Advertisement

ವಾರ್ಡ್‌ ವಿಂಗಡಣೆ ಬಳಿಕ ಹೆಚ್ಚಲಿದೆ ಜನರ ಸಮಸ್ಯೆ

02:39 PM Jun 14, 2022 | Team Udayavani |

ಬೆಂಗಳೂರು: ಬಿಬಿಎಂಪಿ ವಾರ್ಡ್‌ ಹೆಚ್ಚಳದಿಂದಾಗಿ ಪಾಲಿಕೆ ಅಧಿಕಾರಿಗಳಿಗೆ ಮಾನವ ಸಂಪನ್ಮೂಲ ಒದಗಿಸುವ ಮತ್ತು ಆರ್ಥಿಕ ಸಮತೋಲನ ತರುವ ತಲೆಬಿಸಿ ಎದುರಾಗಲಿದೆ. ಅದರ ಜತೆಗೆ ಸರಿಯಾದ ಮಾಹಿತಿ, ಸೇವೆ ಸಿಗದೆ ಜನರ ಸಮಸ್ಯೆಯೂ ಹೆಚ್ಚಲಿದೆ.

Advertisement

ಬಿಬಿಎಂಪಿಯ 198 ವಾರ್ಡ್‌ಗಳನ್ನು ಜನಸಂಖ್ಯೆ ಆಧಾರದಲ್ಲಿ 243 ವಾರ್ಡ್‌ಗಳಿಗೆ ಹೆಚ್ಚಿಸಿ ಮರುವಿಂಗಡಿಸ ಲಾಗಿದೆ. ಈ ಕುರಿತ ಕರಡು ವರದಿಯನ್ನು ವಾರ್ಡ್‌ ಮರುವಿಂಗಡಣಾ ಸಮಿತಿ ಸರ್ಕಾರಕ್ಕೆ ಈಗಾಗಲೆ ಸಲ್ಲಿಸಿದೆ. ಕೆಲ ದಿನಗಳಲ್ಲಿ ಸಾರ್ವಜನಿಕ ಆಕ್ಷೇಪಣೆಗೆ ಅದನ್ನು ಪ್ರಕಟಿಸಲಾಗುತ್ತದೆ. ನಂತರ ಆಕ್ಷೇಪಣೆ ಸರಿಪಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗುತ್ತದೆ. ಜುಲೈ 20ರೊಳಗೆ ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದೆ.

