.32.

2014ರಲ್ಲಿ ಒಟ್ಟು 12,40,460 ಮತದಾರರ ಪೈಕಿ 9,73,592 ಮಂದಿ ಮತದಾನ ಮಾಡಿದ್ದರು.

ಈ ಚುನಾವಣೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಕಾಸರಗೋಡು ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚು ಮತದಾನ ಮಾಡಿದ್ದಾರೆ. ಇದು ಎನ್‌ಡಿಎ ಗೆ ಅನುಕೂಲಕರವಾಗಿದೆ. ಶಬರಿಮಲೆ ಸಂರಕ್ಷಣಾ ಸಮಿತಿಯ ನಿಲುವು ಎನ್‌ಡಿಎಗೆ ಪ್ರಯೋಜನಕಾರಿಯಾಗಲಿದೆ. ಕಾಸರಗೋಡು, ಮಂಜೇಶ್ವರ ಮಂಡಲಗಳಲ್ಲಿ ಶೇಕಡಾವಾರು ಮತದಾನ ಹೆಚ್ಚಳ ವಾಗಿರುವುದು ಕೂಡಾ ಎನ್‌ಡಿಎಗೆ ಪರವಾಗಿದೆ ಎಂದಿದ್ದಾರೆ.

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 35 ವರ್ಷಗಳ ಬಳಿಕ ಈ ಬಾರಿ ಯುಡಿಎಪ್‌ ಗೆಲುವು ಸಾಧಿಸಲಿದೆ ಎಂದು ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಭರವಸೆ ವ್ಯಕ್ತಪಡಿಸಿದ್ದಾರೆ. ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ದಾಖಲೆ ಮತದಾನವಾಗಿದೆ. ಇದು ಯುಡಿಎಫ್‌ಗೆ ಅನುಕೂಲವಾಗಿದೆ. 50 ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಅವರು ಹೇಳಿದ್ದಾರೆ. ಹಲವು ಮತಗಟ್ಟೆಗಳಲ್ಲಿ ಕಳ್ಳಮತದಾನ ನಡೆದಿದ್ದರೂ ಇದು ಗೆಲುವಿಗೆ ಅಡ್ಡಿಯಾಗದೆಂದಿದ್ದಾರೆ.

ಬಿಜೆಪಿ ಅಡ್ಡ ಮತಚಲಾಯಿಸದಿದ್ದರೆ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಎಡರಂಗದ ಕೆ.ಪಿ. ಸತೀಶ್ಚಂದ್ರನ್‌ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಮತದಾನ ಹೆಚ್ಚಳ
ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಮತದಾನ ಹೆಚ್ಚಳವಾಗಿರುವುದರಿಂದ ಎಲ್ಲಾ ಅಭ್ಯರ್ಥಿಗಳೂ ಗೆಲುವಿನ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಯಲ್ಲಿ ಗೆಲುವು ಯಾರ ಪಾಲಿಗೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next