Advertisement

ಶಾಸಕರ ಗುಣಗಾನಕ್ಕೆ ಕಾರ್ಯಕ್ರಮ “ಮೀಸಲು’

11:57 AM Oct 29, 2017 | |

ಬೆಂಗಳೂರು: ನಗರಕ್ಕೆ ಮತ್ತೂಂದು ಸಶಸ್ತ್ರ ಮೀಸಲು ಪಡೆ ಸೇರ್ಪಡೆಗೊಳಿಸುವ ಸಂಬಂಧ ಹೊರವಲಯದ ಉಲ್ಲಾಳದಲ್ಲಿ ನೂತನ ಸಿಎಆರ್‌ (ನಗರ ಸಶಸ್ತ್ರ ಮೀಸಲು ಪಡೆ) ಘಟಕ ನಿರ್ಮಾಣಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಆದರೆ ಮೀಸಲು ಪಡೆ ಸಿಬ್ಬಂದಿಯ ಸೇವೆ ಶ್ಲಾಘನೆಗೆ ಬದಲು ಸ್ಥಳೀಯ ಶಾಸಕರ ಗುಣಗಾನಕ್ಕೆ ಕಾರ್ಯಕ್ರಮ ಮೀಸಲಾಗಿತ್ತು.

Advertisement

ಜತೆಗೆ ಮುಂಬರಲಿರುವ ಚುನಾವಣೆ ಪ್ರಚಾರಕ್ಕೆ ವೇದಿಕೆಯಾಗಿ ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಸಿಎಆರ್‌ ಘಟಕ ನಿರ್ಮಾಣ ಕಾರ್ಯ ಜನವರಿ 2019ಕ್ಕೆ ಪೂರ್ಣಗೊಳ್ಳಲಿದೆ. ಆಗಲೂ ಶಾಸಕ ಸೋಮಶೇಖರ್‌ ಅವರೇ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಅಂದರೆ ಮುಂದಿನ ಬಾರಿಯೂ ಅವರನ್ನೇ ಗೆಲ್ಲಿಸುತ್ತೀರಿ ಎಂಬುದು ನನ್ನ ಮಾತಿನ ಅರ್ಥ ಎನ್ನುವ ಮೂಲಕ ಶಾಸಕರ ಗುಣಗಾನಕ್ಕೆ ಮುನ್ನುಡಿ ಬರೆದರು. ಅಷ್ಟಕ್ಕೇ ಸುಮ್ಮನಾಗದೆ, “3-4 ಬಾರಿ ಆಯ್ಕೆಯಾದ ಶಾಸಕರು ಮಾಡುವ ಕೆಲಸವನ್ನು ಒಂದೇ ಅವಧಿಯಲ್ಲಿ ಮಾಡಿರುವ ಸೋಮಶೇಖರ್‌, ಅಭಿವೃದ್ಧಿಯ ಹರಿಕಾರ,’ ಎಂದರು. ನಂತರ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಎಂ.ನಾರಾಯಣಸ್ವಾಮಿ ಕೂಡ ಸೋಮಶೇಖರ್‌ರನ್ನು ಹಾಡಿ ಹೊಗಳಿದರು. 

21 ಎಕರೆಯಲ್ಲಿ ನೂತನ ಘಟಕ: ಘಟಕ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಈಗಾಗಲೇ ನಗರದ ದಕ್ಷಿಣ ವಿಭಾಗದ ಆಡುಗೋಡಿ, ಕೇಂದ್ರ ವಿಭಾಗದಲ್ಲಿ ಮೈಸೂರು ರಸ್ತೆಯಲ್ಲಿ ಹಾಗೂ ಉತ್ತರ ವಿಭಾಗದ ಥಣಿಸಂದ್ರದಲ್ಲಿ ಸಿಎಆರ್‌ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಪಶ್ಚಿಮ ವಿಭಾಗದ ಉಲ್ಲಾಳದಲ್ಲಿನ 21 ಎಕರೆ ಜಾಗದಲ್ಲಿ ನೂತನ ಘಟಕ ನಿರ್ಮಾಣವಾಗಲಿದೆ.

ಇನ್ನು 15 ತಿಂಗಳಲ್ಲಿ ಘಟಕ ಲೋಕಾರ್ಪಣೆಯಾಗಲಿದೆ. ಇಲ್ಲಿ ಆಡಳಿತ ಕಚೇರಿ, ಎಂಟಿಓ ಮತ್ತು ಮೋಟಾರ್‌ ಟ್ರಾನ್ಸ್‌ಪೊàರ್ಟ್‌ ಶೆಡ್‌, ಕವಾಯಿತು ಮೈದಾನ ಸಿದ್ಧವಾಗಲಿದೆ. ಈ ಮೂಲಕ ಬೆಂಗಳೂರು ನಗರ ಮಾತ್ರವಲ್ಲ, ರಾಮನಗರಕ್ಕೂ ತುರ್ತುಪರಿಸ್ಥಿತಿಯಲ್ಲಿ ನೆರವಾಗಲಿದೆ ಎಂದರು.

