ಬೆಂಗಳೂರು: ದಿವ್ಯಾಂಗ ವಿದ್ಯಾರ್ಥಿಗಳಲ್ಲಿ ಗಾಯನ ಮತ್ತು ಜ್ಞಾನ ಅಪರಿಮಿತವಾಗಿರುತ್ತದೆ. ಇದು ಅವರಲ್ಲಿರುವ ವಿಶೇಷ ಪ್ರತಿಭೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಬಿ.ಕೆ. ರವಿ ಕಿವಿ ಮಾತು ಹೇಳಿದರು. ಬೆಂಗಳೂರು ವಿಶ್ವವಿದ್ಯಾನಿಲಯದ ಬ್ರೈಲ್ ಸಂಪನ್ಮೂಲ ಕೇಂದ್ರವು ಎನೇಬಲ್ ಇಂಡಿಯಾ ಸಹಯೋಗದಲ್ಲಿ ಶನಿವಾರ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ದೃಷ್ಟಿಹೀನತೆ ಹೊಂದಿರುವ ವ್ಯಕ್ತಿಗಳಿಗೆ ಉದ್ಯೋಗಾವಕಾಶಗಳ ಅರಿವು ಕಾರ್ಯಗಾರದಲ್ಲಿ ಮಾತನಾಡಿದರು.
ನಾನು ಕಂಡ ಹಾಗೆ ನಿಮ್ಮಲ್ಲಿ ವಿನಯ, ವಿಧೇಯತೆ ಮತ್ತು ಶ್ರದ್ಧೆ ವಿಶೇಷವಾಗಿ ಅಡಗಿದೆ. ನಿಮ್ಮ ನಾಲಿಗೆ ಮೇಲೆ ಸರಸ್ವತಿ ಸದಾ ಒಲಿದಿರುತ್ತಾಳೆ. ಹಾಗಾಗಿ ಆತ್ಮವಿಶ್ವಾಸದ ಕೊರತೆ ನಿಮ್ಮಲ್ಲಿ ಬರಬಾರದು. ನೀವು ನಿಶ್ಚಿತವಾಗಿ ಆ ಗುರಿ ತಲುಪುವುದರಲ್ಲಿ ಸಂದೇಹವಿಲ್ಲ ಎಂದು ಹುರಿದುಂಬಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಮಾತನಾಡಿ, ಯಾರೂ ಪರಿಪೂರ್ಣರಲ್ಲ.
ಎಲ್ಲರಿಗೂ ಒಂದೊಂದು ಬಗೆಯ ಕೊರತೆಗಳಿರುತ್ತವೆ. ಹಾಗೆಯೇ ವಿಕಲಚೇತನರಾದ ನಿಮಗೂ ಕೊರತೆ ಇದೆ. ಆದರೆ ಅದನ್ನು ಎಲ್ಲರಿಗಿಂತ ಭಿನ್ನ ಕೊರತೆ ಎಂದು ನೀವು ಭಾವಿಸಬೇಕಾಗಿಲ್ಲ. ಅದನ್ನು ಮನಸ್ಸಿನಿಂದ ಕಿತ್ತೂಗೆದರೆ ನೀವು ಶ್ರೇಷ್ಠ ವಿದ್ಯಾರ್ಥಿಗಳಾಗಿ ಉನ್ನತ ಸ್ಥಾನಕ್ಕೇರುವಿರಿ. ಬ್ರೈಲ್ ಸೆಂಟರ್ ಮೂರು ವಿಶ್ವವಿದ್ಯಾನಿಲಯಗಳ ಅಧೀನಕ್ಕೆ ಒಳಪಡುತ್ತದೆ. ಆದರೆ ಈಗ ಇರುವ ಕೇಂದ್ರ ಚಿಕ್ಕದು ಎಂಬ ಕಾರಣಕ್ಕೆ ವಿಶಾಲ ಜಾಗಕ್ಕೆ ಬ್ರೈಲ್ ಸೆಂಟರ್ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಕೇಂದ್ರವನ್ನು ಜ್ಞಾನಭಾರತಿಗೆ ಸ್ಥಳಾಂತರ ಮಾಡುವುದು ಸೂಕ್ತ.
ಅಲ್ಲಿ ಸಾಕಷ್ಟು ಜಾಗವಿದೆ ಎಂದು ಅಭಿಪ್ರಾಯಪಟ್ಟರು. ಎನೇಬಲ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಪ್ರಾಣೇಶ್ ನಗರಿ ಮಾತನಾಡಿ, ನಮ್ಮ ಸಂಸ್ಥೆ ಕಳೆದ 20 ವರ್ಷಗಳಿಂದ ವಿವಿಧ ಬಗೆಯ ಅಂಗ ವೈಕಲ್ಯತೆಯಿಂದ ಬಳಲುತ್ತಿರುವವರ ಏಳಿಗೆಗಾಗಿ ಶ್ರಮಿಸುತ್ತಾ ಬಂದಿದೆ. ಇದುವರೆಗೆ ಹದಿನೆಂಟು ಸಾವಿರ ಮಂದಿಗೆ ತರಬೇತಿ ನೀಡಿದ್ದರೆ, 7500 ಮಂದಿಗೆ ಉದ್ಯೋಗವಕಾಶವನ್ನೂ ಕಲ್ಪಿಸಿದೆ ಎಂದು ಹೇಳಿದರು. ಬ್ರೈಲ್ ಸಂಪನ್ಮೂಲ ಕೇಂದ್ರದ ನಿರ್ದೇಶಕಿ ಅರುಣಲತಾ, ಎನೇಬಲ್ ಇಂಡಿಯಾ ಸಂಸ್ಥೆಯ ನವೀನ್ ಕುಮಾರ್,ಪ್ರೀತಿ ಲೊಬೊ, ಅನಂದ .ಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.