Advertisement

ಪ್ರತಿ ಊರಿನ ಸಮಸ್ಯೆಗೆ ಕಾನೂರಿನಲ್ಲಿ ಪರಿಹಾರ

06:41 PM Apr 27, 2018 | |

ಎಲ್ಲರೂ ಆ ಟಿವಿ ಸ್ಟಾರ್‌ಗಾಗಿ ಕಾಯುತ್ತಿರುತ್ತಾರೆ. ಆದರೆ, ಎಷ್ಟು ಹೊತ್ತಾದರೂ ಅವನ ಸುಳಿವಿಲ್ಲ. ಅವನು ಬರದೆ ಕಾರ್ಯಕ್ರಮ ಪ್ರಾರಂಭವಾಗುವಂತಿಲ್ಲ. ಅಷ್ಟರಲ್ಲಿ ದೂರದಲ್ಲಿ ಗುಡುಗುಡು ಸೌಂಡು ಕೇಳುತ್ತದೆ. ದೂರದಲ್ಲಿ ಬೈಕಿನ ಮೇಲೆ ಕೂತು ಯಾರೋ ಬರುತ್ತಿರುತ್ತಾರೆ. ಅವರೇ ಟಿವಿ ಸ್ಟಾರ್‌ ಇರಬೇಕೆಂದು, ಅವರನ್ನು ನಿಲ್ಲಿಸಿ, ಎಳೆದು ಸಮಾರಂಭಕ್ಕೆ ಕರೆದುಕೊಂಡು ಹೋಗಿ ಕೂರಿಸುತ್ತಾರೆ. ಆತನ ಬರುವಿಕೆಯಿಂದ ಆ ಊರಿನ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿ ಹೋಗುತ್ತದೆ.

Advertisement

ಆತ ಟಿವಿ ಸ್ಟಾರ್‌ ಅಲ್ಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯ … “ಕಾನೂರಾಯಣ’ ಒಬ್ಬ ವ್ಯಕ್ತಿಯ ಕಥೆಯಲ್ಲ. ಇದೊಂದು ಹಳ್ಳಿಯ ಕಥೆ. ಕಾನೂರು ಎಂಬ ಪುಟ್ಟ ಹಳ್ಳಿಯ ಕಥೆ. ಗುರುವ, ರಂಗ, ಚೆಲುವಿ, ಗೌರಿ ಹೀಗೆ ನೂರೆಂಟು ಜನ ಈ ಗ್ರಾಮದಲ್ಲಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಈ ಎಲ್ಲರ ಸಮಸ್ಯೆಗಳಿಗೆ ಮೂಲ ಕಾರಣ ಆರ್ಥಿಕ ಸಮಸ್ಯೆ. ಆರ್ಥಿಕ ಶಿಸ್ತಿಲ್ಲದಿದ್ದರೆ ಈ ಆರ್ಥಿಕ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂಬುದನ್ನು ಆ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯ ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತಾ ಹೋಗುತ್ತಾನೆ.

ಇದರಿಂದ ಸಹಜವಾಗಿಯೇ ಊರಿನ ಇನ್ನೊಂದು ವರ್ಗದ ಜನ ಅವರ ಕಾಲೆಳೆಯುತ್ತಾರೆ. ಈ ಎಲ್ಲದರ ಮಧ್ಯೆ ಕಾನೂರಿನ ಜನ ಆರ್ಥಿಕ ಶಿಸ್ತು ರೂಢಿಸಿಕೊಳ್ಳುತ್ತಾರೋ, ಇಲ್ಲವೋ ಎಂಬುದು ಚಿತ್ರದ ಕಥೆ. ಗ್ರಾಮೀಣ ಭಾಗದಲ್ಲಿನ ಸಮಸ್ಯೆಗಳ ಕುರಿತಾಗಿ ಹಲವಾರು ಚಿತ್ರಗಳು ಇದುವರೆಗೂ ಬಂದಿದ್ದರೂ, ಆರ್ಥಿಕ ಶಿಸ್ತು ರೂಢಿಸುವ ಕುರಿತು ಮತ್ತು ಸ್ವಸಹಾಯ ಸಂಘಗಳ ಪ್ರಾಮುಖ್ಯತೆಗೆ ಕನ್ನಡದಲ್ಲಿ ಇದುವರೆಗೂ ಚಿತ್ರವೊಂದು ನಿರ್ಮಾಣವಾಗಿರಲಿಲ್ಲ. ಅಂಥದ್ದೊಂದು ಕೊರಗನ್ನು “ಕಾನೂರಾಯಣ’ ನೀಗಿಸಿದೆ.

