Advertisement

ಮೇಕೆದಾಟು ಯೋಜನೆಗೆ ಕೊನೆಗೂ ಸಿಕ್ಕಿತು ಸಮ್ಮತಿ

03:45 AM Feb 16, 2017 | Team Udayavani |

ಬೆಂಗಳೂರು: ತಮಿಳುನಾಡಿನ ವಿರೋಧ ಸೇರಿದಂತೆ ನಾನಾ ಕಾರಣಗಳಿಂದ ಕೆಲ ವರ್ಷ ನನೆಗುದಿಗೆ ಬಿದ್ದಿದ್ದ ಮೇಕೆದಾಟು ಸಮೀಪ ಕಾವೇರಿ ನದಿಗೆ ಸಮತೋಲನ ಜಲಾಶಯ ನಿರ್ಮಿಸುವ ಯೋಜನೆಗೆ ಕಡೆಗೂ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ.

Advertisement

ಕುಡಿಯುವ ನೀರು, ನೀರಾವರಿ ಮತ್ತು ವಿದ್ಯುತ್‌ ಉತ್ಪಾದನೆಗಾಗಿ ಸುಮಾರು 5,912 ಕೋಟಿ ರೂ. ವೆಚ್ಚದಲ್ಲಿ ಸುಮಾರು 66.5 ಟಿಎಂಸಿ ನೀರು ಸಂಗ್ರಹ ಸಾಮರ್ಥಯದ ಮೇಕೆದಾಟು ಅಣೆಕಟ್ಟೆ ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ.

ಇದೀಗ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಯೋಜನೆ ಜಾರಿಗೆ ತಾತ್ವಿಕ ಅನುಮೋದನೆ ನೀಡಿದೆ. ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ಕುರಿತು ವಿವರ ನೀಡಿದರು.

ಮೇಕೆದಾಟು ಅಣೆಕಟ್ಟೆ ಯೋಜನೆ ಕುರಿತು ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಇನ್ನು ಅದರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗ ಮತ್ತು ಕಾವೇರಿ ಮೇಲುಸ್ತುವಾರಿ ಸಮಿತಿಗೆ ಕಳುಹಿಸಲಾಗುವುದು. ಇದರ ಜತೆ ಜತೆಗೆ ಯೋಜನೆಗೆ ಅಗತ್ಯವಿರುವ ಪರಿಸರ, ಅರಣ್ಯ ಅನುಮೋದನೆಗಳನ್ನು ಪಡೆಯಲಾಗುವುದು ಎಂದರು.

ಕೆಆರ್‌ಎಸ್‌ಗಿಂತ ದೊಡ್ಡದು: ಮೇಕೆದಾಟು ಬಳಿ 441.2 ಮೀಟರ್‌ ಎತ್ತರದ 66.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆ ನಿರ್ಮಿಸುವ ಯೋಜನೆ ಇದಾಗಿದೆ. ಇದರಲ್ಲಿ 440 ಮೀಟರ್‌ನಲ್ಲಿ 64 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿರುತ್ತದೆ.395 ಮೀಟರ್‌ ಅಂದರೆ 7.7 ಟಿಎಂಸಿ ಡೆಡ್‌ ಸ್ಟೋರೇಜ್‌ ಇರಲಿದ್ದು, ಇದು ಕೃಷ್ಣರಾಜಸಾಗರ ಜಲಾಶಯಕ್ಕಿಂತ ದೊಡ್ಡದಾಗಿರುತ್ತದೆ. ಒಟ್ಟು 39.5 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಅವಕಾಶವಿದೆ. ಯೋಜನೆಯಿಂದ ಸುಮಾರು 4996 ಹೆಕ್ಟೇರ್‌ ಅರಣ್ಯ ಮುಳುಗಡೆಯಾಗಲಿದೆ ಎಂದು ವಿವರಿಸಿದರು.

Advertisement

ಪ್ರಸ್ತುತ ಪ್ರತಿ ವರ್ಷ ಕಬಿನಿ, ಕೆಆರ್‌ಎಸ್‌ ಮತ್ತು ಹೇಮಾವತಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ನ್ಯಾಯಾಧಿಕರಣದ ತೀರ್ಪಿನಂತೆ ತಿಂಗಳಿಗೆ ಇಂತಿಷ್ಟು ಎಂದು ಪ್ರತಿ ವರ್ಷ 192ಟಿಎಂಸಿ ನೀರು ಕಾವೇರಿಯಿಂದ ತಮಿಳುನಾಡಿಗೆ
ಹರಿಬೇಕಾಗಿದೆಯಾದರೂ ಮಧ್ಯೆ ಮಳೆ ಬರುವುದು ಸೇರಿದಂತೆ ನಾನಾ ಕಾರಣಗಳಿಂದ ವಾರ್ಷಿಕ 25ರಿಂದ 225 ಟಿಎಂಸಿಯಷ್ಟು ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಇದನ್ನು ತಪ್ಪಿಸಲು ಕೆಆರ್‌ಎಸ್‌ ಮತ್ತು ತಮಿಳುನಾಡಿನ ಗಡಿ ಮಧ್ಯೆ ಮೇಕೆದಾಟು ಬಳಿ ಒಂದು ಸಮತೋಲನ ಜಲಾಶಯ ನಿರ್ಮಿಸಲು ಸರ್ಕಾರ ಈ ಹಿಂದೆ ಯೋಚಿಸಿತ್ತು. ಅದರಂತೆ ಈಗ ಅನುಮೋದನೆ ನೀಡಲಾಗಿದ್ದು, ಇದರಿಂದ ತಮಿಳುನಾಡಿಗೆ ವಾರ್ಷಿಕ ಹರಿಯುವ 192 ಟಿಎಂಸಿ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಧವಮಂತ್ರಿ ಅಣೆಕಟ್ಟೆ: ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ತಲಕಾಡು ಗ್ರಾಮದ ಬಳಿಕ ಇರುವ 1140 ವರ್ಷದ ಹಿಂದೆ ಕಲ್ಲುಗಳಿಂದ ನಿರ್ಮಿಸಿರುವ ಮಾಧವ ಮಂತ್ರಿ ಅಣೆಕಟ್ಟೆಯನ್ನು 62.21 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ತುಬಚಿ-ಬಬಲೇಶ್ವರ ಏತ ನೀರಾವರಿ: ಅದೇ ರೀತಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಳೆಜನವಾಡ ಗ್ರಾಮದ ಬಳಿ ಕೃಷ್ಣಾ ನದಿಯ 6.30 ಟಿಎಂಸಿ ನೀರು ಬಳಸಿಕೊಂಡು ವಿಜಯಪುರ, ಅಥಣಿ ಮತ್ತು ಜಮಖಂಡಿ ತಾಲೂಕಿನ 52,700 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ ಪದ್ಧತಿಯಿಂದ ನೀರಾವರಿ ಒದಗಿಸುವ ಏತ ನೀರಾವರಿ ಯೋಜನೆಯ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next