Advertisement

ಘಾತುಕರನ್ನು ಮಟ್ಟಹಾಕಿ: ಸಮಾಜದಲ್ಲಿ ಗೂಂಡಾಗಿರಿ, ಪುಂಡಾಟಿಕೆ ಮಟ್ಟಹಾಕುವ ಜತೆಗೆ, ಶಾಂತಿ ಕದಡುವ ಸಮಾಜಘಾತುಕರನ್ನು ಮಟ್ಟಹಾಕಲು ಪೊಲೀಸರು ಮುಂದಾಗಬೇಕು ಎಂದು ಹೇಳಿದ ಸಚಿವರು, ನಗರದಲ್ಲಿ ಮಹಿಳೆಯರು ಸಂಚರಿಸುವ ಸ್ಥಳ ಹಾಗೂ ಶಾಲೆ, ಕಾಲೇಜುಗಳ ಅಕ್ಕ-ಪಕ್ಕ ಹೆಚ್ಚು ಸಿಬ್ಬಂದಿ ನಿಯೋಜಿಸಿ ರಕ್ಷಣೆ ಒದಗಿಸುವಂತೆ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಸಿಬ್ಬಂದಿ ಕೊರತೆ ಪರಿಹಾರ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಪೊಲೀಸರಿಗಾಗಿ 11 ಸಾವಿರ ಮನೆಗಳನ್ನು ನಿರ್ಮಿಸಿದ್ದು, ಸುಮಾರು 2 ಸಾವಿರ ಮನೆಗಳನ್ನು ಹಸ್ತಾಂತರಿಸಲಾಗಿದೆ. ಇನ್ನು ಐದು ಸಾವಿರ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಹಾಗೇ 24 ಸಾವಿರ ಪೊಲೀಸ್‌ ಸಿಬ್ಬಂದಿ ನೇಮಕಕ್ಕೆ ಅನುಮತಿ ನೀಡಿದ್ದು, ಸದ್ಯ 10 ಸಾವಿರಕ್ಕೂ ಅಧಿಕ ಮಂದಿಯ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಮೂಲಕ ಇಲಾಖೆಯ ಸಿಬ್ಬಂದಿ ಕೊರತೆ ಹಂತ-ಹಂತವಾಗಿ ಕಡಿಮೆಯಾಗಲಿದೆ ಎಂದು ತಿಳಿಸಿದರು.

3,750 ಕೋಟಿ ಮೀಸಲು: ನಗರದ ಅಭಿವೃದ್ಧಿಗಾಗಿ ಬಿಬಿಎಂಪಿಗೆ 3,750 ಕೋಟಿ ರೂ. ಮೀಸಲಿಟ್ಟಿದ್ದು, ಈ ಪೈಕಿ 1,750 ಕೋಟಿ ರೂ.ರಸ್ತೆ ಅಭಿವೃದ್ಧಿಗೆ ಬಳಕೆಯಾಗಿದೆ. ಉಳಿದಿರುವ 2 ಸಾವಿರ ಕೋಟಿ ರೂ. ಪೈಕಿ ಕಾಂಕ್ರಿಟ್‌ ರಸ್ತೆಗಳ ನಿರ್ಮಾಣಕ್ಕೆ 700 ಕೋಟಿ, ಟೆಂಡರ್‌ಶ್ಯೂರ್‌, ಸಿಂಗಲ್‌ ಮುಕ್ತ ಕಾರಿಡಾರ್‌ ನಿರ್ಮಾಣಕ್ಕೆ 600 ಕೋಟಿ ರೂ. ಮೀಸಲಿಡಲಾಗಿದೆ.

ಹಾಗೇ ಸರ್ಕಾರಿ ಜಾಗದಲ್ಲಿ ನೆಲೆಸಿರುವ ನಿರಾಶ್ರಿತರಿಗೆ ಹಕ್ಕುಪತ್ರ ವಿತರಿಸಲು ನಿರ್ಧರಿಸಿದ್ದು, ಇನ್ನೆರಡು ತಿಂಗಳಲ್ಲಿ ಫ‌ಲಾನುಭವಿಗಳು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌, ವಿಧಾನ ಪರಿಷತ್‌ ಸದಸ್ಯ ಎಂ.ನಾರಾಯಣಸ್ವಾಮಿ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ದತ್ತ, ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌,

-ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಮಾಲಿನಿ ಕೃಷ್ಣ ಮೂರ್ತಿ, ಹೀತೆಂದ್ರ, ಸೀಮಂತ್‌ ಕುಮಾರ್‌ ಸಿಂಗ್‌, ಐಜಿಪಿ ನಂಜುಂಡಸ್ವಾಮಿ, ಸಿಎಆರ್‌ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ರಾಜಪ್ಪ, ಸಿಎಆರ್‌ ಡಿಸಿಪಿ ಡಿ. ಕಿಶೋರ್‌ ಬಾಬು ಹಾಗೂ ನಗರದ ಎಲ್ಲ ವಿಭಾಗದ ಡಿಸಿಪಿಗಳು, ರಾಮನಗರ ಎಸ್ಪಿ ರಮೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next