Advertisement

ಎಂಟು ವರ್ಷಗಳ ಭರವಸೆ ಈಗ ಈಡೇರಿತು

06:55 AM Dec 22, 2017 | Team Udayavani |

“ನಾನೇನಾದರೂ ಸಿನಿಮಾ ಮಾಡಿದರೆ, ನೀವೇ ಅದಕ್ಕೆ ಸಂಗೀತ ಸಂಯೋಜಿಸಬೇಕು …’ ಅಂತ ಎಂಟು ವರ್ಷಗಳ ಹಿಂದೆಯೇ ಪ್ರಾಮಿಸ್‌ ಮಾಡಿದ್ದರಂತೆ ಮನೋಜ್‌. ಆದರೆ, ಅವರಿಗೆ ಸಿನಿಮಾ ಮಾಡುವ ಅವಕಾಶ ಒದಗಿ ಬಂದಿರಲಿಲ್ಲ. “ಓ ಪ್ರೇಮವೇ’ ಎಂಬ ಚಿತ್ರವನ್ನು ನಿರ್ದೇಶಿಸುವ ಅವಕಾಶ ಬಂದಾಗ, ಅವರು ಮೊದಲು ಹೋಗಿದ್ದೇ ಆನಂದ್‌ ರಾಜಾವಿಕ್ರಮ್‌ ಮತ್ತು ರಾಹುಲ್‌ ಬಳಿ. ಮಾತು ಕೊಟ್ಟಂತೆ ಆನಂದ್‌ ಮತ್ತು ರಾಹುಲ್‌ ಅವರಿಂದಲೇ ತಮ್ಮ ಚಿತ್ರದ ಸಂಗೀತದ ಜವಾಬ್ದಾರಿಯನ್ನು ಕೊಟ್ಟಿದ್ದಾರೆ ಮನೋಜ್‌. ಇತ್ತೀಚೆಗೆ ಹಾಡುಗಳ ಬಿಡುಗಡೆಯೂ ಆಯಿತು.

Advertisement

ಆರು ಗಂಟೆಗೆ ಕಾರ್ಯಕ್ರಮ ಎಂದರೆ ಸರಿಯಾಗಿ ಆರು ಗಂಟೆಗೆ ಬಂದು ಕುಳಿತಿದ್ದರು ಪುನೀತ್‌ ರಾಜಕುಮಾರ್‌. ಆದರೆ, ಭವಾನಿ ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ಅವರು ಸ್ವಲ್ಪ ತಡವಾಗಿ ಬಂದಿದ್ದರಿಂದ ಕಾರ್ಯಕ್ರಮವೂ ತಡವಾಗಿ ಪ್ರಾರಂಭವಾಯಿತು. ಆ ಸಂದರ್ಭವನ್ನು ಬಳಸಿಕೊಂಡ ಚಿತ್ರತಂಡದವರು, ಹಾಡುಗಳನ್ನು ಮತ್ತು ಟ್ರೇಲರ್‌ಗಳನ್ನು ತೋರಿಸಿದರು. ಅವೆಲ್ಲಾ ಮುಗಿಯುವಷ್ಟರಲ್ಲಿ ಭವಾನಿ ರೇವಣ್ಣ ಮತ್ತು ಪ್ರಜ್ವಲ್‌ ಇಬ್ಬರೂ ಬಂದರು. ಅದಾಗಿ ಕೆಲವೇ ಹೊತ್ತಿಗೆ ಎಲ್ಲರೂ ವೇದಿಕೆ ಏರಿದರು. ಎಲ್ಲರ ಪರಿಚಯ ಮುಗಿಯುತ್ತಿದ್ದಂತೆಯೇ ಹಾಡುಗಳ ಬಿಡುಗಡೆಯೂ ಆಗಿ ಹೋಯಿತು. ಬೇಗ ಹೋಗಬೇಕಾಗಿದ್ದರಿಂದ, ಪುನೀತ್‌ ಅವರು ನಾಲ್ಕು ಮಾತಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿ ಹೊರಟರು.