ಸಮಯಾವಕಾಶ ಕಡಿಮೆಯಿದ್ದರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಹೊಸದಾಗಿ ಸೃಷ್ಟಿಯಾಗುವ 45 ವಾರ್ಡ್‌ಗಳಲ್ಲಿ ಮೂಲಸೌಕರ್ಯ ಒದಗಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಹೀಗಾಗಿ 243 ವಾರ್ಡ್‌ ಗಳಾದರೂ ಜನರ ಸಮಸ್ಯೆಗೆ ಮಾತ್ರ ಸೂಕ್ತ ರೀತಿಯಲ್ಲಿ ಪರಿಹಾರ ಸಿಗದಂತಾಗುತ್ತದೆ. ವಾರ್ಡ್‌ ಮರುವಿಂಗಡಣೆಯಿಂದಾಗಿ ವಾರ್ಡ್‌ ಮಟ್ಟದಲ್ಲಿ ಕೆಲಸ ಮಾಡುವ ಸಹಾಯಕ ಕಂದಾಯ ಅಧಿಕಾರಿ, ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌, ಸಹಾಯಕ ಕಂದಾಯ ಅಧಿಕಾರಿಗಳು ಸೇರಿ 20ರಿಂದ 250 ಹೆಚ್ಚುವರಿ ಸಿಬ್ಬಂದಿ ಅವಶ್ಯಕತೆಯಿದೆ. ಅಲ್ಲದೆ, ಸದ್ಯ ಬಿಬಿಎಂಪಿಯ 198 ವಾರ್ಡ್‌ಗಳ ಪೈಕಿ 50ಕ್ಕೂ ಹೆಚ್ಚಿನ ವಾರ್ಡ್‌ಗಳಲ್ಲಿ ಇಂಜಿನಿಯರ್‌ ಹುದ್ದೆಗಳು ಖಾಲಿಯಿವೆ. ಹೀಗಾಗಿ ವಾರ್ಡ್‌ ಮಟ್ಟದಲ್ಲಿನ ಅನೇಕ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಹೀಗಾಗಿ ಸೂಕ್ತ ಸಂಖ್ಯೆಯಲ್ಲಿ ಸಿಬ್ಬಂದಿ ನೇಮಕ ಅತ್ಯಗತ್ಯವಾಗಿದೆ.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ: ಬಿಬಿಎಂಪಿಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ವಿವಿಧ ಹುದ್ದೆಗೆ 1500 ಸಿಬ್ಬಂದಿ ನೇಮಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಹೊಸ ವಾರ್ಡ್‌ಗಳಿಗೂ ಬೇಕಾಗುವ ಸಿಬ್ಬಂದಿ ಪಟ್ಟಿಯಿದೆ. ಆದರೆ ಸರ್ಕಾರದಿಂದ ಈವರೆಗೆ ಪ್ರಸ್ತಾವನೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾ ರದ ಅನುಮೋದನೆ ದೊರೆತ ನಂತರವೂ ಕೆಪಿಎಸ್‌ಸಿ ಮೂಲಕ ಸಿಬ್ಬಂದಿ ಮೂಲಕ ಮಾಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗೆ ಕನಿಷ್ಠ 3ರಿಂದ 4 ತಿಂಗಳು ಬೇಕಾಗುತ್ತದೆ. ಹೀಗಾಗಿ ವಾರ್ಡ್‌ ಮರುವಿಂಗಡಣೆ ನಂತರ ನಡೆಯುವ ಬಿಬಿಎಂಪಿ ಚುನಾವಣೆಗೂ ಮುನ್ನ ಸಿಬ್ಬಂದಿ ನೇಮಕ ಕಷ್ಟ ಎಂದೇ ಹೇಳಲಾಗುತ್ತಿದೆ. ಅದರ ಜತೆಗೆ ಪ್ರತಿ ವಾರ್ಡ್‌ಗಳು ಹೊಸದಾಗಿ ವಾರ್ಡ್‌ ಕಚೇರಿಗಳನ್ನು ತೆರೆಯಬೇಕು. ಆದರೆ ವಲಯ ಆಯುಕ್ತರಿಗಾಗಿ ಪ್ರತಿ ವಲಯಗಳಲ್ಲಿ ಕಚೇರಿ ಆರಂಭಿಸಲು ಸೂಕ್ತ ಕಟ್ಟಡ ಹುಡುಕಲಾಗುತ್ತಿದೆ. ಆದರೆ ಈವರೆಗೆ ಕಚೇರಿ ಆರಂಭಿಸುವಂತಹ ಕಟ್ಟಡ ಸಿಕ್ಕಿಲ್ಲ. ಹೀಗಿರುವಾಗ ವಾರ್ಡ್‌ ಕಚೇರಿಗೆ ಸೂಕ್ತ ಕಟ್ಟಡ ಹುಡುಕುವುದಕ್ಕೆ ಸಾಕಷ್ಟು ಪ್ರಯತ್ನ ಪಡಬೇಕಿದೆ.

ಪೂರ್ವ ಸಿದ್ಧತೆ ಮಾಡಿಕೊಳ್ಳದ ಪಾಲಿಕೆ: ಸದ್ಯ ಬಿಬಿ ಎಂಪಿ ವಾರ್ಡ್‌ ಮರುವಿಂಗಡಣೆಗೂ ಮುನ್ನ ಮಾಡ ಬೇಕಾದ ಯಾವ ಕೆಲಸವನ್ನೂ ಬಿಬಿಎಂಪಿ ಆರಂಭಿಸಿಲ್ಲ. ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆಯಾ ದರೂ, ಅದು ಕಾರ್ಯಗತಗೊಳ್ಳುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಉಳಿದಂತೆ ಯಾವ ಸಿದ್ಧತೆಯನ್ನೂ ಬಿಬಿಎಂಪಿ ಮಾಡಿಕೊಂಡಿಲ್ಲ.

