Advertisement

ಅಸಮಾನತೆ ತೊಲಗಿದರೆ ದೇಶದ ಪ್ರಗತಿ

10:09 AM Oct 13, 2017 | Team Udayavani |

ಬೆಂಗಳೂರು: “ಸಮಾಜದಲ್ಲಿನ ಅಸಮಾನತೆಗಳು ತೊಲಗದ ಹೊರತು, ಭಾರತ ಸೂಪರ್‌ಪವರ್‌ ಆಗಲು ಸಾಧ್ಯವಿಲ್ಲ, ಸೂಪರ್‌ಪವರ್‌ ಆಗಿರುವ ಅಮೆರಿಕ, ಚೀನದಂತಹ ದೇಶಗಳೊಂದಿಗೆ ಪೈಪೋಟಿ ನಡೆಸಲಿಕ್ಕೂ ಶಕ್ತ ಆಗುವುದಿಲ್ಲ ಎಂದು ಹಿರಿಯ ಪತ್ರಕರ್ತ ಹಾಗೂ ಲೋಹಿಯಾ ಒಡನಾಡಿ ಮದನಲಾಲ್‌ ಹಿಂದ್‌ ಅಭಿಪ್ರಾಯಪಟ್ಟರು.

Advertisement

ನಗರದ ಗಾಂಧಿ ಭವನದಲ್ಲಿ ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಗಾಂಧಿ ಸ್ಮಾರಕ ನಿಧಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕೋಶ ಸಂಯುಕ್ತವಾಗಿ ಗುರುವಾರ ಹಮ್ಮಿಕೊಂಡಿದ್ದ “ಲೋಹಿಯಾ ನೆನಪು-50′ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ, ಆರ್ಥಿಕ ಅಸಮಾನತೆಯಿಂದ ದೇಶ ಬಳಲುತ್ತಿದೆ. ಈ ಅಸಮಾನತೆಗಳನ್ನು ಹೋಗಲಾಡಿಸದೆ, ಭಾರತ ಸೂಪರ್‌ಪವರ್‌ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.

ದೇಶದ ಪ್ರಧಾನಿ, ಮುಖ್ಯಮಂತ್ರಿಯಿಂದ ಹಿಡಿದು ಒಬ್ಬ ಕೂಲಿ ಕಾರ್ಮಿಕನವರೆಗಿನ ಎಲ್ಲ ಮಕ್ಕಳಿಗೂ ಏಕರೂಪ ಶಿಕ್ಷಣದ ಕನಸು ಕಂಡಿದ್ದರು ಲೋಹಿಯಾ. ಆದರೆ, ಇಂದು ಒಂದೆಡೆ ಒಂದು ಮಗುವಿನ ಪ್ರಾಥಮಿಕ ಶಿಕ್ಷಣಕ್ಕೆ ತಿಂಗಳಿಗೆ 50 ಸಾವಿರ ರೂ. ಸುರಿಯಲಾಗುತ್ತಿದೆ. ಮತ್ತೂಂದೆಡೆ ಮಗುವಿನ ಶಿಕ್ಷ ಣಕ್ಕೂ ಗತಿ ಇಲ್ಲ. ಎಲ್ಲಿಯವರೆಗೆ ಪ್ರಾಥಮಿಕ ಶಿಕ್ಷಣದಲ್ಲಿ ಸಮಾನತೆ ಬರುವುದಿಲ್ಲವೋ ಅಲ್ಲಿಯವರೆಗೂ ಲೋಹಿಯಾ ಪ್ರಸ್ತುತ ಆಗಿರುತ್ತಾರೆ ಎಂದು ತಿಳಿಸಿದರು.

ಪರ್ಯಾಯ ಸಾಂಸ್ಕೃತಿಕ ರಾಜಕಾರಣ ಬೇಕು: “ಕರ್ನಾಟಕ ರಾಜಕಾರಣದಲ್ಲಿ ಲೋಹಿಯಾ ಚಿಂತನೆಗಳ ಪ್ರಭಾವ’ ಕುರಿತು ಮಾತನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮಿನ್‌ಮಟ್ಟು, ಕೋಮುವಾದದ ಸಾಂಸ್ಕೃತಿಕ ರಾಜಕಾರಣ ಎದುರಿಸಲು ಪರ್ಯಾಯವಾದ ಮತ್ತೂಂದು ಸಾಂಸ್ಕೃತಿಕ ರಾಜಕಾರಣ ಕಟ್ಟುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. 

ಇಂದು ನಾವು ಮಾಡಬೇಕಾದದ್ದು ಚುನಾವಣಾ ರಾಜಕಾರಣವಲ್ಲ; ಸಾಂಸ್ಕೃತಿಕ ರಾಜಕಾರಣ. ಈ ನಿಟ್ಟಿನಲ್ಲಿ ಲೋಹಿಯಾ ಚಿಂತನೆ ಮಾತ್ರ ನಮಗೆ ಮಾದರಿ. ಯಾಕೆಂದರೆ, ಇಂದಿನ ಕೋಮುವಾದ ಎದುರಿಸಲು ಜಾತಿ ಮತ್ತು ಧರ್ಮದ ಬಗ್ಗೆ ಸ್ಪಷ್ಟತೆ ಇರಬೇಕು. ಇವೆರೆಡರ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಮಾತನಾಡಿದವರು ಲೋಹಿಯಾ. ರಾಜಕೀಯ ಸಂದೇಶದ ರವಾನೆಗೆ ಸಂಸ್ಕೃತಿ ಒಂದು ಸಾಧನ.

Advertisement

ರಾಜಕೀಯ ಎಂಬುದು ಅಲ್ಪಕಾಲೀನ ಧರ್ಮ; ಧರ್ಮ ಎನ್ನುವುದು ದೀರ್ಘ‌ಕಾಲೀನ ರಾಜಕೀಯ ಲೋಹಿಯಾ ಬಣ್ಣಿಸಿದ್ದರು ಎಂದರು. ಮಾಜಿ ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮಕುಮಾರ್‌, ಇಂದಿರಾ ಕೃಷ್ಣಪ್ಪ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next