ಇದು ಮನೋಜ್‌ ಅವರ ಒಂಬತ್ತು ವರ್ಷಗಳ ಕನಸಂತೆ. ಒಂದು ಸಿನಿಮಾ ಮಾಡಬೇಕು ಎನ್ನುವ ಅವರ ಹಠವು ಈಗ ಈಡೇರಿದೆಯಂತೆ. ಇದೊಂದು ತ್ರಿಕೋನ ಪ್ರೇಮಕಥೆ. ಈ ಹೆಸರು ಇಡುವುದಕ್ಕೆ ಕಾರಣ ರವಿಚಂದ್ರನ್‌. ನಾನು ಸಿನಿಮಾ ಮಾಡುವುದಕ್ಕೆ ಕಾರಣವೂ ಅವರೇ. ಪ್ರೀತಿಯ ಸಿಂಬಲ್‌ ಎಂದರೆ ಅದು ರವಿ ಸಾರ್‌. ಅದೇ ಕಾರಣಕ್ಕೆ ಈ ಚಿತ್ರಕ್ಕೆ “ಓ ಪ್ರೇಮವೇ’ ಎಂದು ಹೆಸರಿಟ್ಟಿದ್ದೀನಿ’ ಎಂದರು. ಚಿತ್ರದ ಸಂಗೀತದ ಕುರಿತು ಮಾತನಾಡಿದ ಅವರು, “ಆನಂದ್‌ ಮತ್ತು ರಾಹುಲ್‌ ನನಗೆ ಹಲವು ವರ್ಷಗಳ ಪರಿಚಯ. ಅವರಿಗೆ ವಿಪರೀತ ಸಂಗೀತದ ಹುಚ್ಚು. ಕಾಲೇಜಿಗೂ ಹೋಗದೆ ಸಂಗೀತದಲ್ಲಿ ತೊಡಗಿಸಿಕೊಂಡಿದ್ದರು. ಅವರಿಬ್ಬರೂ ಗಂಡ-ಹೆಂಡತಿ ತರಹ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುವುದಿಲ್ಲ.

ಸದಾ ಸಂಗೀತದ ಬಗ್ಗೆಯೇ ಯೋಚಿಸುತ್ತಿರುತ್ತಾರೆ’ ಎಂದೆಲ್ಲಾ ಹೊಗಳಿದರು. ಈ ಸಮಾರಂಭಕ್ಕೆ ಪ್ರಜ್ವಲ್‌ ಬಂದಿದ್ದಕ್ಕೆ ಪ್ರಮುಖ ಕಾರಣ, ಮನೋಜ್‌ ತಮ್ಮ ಜಿಲ್ಲೆಯವರು ಎಂದು. ಅಷ್ಟೇ ಅಲ್ಲ, ಮನೋಜ್‌ ಅವರು ಮಾಜಿ ಸಚಿವ ಎಚ್‌.ಕೆ. ಕುಮಾರಸ್ವಾಮಿ ಎಂದು. ಆ ಸ್ನೇಹದಿಂದಲೇ ಅವರು ಈ ಸಮಾರಂಭಕ್ಕೆ ಬಂದಿದ್ದರು. “ಮನೋಜ್‌ ಅವರು ರಾಜಕೀಯ ರ್ಯಾಲಿಗೆ ಬರುತ್ತಿದ್ದರು. ಅವರನ್ನು ಹೀರೋ ಆಗಿ ನೋಡಿರಲಿಲ್ಲ. ಈಗ ಅವರನ್ನು ಹೀರೋ ಆಗಿ ನೋಡುತ್ತಿದ್ದೇನೆ.

ಚುನಾವಣೆಗಳು ಹತ್ತಿರ ಬರುತ್ತಿವೆ. ಅವರು ನಮಗೆ ಸ್ಟಾರ್‌ ಪ್ರಚಾರಕರಾಗಿ ಬರಲಿ. ಪ್ರಚಾರಕ್ಕೆ ಡೇಟ್‌ ಫ್ರೀಯಾಗಿಟ್ಟುಕೊಳ್ಳಿ’ ಎಂದರು. ಚಿತ್ರದ ನಾಯಕಿ ನಿಕ್ಕಿ ಬಂದಿರಲಿಲ್ಲ. ಮಿಕ್ಕಂತೆ ಚಿತ್ರದ ನಿರ್ಮಾಪಕಿ ಹಾಗೂ ಮನೋಜ್‌ ಅವರ ತಾಯಿ ಚಂಚಲಕುಮಾರಿ, ತಂದೆ ಎಚ್‌.ಕೆ. ಕುಮಾರಸ್ವಾಮಿ, ಕರಿಸುಬ್ಬು, ಪ್ರಶಾಂತ್‌ ಸಿದ್ಧಿ ಮುಂತಾದವರು ಈ ಸಮಾರಂಭದಲ್ಲಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next