Advertisement

ಸಮಸ್ಯೆ ಹೆಚ್ಚಲಿದೆ: ವಾರ್ಡ್‌ ಮರುವಿಂಗಡಣೆ ಯಿಂದಾಗಿ ಸಾರ್ವಜನಿಕರ ಸಮಸ್ಯೆ ನೀಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈ ಪ್ರಕ್ರಿಯೆಯಿಂದ ಜನರ ಸಮಸ್ಯೆ ಮತ್ತು ಗೊಂದಲ ಇನ್ನಷ್ಟು ಹೆಚ್ಚಲಿದೆ. ತಾವು ವಾಸಿಸುವ ವಾರ್ಡ್‌ ಯಾವುದು ಎಂಬುದು ತಿಳಿಯಲೇ ಅವರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಅದರಲ್ಲೂ ಹೊಸ ವಾರ್ಡ್‌ಗಳಲ್ಲಿನ ನಿವಾಸಿಗಳು ತಮ್ಮ ವಾರ್ಡ್‌ ಕಚೇರಿ ಎಲ್ಲಿ ಎಂಬುದನ್ನು ಪತ್ತೆ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಅಲ್ಲದೆ, ವಾರ್ಡ್‌ ಕಚೇರಿ ಆರಂಭ ಸೇರಿ ಇನ್ನಿತರ ಪ್ರಕ್ರಿಯೆಗಳು ವಿಳಂಬವಾದರೆ ಆ ವಾರ್ಡ್‌ನ ಜನರ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ.

ಬಜೆಟ್‌ನಲ್ಲಿ ಬದಲಾವಣೆ : ಬಿಬಿಎಂಪಿ ಸದ್ಯ ಪ್ರತಿ ವಾರ್ಡ್‌ಗಳಿಗೂ ವಾರ್ಡ್‌ ಮಟ್ಟದ ಕಾಮಗಾರಿಗಾಗಿ ಅನುದಾನ ನೀಡುತ್ತದೆ. ಅದರಂತೆ ಹಳೇ ವಾರ್ಡ್‌ಗಳಿಗೆ 2 ಕೋಟಿ ರೂ. ಹಾಗೂ ಹೊಸ ವಾರ್ಡ್‌ ಗಳಿಗೆ 3 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ನಿಗದಿ ಮಾಡಲಾಗಿದೆ. ಆದರೆ, ಇದೀಗ ಹೊಸದಾಗಿ 45 ವಾರ್ಡ್‌ಗಳು ಸೃಷ್ಟಿಯಾಗುವು ದರಿಂದ ಆ ವಾರ್ಡ್‌ ಗಳಿಗೂ ಅನುದಾನ ನೀಡಬೇಕು. ಹೀಗಾಗಿ ವಾರ್ಡ್‌ ಗಳಿಗೆ ಅನುದಾನ ನೀಡಲು ಬಿಬಿಎಂಪಿಗೆ 100ರಿಂದ 130 ಕೋಟಿ ರೂ.ಗಳ ಅವಶ್ಯಕತೆಯಿದೆ. ಅದರ ಜತೆಗೆ ಬಜೆಟ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಿದೆ.

ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ನಂತರ ಬೇಕಾಗುವ ಹಾಗೂ ಖಾಲಿ ಹುದ್ದೆಗಳ ಭರ್ತಿಗೆ ಸಿಬ್ಬಂದಿಗಳ ನೇಮಕಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ದೊರೆತ ನಂತರ ಕೆಪಿಎಸ್‌ಸಿ ಮೂಲಕ ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು. – ರಂಗಪ್ಪ, ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ)

 

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next