Advertisement

“ಜವಾಬ್ದಾರ ಗ್ರಾಹಕರಿಂದ ಸಮಸ್ಯೆ ರಹಿತ ಸಮಾಜ’

04:07 PM Mar 16, 2017 | Team Udayavani |

ಉಡುಪಿ: ವಸ್ತುಗಳನ್ನು ಖರೀದಿಸುವಾಗ ಜವಾಬ್ದಾರಿಯುತವಾಗಿದ್ದ ಗ್ರಾಹಕರಿಂದ ಸಮಸ್ಯೆ ರಹಿತ ಸಮಾಜವನ್ನು ಸೃಷ್ಟಿಸಲು ಸಾಧ್ಯವೆಂದು ಉಡುಪಿಯ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಲತಾ ಹೇಳಿದರು.

Advertisement

ಅವರು ವಿಶ್ವ ಗ್ರಾಹಕರ ದಿನಾಚರಣೆಯ ಅಂಗವಾಗಿ ಮಾ. 15ರಂದು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ “ಡಿಜಿಟಲ್‌ ಯುಗದಲ್ಲಿ ಗ್ರಾಹಕರ ಹಕ್ಕುಗಳು’ ಕುರಿತಾಗಿ ಜರಗಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಸ್ತುಗಳ ಖರೀದಿಯ ಮುನ್ನ ಗುಣಮಟ್ಟ, ಬೆಲೆ, ಮಾರಾಟದ ಅನಂತರ ಸೇವೆಗಳ ಬಗ್ಗೆಯೂ ಗ್ರಾಹಕ ಅತ್ಯಂತ ಜಾಗರೂಕನಾಗಿ ಅರಿತಿರಬೇಕು ಎಂದು ಸಲಹೆ ನೀಡಿದ ಅವರು ಡಿಜಿಟಲ್‌ ಯುಗದಲ್ಲಿ ಮಧ್ಯರಾತ್ರಿಯೂ ವಸ್ತುಗಳನ್ನು ಖರೀದಿಸುವ ದಿನಗಳು ಬಂದಿದ್ದು ಗ್ರಾಹಕನು ಮತ್ತಷ್ಟು ಎಚ್ಚರವಾಗಿರಬೇಕಾಗಿದೆ ಎಂದು ಅವರು ಹೇಳಿದರು.

ಅಧುನಿಕ ಯುಗದಲ್ಲಿ ಉತ್ಪಾದಕ ಮತ್ತು ಗ್ರಾಹಕರ ನಡುವಿನ ಅಂತರ ಹೆಚ್ಚಾಗುತ್ತಿದೆ. ವಸ್ತುಗಳ ಸುರಕ್ಷತೆಯ ಬಗ್ಗೆಯೂ ಗೊಂದಲಗಳು ಮೂಡುತ್ತಿವೆ. ಈ ನಿಟ್ಟಿನಲ್ಲಿ ಗ್ರಾಹಕರೂ ಪ್ರಥಮ ಖರೀದಿ ಅನಂತರ ಚಿಂತನೆ ನಡೆಸುವ ಬದಲು, ಮೊದಲು ಚಿಂತನೆ ಅನಂತರ ಖರೀದಿ ಮಾಡಬೇಕೆಂದು ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷರೂ, ನ್ಯಾಯಾಧೀಶರೂ ಆದ ಶೋಭಾ ಸಿ.ವಿ. ಹೇಳಿದರು.

ಕಾನೂನು ಮಾಪನಾ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಎಂ.ಎನ್‌. ಹಿಪ್ಪರಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ರಾಹಕರ ವೇದಿಕೆಯ ರವಿಶಂಕರ್‌, ಉಡುಪಿ ಜಿಲ್ಲಾ ಮಾಹಿತಿ ಕೇಂದ್ರ ಹಾಗೂ ಬಳಕೆದಾರರ ವೇದಿಕೆಯ ಸಂಚಾಲಕರಾದ ದಾಮೋದರ ಐತಾಳ್‌, ಎ.ಪಿ. ಕೊಡಂಚ, ಸತ್ಯನಾರಾಯಣ ಉಡುಪ, ಪ್ರವೀಣ್‌ ನಾಯಕ್‌, ವೆಂಕಟೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಎಸ್‌. ಯೋಗೇಶ್ವರ್‌ ಸ್ವಾಗತಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next