Advertisement

ಈಡೇರದ ಭರವಸೆ; ಮುಂದುವರಿದ ಧರಣಿ

06:00 PM Apr 30, 2022 | Team Udayavani |

ಧಾರವಾಡ: ಅವಳಿನಗರದಲ್ಲಿ ಜಲಮಂಡಳಿ ಅಧೀನದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರು ನಗರದ ಜಲಮಂಡಳಿ ಕಚೇರಿ ಎದುರು ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರವೂ ಮುಂದುವರಿದಿದೆ.

Advertisement

ಕರ್ನಾಟಕ ಜಲಮಂಡಳಿಯ ಹಂಗಾಮಿ, ಗುತ್ತಿಗೆ ಹಾಗೂ ದಿನಗೂಲಿ ನೌಕರರನ್ನು ಹು-ಧಾ ಮಹಾನಗರ ಪಾಲಿಕೆಯು ವರ್ಕ್‌ ಸಮೇತ ಹಸ್ತಾಂತರ ಮಾಡಿ, ಆದೇಶ ಹೊರಡಿಸಬೇಕು. ಇದರಿಂದ ಯೋಜನೆ ಪೂರ್ಣಗೊಳ್ಳುವವರೆಗೂ ನಿಯೋಜನೆ ಮೇರೆಗೆ ಎಲ್‌ ಆ್ಯಂಡ್‌ ಟಿ ಅವರಲ್ಲಿ ಸೇವೆ ನಿರ್ವಹಿಸುವಂತೆ ಆದೇಶವನ್ನು ಮಹಾನಗರ ಪಾಲಿಕೆ ಮಾಡಬೇಕು. ಹೀಗಾದರೆ ಜಲಮಂಡಳಿ ನೌಕರರು ತಕ್ಷಣ ಕೆಲಸಕ್ಕೆ ಹಾಜರಾಗುತ್ತೇವೆ. ಇಲ್ಲವಾದರೆ ಧರಣಿ ನಿರಂತರ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಲಾಯಿತು.

ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅನಿಲ್‌ ಪಾಟೀಲ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಕಾಂಗ್ರೆಸ್‌ ಮುಖಂಡರಾದ ದೀಪಕ್‌ ಚಿಂಚೋರೆ, ಪಾಲಿಕೆ ಮಾಜಿ ಸದಸ್ಯರಾದ ಪ್ರಕಾಶ ಕ್ಯಾರಕಟ್ಟಿ, ಮೋಹನ ಹಿರೇಮನಿ, ಪಾಲಿಕೆ ಸದಸ್ಯರಾದ ಪ್ರಕಾಶ ಬುರಬುರೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬಸವರಾಜ ಕಿತ್ತೂರ, ರಫೀಕ್‌ ದರ್ಗದ ಮೊದಲಾದವರು ಭೇಟಿ ನೀಡಿ ಬೆಂಬಲ ಸೂಚಿಸಿದರು. ಎಲ್‌ ಆ್ಯಂಡ್‌ ಟಿ ಕಂಪನಿ ಗುತ್ತಿಗೆ ಮುಗಿದ ನಂತರವೂ ಈಗಿರುವ ಉದ್ಯೋಗಿಗಳಿಗೆ
ಕೆಲಸ ನೀಡುವ ಹಾಗೂ ಉದ್ಯೋಗಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಮಹಾನಗರ ಪಾಲಿಕೆ ನೀಡಬೇಕು ಎಂದು ಆಗ್ರಹಿಸಿದರು.

ನಲಪಾಡ್‌ ಬೆಂಬಲ
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮಹ್ಮದ್‌ ಹ್ಯಾರಿಸ್‌ ನಲಪಾಡ್‌ ಅವರು ಬೆಂಬಲ ಸೂಚಿಸಿದರು. ಈ ವೇಳೆ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದರೂ ನ್ಯಾಯಯುತ ಬೇಡಿಕೆಗೆ ಸ್ಪಂದನೆ ಸಿಗದಿರುವುದು ಖಂಡನೀಯ. ಎಲ್‌ ಆ್ಯಂಡ್‌ ಟಿ ಕಂಪೆನಿಗೆ ಜಲಮಂಡಳಿ ನಿರ್ವಹಣೆ ನೀಡಲಾಗಿದೆ. ಇದರಡಿ ಉದ್ಯೋಗಿಗಳು ಕೆಲಸ ಮಾಡಬೇಕಿದ್ದು, ಎರಡು ವರ್ಷದಲ್ಲಿ ಈ ಖಾಸಗಿ ಕಂಪೆನಿ ಬಿಟ್ಟು ಹೋದರೆ ನೌಕರರು ಬೀದಿಗೆ ಬರುವಂತಾಗುತ್ತದೆ. ನೌಕರರ ನ್ಯಾಯಯುತ ಬೇಡಿಕೆಯತ್ತ ಸರಕಾರ ಗಮನ ಹರಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next