Advertisement
ಪಾಕಿಸ್ಥಾನದಲ್ಲಿ ಸರಕಾರ ಬದಲಾದ ಬಳಿಕ ಉಗ್ರವಾದದತ್ತ ಇರುವ ಧೋರಣೆಯೂ ಬದಲಾದೀತೆಂಬ ಸಣ್ಣ ನಿರೀಕ್ಷೆ ಇತ್ತು. ನಿನ್ನೆಯ ದಾಳಿಯಿಂದಾಗಿ ಅದು ಹುಸಿಯಾಗಿದೆ. ಯಾವ ಸರಕಾರ ಬಂದರೂ ಪಾಕ್‌ನ ಚಾಳಿ ಬದಲಾಗದು ಎನ್ನುವುದು ಸ್ಪಷ್ಟ. ಅಸಲಿಗೆ ಈಗ ಅಲ್ಲಿ ಸರಕಾರ ಹೆಸರಿಗೆ ಮಾತ್ರ ಇದೆ. ನಿಯಂತ್ರಣವೆಲ್ಲಾ ಸೇನೆಯ ಕೈಯಲ್ಲಿದೆ. ಸೇನೆ ಮತ್ತು ಗೂಢಚಾರಿಕೆ ಸಂಸ್ಥೆ ಐಎಸ್‌ಐ ಸೇರಿಯೇ ಜೈಶ್ ಉಗ್ರ ಸಂಘಟನೆಯನ್ನು ಬಳಸಿ ಈ ಕೃತ್ಯ ಎಸಗಿದೆ ಎನ್ನುವ ಅಭಿಪ್ರಾಯ ಮೇಲ್ನೋಟಕ್ಕೆ ಕಾಣುವಂಥದ್ದು. ಅಮೆರಿಕದ ಬೇಹುಪಡೆಯ ಮಾಜಿ ಮುಖ್ಯಸ್ಥರೂ ಈ ಆಯಾಮದತ್ತ ಗಮನ ಸೆಳೆದಿದ್ದಾರೆ. ದಾಳಿಯ ಹೊಣೆ ಹೊತ್ತ ಜೈಶ್ ಉಗ್ರ ಸಂಘಟನೆಯನ್ನು ಪಾಕಿಸ್ಥಾನ 2002ರಲ್ಲಿಯೇ ನಿಷೇಧಿಸಿದೆ. ಆದರೆ ಈ ನಿಷೇಧ ಕಾಗದದಲ್ಲಿ ಮಾತ್ರ ಇದೆ. ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಪಂಜಾಬ್ ಪ್ರಾಂತ್ಯವನ್ನು ನೆಲೆಯಾಗಿ ಮಾಡಿಕೊಂಡು ಪಾಕಿಸ್ಥಾನದಾದ್ಯಂತ ಮುಕ್ತವಾಗಿ ಓಡಾಡುತ್ತ ಸಭೆಗಳನ್ನು ನಡೆಸಿ ಉಗ್ರಗಾಮಿ ಸಂಘಟನೆಗೆ ಸದಸ್ಯರನ್ನು ಸೇರಿಸುತ್ತಿದ್ದಾನೆ. ಸಂಸತ್ತಿನ ಮೇಲಾದ ದಾಳಿಯೂ ಸೇರಿದಂತೆ ಹಲವು ದಾಳಿಗಳನ್ನು ಮಸೂದ್ ಎಸಗಿದ್ದಾನೆ. ಆದರೆ ಪಾಕಿಸ್ಥಾನ ಇನ್ನೂ ಅವನ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇದು ಭಯೋತ್ಪಾದನೆಯತ್ತ ಆ ದೇಶ ಹೊಂದಿರುವ ದ್ವಿಮುಖ ನೀತಿಗೆ ಸಾಕ್ಷ್ಯ. ದಾಳಿಯ ದಾಖಲೆಗಳನ್ನು ಸಂಗ್ರಹಿಸಿ ಕೊಟ್ಟು ಉಗ್ರನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗೋಗರೆಯುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದು ಮುಂಬಯಿ ದಾಳಿಯಿಂದ ಅನುಭವಕ್ಕೆ ಬಂದಿದೆ. ಹೀಗಾಗಿ ಸರಕಾರ ಅವಂತಿಪೋರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿನ್ನ ದಾರಿಯನ್ನು ಆಯ್ದುಕೊಳ್ಳುವುದು ಸೂಕ್ತ. ಇದು ಒಂದು ದಾಳಿಗೆ ಎಸಗಿದ ಪ್ರತೀಕಾರವಾಗದೆ ಸಮಸ್ಯೆಯ ಮೂಲಕ್ಕೆ ಕೊಡುವ ಕೊಡಲಿ ಯೇಟಾಗಬೇಕು. ಭಯೋತ್ಪಾದನೆಗೆ ಸಂಬಂಧಿಸಿದಂತೆ ಅಮೆರಿಕ ಚೀನ ಕ್ರಮ ಕೈಗೊಂಡೀತು ಎಂದು ಕಾಯುವುದರಲ್ಲಿ ಅರ್ಥವಿಲ್ಲ. ಪಕ್ಕದ್ಲಲೇ ಶತ್ರು ಇರು ವಾಗ ದೂರದಿಂದ ಬರುವ ನೆರವಿನ ನಿರೀಕ್ಷೆಯಲ್ಲಿರುವುದಕ್ಕಿಂತ ಶತ್ರುವನ್ನು ಎದುರಿಸಲು ತಯಾರಿ ಮಾಡಿಟ್ಟುಕೊಳ್ಳುವುದು ಸರಿಯಾದ ಕ್ರಮ. ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆ ನಾವು ಎದುರಿಸುವ ಸಮಸ್ಯೆ, ಇದಕ್ಕೆ ನಾವೇ ಪರಿಹಾರವನ್ನು ಕಂಡುಕೊಳ್ಳಬೇಕು. ಇದಕ್ಕಾಗಿ ಅಂತರಾಷ್ಟ್ರೀಯ ವೇದಿಕೆಗಳೂ ಸೇರಿದಂತೆ ಇರುವ ಎಲ್ಲ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು.
Advertisement
ಸಮಸ್ಯೆಯ ಮೂಲಕ್ಕೆ ಕೊಡಲಿಯೇಟು ಹಾಕಬೇಕು
12:30 AM Feb 16, 2019 | |
Advertisement
Udayavani is now on Telegram. Click here to join our channel and stay updated with the latest news.