ಇದುವರೆಗೂ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಮಾಡುತ್ತಿದ್ದ ಕೆಲಸಗಳನ್ನು ಈ ಚಿತ್ರದ ಮೂಲಕ ತೆರೆಯ ಮೇಲೆ ತರುವುದರ ಜೊತೆಗೆ, ಜಾಗೃತಿ ಮೂಡಿಸಲಾಗಿದೆ. ಆರ್ಥಿಕ ಶಿಸ್ತು ರೂಢಿಸಿಕೊಳ್ಳದೇ ಇದ್ದರೆ, ಸಮಸ್ಯೆಗೆ ಪರಿಹಾರವಿಲ್ಲ ಎಂಬ ಸಂದೇಶವನ್ನು ನೀಡಲಾಗಿದೆ. ಇಲ್ಲಿ ಚಿತ್ರದ ಆಶಯ ಮತ್ತು ವಿಸ್ತಾರ ಎರಡೂ ದೊಡ್ಡದು. ಆದರೂ ಎರಡೂವರೆ ಗಂಟೆಯಲ್ಲಿ ಕೆಲವು ಪಾತ್ರಗಳನ್ನಿಟ್ಟುಕೊಂಡು ಹೇಳುವ ಪ್ರಯತ್ನವನ್ನು ನಾಗಾಭರಣ ಮಾಡಿದ್ದಾರೆ.

ಒಂದು ಊರಿನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ಹಿನ್ನೆಲೆಯಾಗಿಟ್ಟುಕೊಂಡು, ಒಂದಿಷ್ಟು ಪಾತ್ರಗಳ ಮೂಲಕ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಇಂತಹ ಚಿತ್ರಗಳಲ್ಲಿ ಮನರಂಜನೆ ಹುಡುಕುವುದು ಕಷ್ಟ. ಏಕೆಂದರೆ, ಇಲ್ಲಿ ಕಥಾವಸ್ತುವೇ ಹಾಗಿದೆ. ಆದರೂ ಆಶಯಕ್ಕೆ ಚ್ಯುತಿ ಬರದಂತೆ ಒಂದು ಮನರಂಜನಾತ್ಮಕ ಚಿತ್ರವನ್ನು ಮಾಡಿದ್ದಾರೆ. ಒಂದಿಷ್ಟು ದೃಶ್ಯಗಳು ಎಳೆದಾಡಿದಂತಾಗಿದ್ದು, ಟ್ರಿಮ್‌ ಮಾಡುವ ಅವಕಾಶವಿತ್ತು. ಇನ್ನಷ್ಟು ಚುರುಕಾಗಿ ಹೇಳುವ ಸಾಧ್ಯತೆ ಇತ್ತು.

Advertisement

ಬಹುಶಃ ಇದೊಂದು ಬಿಟ್ಟರೆ, ಬೇರೆ ಅಪಸ್ವರಗಳನ್ನು ಹುಡುಕುವುದು ಕಷ್ಟ. ಚಿತ್ರದಲ್ಲಿ ಪ್ರತಿಭಾವಂತ ಕಲಾವಿದರ ದೊಡ್ಡ ದಂಡನ್ನೇ ಕಲೆಹಾಕಿದ್ದಾರೆ ನಾಗಾಭರಣ. ದೊಡ್ಡಣ್ಣ, ಅಶ್ವತ್ಥ್ ನೀನಾಸಂ, ಸೋನು, ಸ್ಕಂದ ಅಶೋಕ್‌, ಮನು ಹೆಗಡೆ, ಕರಿಸುಬ್ಬು, ಸುಂದರ್‌ ರಾಜ್‌, ಸುಂದರ್‌, ಗಿರಿಜಾ ಲೋಕೇಶ್‌, ಜಾಹ್ನವಿ ಹೀಗೆ ಎಲ್ಲರೂ ಅಚ್ಚುಕಟ್ಟಾಗಿ ತಮ್ಮ ಕೆಲಸವನ್ನು ಮಾಡಿ ಮುಗಿಸಿದ್ದಾರೆ. ಇನ್ನೊಂದಿಷ್ಟು ಪಾತ್ರಗಳು ಗಮನಸೆಳೆಯುತ್ತವೆ. ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದು, ಹಾಡುಗಳು ಖುಷಿಕೊಡುತ್ತವೆ.

ಚಿತ್ರ: ಕಾನೂರಾಯಣ
ನಿರ್ಮಾಣ: ಎಸ್.ಕೆ.ಡಿ.ಆರ್.ಡಿ.ಪಿ ಯ 20ಲಕ್ಷ ಸದಸ್ಯರು
ನಿರ್ದೇಶನ: ಟಿ.ಎಸ್‌. ನಾಗಾಭರಣ
ತಾರಾಗಣ: ಸ್ಕಂದ ಅಶೋಕ್‌, ಸೋನು ಗೌಡ, ದೊಡ್ಡಣ್ಣ, ಜಾಹ್ನವಿ, ಮನು ಹೆಗಡೆ, ಅಶ್ವತ್ಥ್ ನೀನಾಸಂ ಮುಂತಾದವರು

* ಚೇತನ್ ನಾಡಿಗೇರ್

Advertisement

Udayavani is now on Telegram. Click here to join our channel and stay updated with the latest news.

Next