Advertisement

ಕುಡಿಯುವ ನೀರಿನ ಸಮಸ್ಯೆ ಉಲ್ಬಣ

11:19 AM May 08, 2019 | Team Udayavani |

ಬನಹಟ್ಟಿ: ಸ್ಥಳೀಯ ಮೋಪಗಾರ ಗಲ್ಲಿ, ಬಡ್ಡೂರ ಲೇನ್‌ಹಾಗೂ ಗುಡ್ಡದ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ನಿವಾಸಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಜನರು ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಕೊಡಗಳನ್ನು ಸರತಿಯಲ್ಲಿ ಇಟ್ಟು ಕಾಯುವಂತಾಗಿದೆ. ಇಲ್ಲಿಯ ಕೊಳವೆ ಬಾವಿ ಕೇವಲ ಅರ್ಧ ಗಂಟೆ ಮಾತ್ರ ನೀರು ಒದಗಿಸುತ್ತದೆ. ಮತ್ತೆ ಇದನ್ನು ಮೂರು ಗಂಟೆಗಳ ಕಾಲ ಬಂದ್‌ ಮಾಡಬೇಕಾಗುತ್ತದೆ ಎನ್ನ್ತುಾರೆ ಇಲ್ಲಿಯ ನಿವಾಸಿಗಳು. ಇಲ್ಲಿಯ ಜನರು ಕೊಡಗಳನ್ನು ಮನೆಗೆ ತೆಗೆದುಕೊಂಡು ಹೋಗದೆ ಸರತಿಯಲ್ಲಿಟ್ಟಿರುತ್ತಾರೆ. ಇನ್ನೂ ಬಿಸಿಲಿನ ತಾಪದಿಂದ ರಕ್ಷಣೆ ಮಾಡಲು ಅವುಗಳ ಮೇಲೆ ಬಟ್ಟೆಗಳನ್ನು ಇಲ್ಲವೆ ಕಾಗದದ ರಟ್ಟುಗಳನ್ನು ಇಟ್ಟು ರಕ್ಷಣೆ ಮಾಡುತ್ತಿದ್ದಾರೆ.

ಇನ್ನೂ ಮೋಪಗಾರ ಗಲ್ಲಿಯಲ್ಲಿಯ ಸಾರ್ವಜನಿಕರಿಗೆ ಒಂದು ದಿನಕ್ಕೆ ಕೇವಲ ಹತ್ತು ಕೊಡಗಳಷ್ಟು ಮಾತ್ರ ನೀರು ದೊರೆಯುತ್ತಿದೆ. ಅಲ್ಲಿಯ ನಿವಾಸಿಗಳು ಕೂಡಾ ಕೊಡಗಳನ್ನು ನಿರಂತರವಾಗಿ ಸರತಿಯಲ್ಲಿ ಇಟ್ಟಿರುತ್ತಾರೆ. ಮನೆಗೆ ಕೊಡ ತೆಗೆದುಕೊಂಡು ಹೋಗುವುದಿಲ್ಲ.ನಿರಂತರವಾಗಿ ನೀರಿಗಾಗಿ ಕಾಯುವಂತಾಗಿದೆ ಎನ್ನುತ್ತಾರೆ ಇಲ್ಲಿಯ ನಿವಾಸಿ ಶಶಿ ಮೋಪಗಾರ. ನಗರಸಭೆಯವರು ಕೆಲ ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ಆದರೆ ಈ ನೀರು ಯಾವುದಕ್ಕೂ ಸಾಕಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಸದಾಶಿವಪ್ಪನ ದೇವಸ್ಥಾನದ ಹತ್ತಿರದ ಸಾರ್ವಜನಿಕರು.

ರಬಕವಿಯ ಆಶ್ರಯ ಕಾಲೊನಿಯ ನಿವಾಸಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮದನಮಟ್ಟಿ ಗ್ರಾಮದಿಂದ ಅಂದಾಜು 1.3 ಕಿ.ಮೀ ಪೈಪ್‌ಲೈನ್‌ ಅಳವಡಿಸಿ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಐದು ದಿನಗಳಿಂದ ಇಲ್ಲಿಯ ನಿವಾಸಿಗಳಿಗೆ ನೀರು ಪೂರೈಸುತ್ತಿರುವುದಾಗಿ ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತ ಆರ್‌.ಎಂ.ಕೊಡುಗೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next