Advertisement

ಬೀಚ್‌ಗಳ ಅಭಿವೃದ್ಧಿಗೆ ಘೋಷಣೆಯಾಗಿದ್ದ ಯೋಜನೆ ಸದ್ದಿಲ್ಲದೆ ರದ್ದು!

10:35 AM Sep 28, 2018 | Team Udayavani |

ಮಹಾನಗರ: ಉಳ್ಳಾಲ, ಸೋಮೇಶ್ವರ, ತಲಪಾಡಿ, ಸುಲ್ತಾನ್‌ ಬತ್ತೇರಿ, ಸುರತ್ಕಲ್‌ ಬೀಚ್‌ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಏಳು ವರ್ಷಗಳ ಹಿಂದೆ ಘೋಷಣೆ ಮಾಡಿದ್ದ ಸುಮಾರು 13 ಕೋಟಿ ರೂ. ವೆಚ್ಚದ ಯೋಜನೆಯು ಇದೀಗ ಸದ್ದಿಲ್ಲದೆ ರದ್ದುಗೊಂಡಿದೆ. ಆ ಮೂಲಕ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ.

Advertisement

ಈ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಡಳಿತವು ಈಗಾಗಲೇ ವಿಸ್ತೃತ ಯೋಜನ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಿ ವರ್ಷಗಳೇ ಕಳೆದಿವೆ. ಆದರೆ, ಇಲ್ಲಿವರೆಗೆ ಕೇಂದ್ರ ಸರಕಾರದಿಂದ ಈ ಬಗ್ಗೆ ಯಾವುದೇ ರೀತಿಯ ಉತ್ತರ ಬಂದಿಲ್ಲ.

ಬೀಚ್‌ ಅಭಿವೃದ್ಧಿ ದೃಷ್ಟಿಯಿಂದ 2011-12ರಲ್ಲಿ ಕೇಂದ್ರ ಸರಕಾರವು ದಕ್ಷಿಣ ಕನ್ನಡ ಜಿಲ್ಲೆಗೆ 13.72 ಕೋಟಿ ರೂ.ಗಳನ್ನು ಘೋಷಿಸಿತ್ತು. ಈ ಯೋಜನೆ ಪ್ರಕಾರ ನಗರದ ಐದು ಬೀಚ್‌ಗಳ ಅಭಿವೃದ್ಧಿ ಸಲುವಾಗಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಡಿಪಿಆರ್‌ ಸಲ್ಲಿಸಿತ್ತು. ಮಂಗಳೂರು ಹೊರವಲಯದ ತಲಪಾಡಿ, ಉಳ್ಳಾಲ, ಸೋಮೇಶ್ವರ, ಸುರತ್ಕಲ್‌ ಮತ್ತು ಸುಲ್ತಾನ್‌ ಬತ್ತೇರಿ ಬೀಚ್‌ಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೆ, ಪ್ರಸ್ತಾವನೆ ಸಲ್ಲಿಸಿ ಸುಮಾರು ಏಳು ವರ್ಷಗಳಾದರೂ ಜಿಲ್ಲೆಗೆ ಬೀಚ್‌ ಅಭಿವೃದ್ಧಿಗಾಗಿ ಮೀಸಲಿಟ್ಟ ಈ ಹಣ ಬಿಡುಗಡೆಯಾಗಿಲ್ಲ. ಅಲ್ಲದೆ ಪ್ರವಾಸೋದ್ಯಮ ಇಲಾಖೆ ಮಾಹಿತಿ ಪ್ರಕಾರ, ಈ ಯೋಜನೆಯನ್ನೇ ಸರಕಾರ ಕೈ ಬಿಟ್ಟಿದೆ.

ಸರಕಾರ ಯೋಜನೆ ಕೈ ಬಿಡಲು ಕಾರಣ ವೇನೆಂದು ಸದ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ಇಲ್ಲ. ಯಾವುದೇ ಮಾಹಿತಿ ನೀಡದೆ, ಪ್ರಸ್ತಾವಿತ ಯೋಜನೆಯನ್ನು ಸರಕಾರ ಕೈ ಬಿಟ್ಟಿರುವುದು, ಬೀಚ್‌ಗಳೇ ಪ್ರಮುಖ ಆಕರ್ಷಣಾ ತಾಣವಾಗಿರುವ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಹಿನ್ನಡೆಯಾಗಿದೆ.

