ಶಿವಮೊಗ್ಗ : ಕಾಂತರಾಜ್ ಮೇಲೆ ಹಲ್ಲೆ ಆಗಿದೆ. ಹರ್ಷನ ಕೊಲೆ ಸಂದರ್ಭದಲ್ಲಿ ರಾಜೀವ್ ಗಾಂಧಿ ಬಡಾವಣೆಯ ಮುಸಲ್ಮಾನ ಸಮುದಾಯದ ಹಿರಿಯರು ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಅಂತಾ ವಾಗ್ದಾನ ಮಾಡಿದ್ದರು.ಆದರೆ ವಾಗ್ದಾನ ಸುಳ್ಳಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ಹೊರ ಹಾಕಿದ್ದಾರೆ.
ಹಲ್ಲೆಗೊಳಗಾದ ಕಾಂತರಾಜ್ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಸುಮಾರು 4 ತಿಂಗಳ ಕೆಳಗೆ ರಾಷ್ಟ್ರದ್ರೋಹಿಗಳು ಹರ್ಷ ಕೊಲೆ ಮಾಡಿದ್ದರು. ರಾಷ್ಟ್ರದ್ರೋಹಿಗಳಿಗೆ ಸರಿಯಾದ ಉತ್ತರ ಕೊಡಬೇಕು ಅಂತಾ ಎನ್ ಐಎ ತನಿಖೆಗೆ ಒತ್ತಾಯಿಸಿದ್ದೇವು.ಕೇಂದ್ರ ಸರಕಾರ ಅದರಂತೆ ಹರ್ಷ ಕೊಲೆ ಪ್ರಕರಣವನ್ನು ಎನ್ ಐಎಗೆ ವಹಿಸಿದೆ.ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ.
ಹಲ್ಲೆ ನಡೆಸಿದ ವೇಳೆ ಕಾಂತರಾಜ್ ತಲೆಯ ಮೇಲೆ ಅಡ್ಡ ಕೈ ಹಿಡಿದಿದ್ದಾನೆ. ಹೀಗಾಗಿ ಅದೃಷ್ಟವಶಾತ್ ಕಾಂತರಾಜ್ ಬದುಕಿದ್ದಾನೆ.ಇಲ್ಲದಿದ್ದರೆ ಅವನ ತಲೆಯೂ ಕತ್ತರಿಸಿ ಹೋಗುತ್ತಿತ್ತು.ಕೆಲವು ಮುಸಲ್ಮಾನ್ ಗೂಂಡಾಗಳು ಇಂತಹ ದುಷ್ಕೃತ್ಯ ಮುಂದುವರಿಸಿದ್ದಾರೆ.ಈ ಪ್ರಕರಣದಲ್ಲೂ ಸಿಎಂ ತೀವ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.ಹಿಂದೂ ಸಮಾಜ ಸುಮ್ಮನೆ ಕೂರಲು ಸಾಧ್ಯವಿಲ್ಲ.ಬಿಜೆಪಿ ಕಾರ್ಯಕರ್ತರ ಗುರಿ ಇಟ್ಟುಕೊಂಡು ಈ ರೀತಿ ಮಾಡುತ್ತಿದ್ದಾರೆ. ಈ ಪ್ರಕರಣದ ಬಗ್ಗೆಯೂ ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ ಎಂದರು.
ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮಳೆ ನಿರೀಕ್ಷೆಗೆ ಮೀರಿ ಬರುತ್ತಿದೆ. ಕಳೆದ ಬಾರಿ ಶಿವಮೊಗ್ಗ ನಗರದಲ್ಲಿ ಮಳೆಗೆ ಅವಾಂತರ ಸೃಷ್ಟಿಯಾಗಿತ್ತು. ಆದರೆ ಈ ಬಾರಿ ಶಿವಮೊಗ್ಗ ನಗರದಲ್ಲಿ ಸಮಸ್ಯೆ ಆಗದ ರೀತಿಯಲ್ಲಿ ಪಾಲಿಕೆ ಪೂರ್ಣ ಪ್ರಯತ್ನ ಮಾಡಿದೆ. ಹೀಗಾಗಿ ಮಹಾನಗರ ಪಾಲಿಕೆಯ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಒಂದೇ ಒಂದು ಮನೆಗೆ ನೀರು ನುಗ್ಗದಿರುವ ರೀತಿಯಲ್ಲಿ ಕ್ರಮ ವಹಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಎ ವರ್ಗ 8 ಮನೆ, ಬಿ ವರ್ಗ 14 ಮನೆ ಬಿದ್ದಿದೆ. ಎ ವರ್ಗ ಮನೆಗೆ ಈ ಮೊದಲು 95 ಸಾವಿರ ಪರಿಹಾರ ಇತ್ತು. ಆದರೆ ರಾಜ್ಯ ಸರಕಾರ ನಿನ್ನೆ ಪರಿಹಾರ ಮೊತ್ತವನ್ನು 5 ಲಕ್ಷಕ್ಕೆ ಏರಿಕೆ ಮಾಡಿದೆ. ಬಿ. ವರ್ಗ ಮನೆಗೆ 95 ಸಾವಿರ ಪರಿಹಾರ ಇತ್ತು. ಈಗ 3 ಲಕ್ಷ ಪರಿಹಾರ ಕೊಡಲು ತೀರ್ಮಾನ ಆಗಿದೆ.ಭಾಗಶಃ ಹಾನಿಗೆ 5200 ಪರಿಹಾರ ಇತ್ತು ಈಗ 50 ಸಾವಿರ ನೀಡಿದೆ ಎಂದರು.
ಪರಿಹಾರ ಮೊತ್ತ ಏರಿಕೆ ಮಾಡಿದ ಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮನೆ ಬಿದ್ದವರಿಗೆ ಪರಿಹಾರ ಕೊಡಿಸುವ ದಿಕ್ಕಿನಲ್ಲಿ ಗಮನ ಹರಿಸುತ್ತೇನೆ ಎಂದರು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ ಎಂಬ ಪ್ರಶ್ನೆಗೆ ಉತ್ತರಿಸಿ, ಉಸ್ತುವಾರಿ ಸಚಿವರು ಎಲ್ಲೂ ಹೋಗಿಲ್ಲ. ಅವರ ಜತೆ ಮಾತನಾಡಿದ್ದೇನೆ. ಅವರ ಭಾಗದಲ್ಲಿ ಸಾಕಷ್ಟು ಹಾನಿಯಾಗಿರುವ ಕಾರಣ ಅವರು ಅಲ್ಲಿ ಗಮನ ಹರಿಸಿದ್ದಾರೆ. ಜಿಲ್ಲೆಗೂ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದಾರೆ ಎಂದರು.