ಪಡುಬಿದ್ರಿ: ಸಣ್ಣ ನೀರಾವರಿ ಇಲಾಖೆ ಮೂಲಕ 6.5 ಕೋಟಿ ರೂ. ವೆಚ್ಚದಲ್ಲಿ ಪಲಿಮಾರಿನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಉಪ್ಪು ನೀರು ತಡೆ ಅಣೆಕಟ್ಟು ಅಪೂರ್ಣ ಕಾಮಗಾರಿಯಿಂದಾಗಿ ಸ್ಥಳೀಯರು ಸಮಸ್ಯೆ ಅನುಭವಿಸುವಂತಾಗಿದೆ.
ಸುಮಾರು 600 ಎಕರೆ ಪ್ರದೇಶಕ್ಕೆ ನೀರೊದಗಿಸುವ ಸಲುವಾಗಿ 25 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ನಿರ್ಮಿಸಿದ್ದ ಅಣೆಕಟ್ಟಿನ ಕಾಮಗಾರಿ ದೋಷದಿಂದ ಮುಕ್ತಿ ದೊರಕಲು ಹೊಸ ಅಣೆಕಟ್ಟನ್ನು ಹಳೆಯದಕ್ಕೆ ಹೊಂದಿಕೊಂಡಂತೆ ನೂತನ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಚುನಾವಣೆ ಹಾಗೂ ನಿರ್ಮಾಣ ಸಾಮಾಗ್ರಿಗಳ ಕೊರತೆಯಿಂದ ಯೋಜನೆ ವಿಳಂಬವಾಗಿ ಆರಂಭವಾದ ಪರಿಣಾಮ ಈ ಪ್ರದೇಶದ ಕೃಷಿಕರು ಹಾಗೂ ಗ್ರಾಮಸ್ಥರು ತೊಂದರೆ ಎದುರಿಸುವಂತಾಗಿದೆ.
ಮಳೆ ಆರಂಭವಾದ ಹಿನ್ನೆಲೆಯಲ್ಲಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಕೃಷಿ ಪ್ರದೇಶದ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸದ ಕಾರಣ ನೀರು ಮಲಿನಗೊಂಡಿದೆ. ಇದರಿಂದ ಬಿತ್ತನೆ ಮಾಡಿ ಹಲವಾರು ಎಕರೆ ಕೃಷಿಭೂಮಿಗೆ ಹಾನಿಯಾಗಿದೆ. ಭಾಗದಲ್ಲಿ ಸುಮಾರು 30 ಮನೆಗಳಿದ್ದು, ಬಾವಿಗಳ ನೀರು ಮಲಿನಗೊಂಡು ವಾಸನೆ ಬರುತ್ತಿದೆ. ಮಾರು ದೂರ ತೆರಳಿ ಕುಡಿಯುವ ನೀರು ತರಬೇಕಾದ ಪರಿಸ್ಥಿತಿ ಒದಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಅಣೆಕಟ್ಟಿನ ನಾಲ್ಕು ಕಡೆ ತಡೆಗೋಡೆ ನಿರ್ಮಾಣ ಮಾಡಿಲ್ಲ. ಸಿಹಿನೀರು ಹರಿಯಲು ಸಮರ್ಪಕವಾಗಿ ತೂಬು ಅಳವಡಿಸಿಲ್ಲ. ಮಳೆಗಾಲದಲ್ಲಿ ಕಳೆದ ವರ್ಷ ಈ ಭಾಗದ ಜನ ನೆರೆಯಿಂದ ತೊಂದರೆ ಅನುಭವಿಸಿದ್ದರೆ, ಈ ಬಾರಿ ಅಣೆಕಟ್ಟಿನ ಅಪೂರ್ಣ ಕಾಮಗಾರಿಯಿಂದ ಸಮಸ್ಯೆ ಎದುರಿಸುವಂತಾಗಿದೆ. ಒಂದು ವೇಳೆ ಮಳೆ ಜೋರಾಗಿ ಬಂದಲ್ಲಿ ಈ ಭಾಗದ ಜನ ಇನ್ನಷ್ಟು ಸಮಸ್ಯೆ ಎದುರಿಸಲಿದ್ದಾರೆ. ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಈ ಸ್ಥಳಕ್ಕೆ ರವಿವಾರ ಭೇಟಿಯಿತ್ತ ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಾನು ಈ ಕುರಿತಾಗಿ ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿರುವೆನು. ಅವರು ಪಲಿಮಾರು ಅಣೆಕಟ್ಟು ಪ್ರದೇಶಕ್ಕೆ ಭೇಟಿಯಿತ್ತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿರುವರು. ಅಣೆಕಟ್ಟು ಕಾಮಗಾರಿಯಿಂದಾಗಿ ಜನತೆಗೆ ಆಗುತ್ತಿರುವ ಸಮಸ್ಯೆಯನ್ನು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಕಾಪು ಶಾಸಕ ಲಾಲಾಜಿ ಮೆಂಡನ್ ಹೇಳಿದ್ದಾರೆ.
ಹಳೆ ಅಣೆಕಟ್ಟು ಭಾಗದಲ್ಲಿ ಕೃಷಿ ಭೂಮಿಗೆ ಸಿಹಿ ನೀರು ಹರಿಯಲು ತೂಬು ನಿರ್ಮಿಸಲಾಗಿತ್ತು. ಈಗ ಹೊಸ ಅಣೆಕಟ್ಟು ನಿರ್ಮಾಣದಿಂದ ಅದು ಮುಚ್ಚಿ ಹೋಗಿದೆ. ಈ ಬಗ್ಗೆ ಗುತ್ತಿಗೆದಾರರಿಗೆ ಗಮನಕ್ಕೆ ತಂದರೂ ಅದನ್ನು ಸರಿಪಡಿಸಿಲ್ಲ. ಅಲ್ಲದೆ ಕೃಷಿ ಭೂಮಿಗೆ ನೀರು ಹರಿಯುವ ತೋಡು ಮುಚ್ಚಿ ಹೋಗಿ ಕೃಷಿಗೆ ಹಾನಿಯಾಗಿದೆ. ಈ ತೋಡಿನ ಹೂಳೆತ್ತದೆ 20 ವರ್ಷಗಳಾಗಿದ್ದು, ಗಿಡಗಂಟಿಗಳಿಂದ ತೋಡು ಮುಚ್ಚಿ ನೀರು ಹರಿಯಲು ಅಡಚಣೆಯಾಗುತ್ತಿದೆ ಎಂಬುದಾಗಿ ಸ್ಥಳೀಯ ಕೃಷಿಕ ಉಮೇಶ್ ಕಟ್ಟದ ಮನೆ, ಪಲಿಮಾರು ಹೇಳುತ್ತಾರೆ