ಪ್ರಸ್ತಾವನೆಯಲ್ಲಿ ಏನಿತ್ತು?
ಐದು ಬೀಚ್‌ಗಳ ಅಭಿವೃದ್ಧಿಗಾಗಿ ಸರಾಸರಿ ತಲಾ ಮೂರು ಕೋಟಿ ರೂ. ಗಳಂತೆ ಮೀಸಲಿಡಲಾಗಿತ್ತು. ಈ ಹಣದಲ್ಲಿ ಕುಳಿತುಕೊಳ್ಳುವ ಆಸನ ವ್ಯವಸ್ಥೆ, ಲ್ಯಾಂಡ್‌ ಸ್ಕೇಪ್‌ ವಾಕ್‌ವೇ, ಹೈಮಾಸ್‌ ಲೈಟಿಂಗ್‌, ಲೈಫ್‌ ಗಾರ್ಡ್‌ ವಾಚ್‌ ಟವರ್‌, ಸೀವೇಜ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌, ಪಾರ್ಕಿಂಗ್‌ ಸೌಲಭ್ಯ, ಸಾರ್ವಜನಿಕ ಸ್ನೇಹಿ ಸೌಲಭ್ಯಗಳು ಸೇರಿದಂತೆ ವಿವಿಧ ಸವಲತ್ತುಗಳನ್ನು ಪ್ರವಾಸಿಗರಿಗೆ ಒದಗಿಸಿಕೊಡುವ ಅಂಶಗಳನ್ನು ಈ ಪ್ರಸ್ತಾವನೆ ಒಳಗೊಂಡಿತ್ತು. ಆದರೆ ಯೋಜನೆ ಜಾರಿಗೊಳ್ಳುವ ಲಕ್ಷಣ ಕಾಣಿಸದಿರುವ ಹಿನ್ನೆಲೆಯಲ್ಲಿ ಬೀಚ್‌ನಲ್ಲಿ ಈ ಎಲ್ಲ ಸೌಲಭ್ಯಗಳು ಸದ್ಯಕ್ಕೆ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ.

Advertisement

‘ಬೀಚ್‌ನಲ್ಲಿ ವೈನ್‌ ಫೆಸ್ಟಿವಲ್‌, ಅಂತಾರಾಷ್ಟ್ರೀಯ ಸರ್ಫಿಂಗ್ ಸೇರಿದಂತೆ ವಿವಿಧ ಈವೆಂಟ್ಸ್‌ಗಳನ್ನು ಆಗಾಗ ಆಯೋಜಿಸಬೇಕು. ಹೀಗೆ ಮಾಡಿದ್ದಲ್ಲಿ ರೆಸಾರ್ಟ್‌ ಸ್ಥಾಪನೆಗೂ ಜನ ಮುಂದೆ ಬರಬಹುದು. ಪ್ರವಾಸಿತಾಣವನ್ನು ಆಕರ್ಷಣೆಯ ಕೇಂದ್ರವಾಗಿ ಮಾಡದಿದ್ದರೆ, ಇಲ್ಲಿ ಹೂಡಿಕೆ ಮಾಡಲೂ ಜನ ಹಿಂಜರಿಯುತ್ತಾರೆ ಎನ್ನುತ್ತಾರೆ ಪಣಂಬೂರ್‌ ಬೀಚ್‌ ಅಭಿವೃದ್ಧಿ ಯೋಜನೆಯ ಸಿಇಒ ಯತೀಶ್‌ ಬೈಕಂಪಾಡಿ.

ಬೀಚ್‌ ಬದಿಯಲ್ಲಿ ರೆಸಾರ್ಟ್‌ ನಿರ್ಮಾಣ ಮುಂತಾದವುಗಳಿಗೆ ಅನುವಾಗುವಂತೆ ಸಿಆರ್‌ಝಡ್‌ ನಿಯಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಆದರೆ ಇದು ಅಂತಿಮಗೊಂಡಿಲ್ಲ. ಮುಂದೆ ಸಾಧ್ಯವಾಗಬಹುದು ಎಂದು ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಸುಧೀರ್‌ ಗೌಡ ತಿಳಿಸಿದ್ದಾರೆ. 

ಬೀಚ್‌ ರೆಸಾರ್ಟ್‌ ಇಲ್ಲ!
ಮಂಗಳೂರು ಎಂದಾಕ್ಷಣ ನೆನಪಾಗುವುದೇ ಬೀಚ್‌ಗಳು. ಆದರೆ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಬೇಕಾದ ಸೌಲಭ್ಯಗಳೇ ಇಲ್ಲಿಲ್ಲ. ನಗರದ ಸುತ್ತ ಮುತ್ತಲಿನಲ್ಲಿರುವ ಬೀಚ್‌ಗಳ ಪೈಕಿ ಉಳ್ಳಾಲ ಹೊರತುಪಡಿಸಿದರೆ ಉಳಿದ ಯಾವುದೇ ಬೀಚ್‌ ಸನಿಹದಲ್ಲಿ ರೆಸಾರ್ಟ್‌ಗಳಿಲ್ಲ.

ನಮಗೆ ಮಾಹಿತಿಯೇ ಇಲ್ಲ
ಬೀಚ್‌ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ 13.72 ಕೋಟಿ ರೂ.ಗಳ ಯೋಜನೆಯಿತ್ತು. ಈ ಸಂಬಂಧ ವಿಸ್ತೃತ ಯೋಜನ ವರದಿಯನ್ನೂ ಸಲ್ಲಿಸಲಾಗಿದೆ. ಬಳಿಕ ಯೋಜನೆ ಏನಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಅನುದಾನ ಬಂದಿಲ್ಲ.
– ಸುಧೀರ್‌ ಗೌಡ,ಜಿಲ್ಲಾ
ಪ್ರವಾಸೋದ್ಯಮ ಸಮಾಲೋಚಕ

 ಧನ್ಯಾ ಬಾಳೆಕಜೆ 

Advertisement

Udayavani is now on Telegram. Click here to join our channel and stay updated with the latest news.

Next