ಚಿಕ್ಕಬಳ್ಳಾಪುರ: ಬಡತನದಲ್ಲಿ ಜೀವನ ನಡೆಸುತ್ತಿರುವ ದಲಿತ ಕುಟುಂಬಗಳ ದಯನೀಯ ಸ್ಥಿತಿ ಕುರಿತು “ಕನಿಷ್ಠ ಸೌಲಭ್ಯಗಳಿಂದ ವಂಚಿತ ಕುಟುಂಬ’ ಶಿಥಿಲವಾಗಿರುವ ಮನೆಯಲ್ಲಿ ವಾಸ- ಬೇಕಿದೆ ಸರ್ಕಾರದ ನೆರವು ಶೀರ್ಷಿಕೆಯಲ್ಲಿ “ಉದಯವಾಣಿ’ಯಲ್ಲಿ ಪ್ರಕಟವಾದ ವರದಿಗೆ ಜಿಪಂ ಸಿಇಒ ಬಿ. ಫೌಝೀಯಾ ತರುನ್ನುಮ್ ಸ್ಪಂದಿಸಿದ್ದಾರೆ.
ಜಿಪಂ ಸಿಇಒ ಸೂಚನೆ ಮೇರೆಗೆಶಿಡ್ಲಘಟ್ಟ ತಾಪಂ ಇಒಶಿವಕುಮಾರ್ ಮತ್ತು ಕುಂಬಿಗಾನಹಳ್ಳಿ ಗ್ರಾಪಂ ಪಿಡಿಒ ನೈಯನಾ ನಿಖತ್ ಆರಾ ಮತ್ತು ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮೊಹ್ಮದ್ ಉಸ್ಮಾನ್ ಅವರು ಶಿಡ್ಲಘಟ್ಟ ತಾಲೂಕಿನ ಗಂಭೀರನಹಳ್ಳಿಗೆ ಭೇಟಿ ನೀಡಿ ಸಂಕಷ್ಟದಲ್ಲಿರುವ ದಲಿತ ಕುಟುಂಬಕ್ಕೆ ಒಂದು ನಿವೇಶನ ಮಂಜೂರು ಮಾಡುವುದಾಗಿ ತಾಪಂ ಇಓ ಶಿವಕುಮಾರ್ ಭರವಸೆ ನೀಡಿದ್ದಾರೆ. ಉದಯವಾಣಿ ಪ್ರಕಟವಾದ ವರದಿ ಜಿಪಂ ಸಿಇಒಅವರ ಗಮನಕ್ಕೆಬಂದಿತ್ತು. ಕೊಟ್ಟ ಮಾತಿನಂತೆ ತಾಪಂ ಇಒ ಮತ್ತು ಗ್ರಾಪಂ ಪಿಡಿಒ ಮತ್ತು ಮಕ್ಕಳ ರಕ್ಷಣಾಧಿಕಾರಿಗಳನ್ನು ಗಂಭೀರನಹಳ್ಳಿಗೆ ಕಳುಹಿಸಿ ಬಡ ಕುಟುಂಬಕ್ಕೆ ನೆರವು ಕಲ್ಪಿಸಲು ಜಿಪಂ ಸಿಇಒ ಮುಂದಾಗಿದ್ದಾರೆ.
ಜೊತೆಗೆ ಕುಟುಂಬ ಸದಸ್ಯರಿಗೆ ಬಿಪಿಎಲ್ ಪಡಿತರ ಚೀಟಿ ಒದಗಿಸಿ ಎಲ್ಲರಿಗೂ ಆಧಾರ್ ಕಾರ್ಡ್ ಕಲ್ಪಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ. ತಾತ್ಕಾಲಿಕ ವ್ಯವಸ್ಥೆ: ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ಯಾರು ವಾಸ ಮಾಡಬಾರದೆಂದು ತಾಪಂ ಇಒ ಶಿವಕು ಮಾರ್ ಸೂಚನೆ ನೀಡಿದ್ದು, ಕುಟುಂಬ ಸದಸ್ಯರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಲು ಅಥವಾ ಸಮೀಪದಲ್ಲಿರುವ ಯಾವುದಾದರೂ ಮನೆಯನ್ನು ಬಾಡಿಗೆಗೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಆಹಾರ ವಿತರಣೆ: ತಾಯಿಯನ್ನು ಕಳೆದುಕೊಂಡು ತಂದೆ ಮತ್ತು ಅಜ್ಜಿಯ ಆಶ್ರಯದಲ್ಲಿ ಬದುಕುತ್ತಿರುವ ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ದಯಾನೀಯ ಸ್ಥಿತಿ ಬಗ್ಗೆ ಬೆಳಕು ಚೆಲ್ಲಿ ಸರ್ಕಾರದ ನೆರವು ಬೇಕಿದೆ ಎಂದು ಉದಯವಾಣಿಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು.
ತಾಪಂ ಇಒ ಶಿವಕುಮಾರ್, ಪಿಡಿಒ ನಯನಾ ನಿಖತ್ ಆರಾ ಕುಟುಂಬ ಸದಸ್ಯರಿಗೆ ಆಹಾರ ಕಿಟ್, ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಿದ್ದಾರೆ. ಜಿಪಂ ಸಿಇಒ ಮತ್ತು ತಾಪಂ ಇಒ, ಗ್ರಾಪಂ ಪಿಡಿಒ, ಮಕ್ಕಳ ಸಂರಕ್ಷಣಾಧಿಕಾರಿ ಸೇವಾ ಕಾರ್ಯವನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.