ಅಥಣಿ: ಮದುವೆ, ಉಪನಯನ, ಗೃಹಪ್ರವೇಶ ಸೇರಿದಂತೆ ವಿವಿಧ ಆಹ್ವಾನ ಪತ್ರಿಕೆಗಳ ಮುದ್ರಣ ಕಾರ್ಯ ಮಾಡುವ ಮುದ್ರಣಾಲಯಗಳು ಹಾಗೂ ಅಲ್ಲಿನ ಸಿಬ್ಬಂದಿ ಲಾಕಡೌನ್ ನಿಂದಾಗಿ ಕೆಲಸವಿಲ್ಲದೆ ಸಾಕಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್- ಎಪ್ರೀಲ್- ಮೇ ತಿಂಗಳಲ್ಲಿ ಬಹುತೇಕ ಮದುವೆಗಳು ನಡೆಯುತ್ತವೆ. ಆದರೆ ಇದೇ ಸಮಯದಲ್ಲಿ ಲಾಕ್‌ಡೌನ್ ಘೋಷಣೆಯಾಗಿ ಪ್ರಿಂಟಿಂಗ್ ಪ್ರಸ್ ಗಳು ಮುಚ್ಚಿವೆ. ಇದರಿಂದಾಗಿ ಮುದ್ರಣಾಲಯವನ್ನು ನಂಬಿದವರ ಬದುಕು ಮೂರಾಬಟ್ಟೆಯಾಗಿದೆ. ಅಥಣಿ ತಾಲೂಕಲ್ಲಿ 100ಕ್ಕೂ ಹೆಚ್ಚು ಆಫ್‌ಸೆಟ್ ಪ್ರಿಂಟಿಂಗ್ ಪ್ರಸ್ ಗಳಿದ್ದು, ಮುದ್ರಣಗಳಿದ್ದು ಸುಮಾರು 1200ಕ್ಕೂ ಅಧಿಕ ನೌಕರರಿದ್ದಾರೆ.
ಮುದ್ರಣಾಲಯಗಳ ಜೊತೆಗೆ ಈ ಉದ್ಯಮವನ್ನೇ ಅವಲಂಬಿಸಿರುವ ಬೈಂಡಿಂಗ್ ಮಾಡುವವರು, ನಂಬರ್ ಹಾಕುವವರು, ಡಿಟಿಪಿ ಮಾಡುವರು, ಹೀಗೆ ನೂರಾರು ಜನ ನಿತ್ಯದ ಬದುಕನ್ನು ಸಾಗಿಸಲು ಹರಸಾಹಸ ಪಡುವಂತಾಗಿದೆ. ಮಳಿಗೆ ಬಾಡಿಗೆ ಮಷಿನ್ ಸಾಲದ ಕಂತು ಕಟ್ಟುವುದು ಕಷ್ಟಕರವಾಗಿದೆ. ಆದ್ದರಿಂದ ಸರಕಾರ ನಮಗೂ ವಿಶೇಷ ಪ್ಯಾಕೇಜ್ ನೀಡಬೇಕೆಂಬುದು ಮಾಲೀಕರ ಒತ್ತಾಯವಾಗಿದೆ.
ನೆಲಕಚ್ಚಿನ ಡಿಜಿಟಲ್ ಮುದ್ರಣ: ಲಕ್ಷಾಂತರ ರೂ. ಬಂಡವಾಳ ತೊಡಗಿಸಿ ತಂದ ಮಲ್ಟಿ ಕಲರ್, ಐಡಿ ಕಾರ್ಡ್ ಮಷಿನ್, ಬ್ಯಾನರ್ ಮಷಿನ್, ಪೋಸ್ಟರ್ ಮಷಿನ್‌ಗಳಿಗೆ ಕೆಲಸವಿಲ್ಲದೇ ಹೆಚ್ಚಿನ ಬಂಡವಾಳ ಹೂಡಿ ಕಂಗಾಲಾಗಿದ್ದೇವೆ ಎನ್ನುತ್ತಿದ್ದಾರೆ ಮಾಲೀಕರು.
ಲಾಕ್‌ಡೌನ್ ಹೊಡೆತದಿಂದಾಗಿ ನಮ್ಮ ಮುದ್ರಣ ವ್ಯವಹಾರ ಸಂಪೂರ್ಣ ನೆಲಕಚ್ಚಿದ್ದು ಇದನ್ನ ನಂಬಿದ ಕಾರ್ಮಿಕರು ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ. ಸರ್ಕಾರ ನಮ್ಮನ್ನೂ ಕೂಡ ವಿಶೇಷ ಪ್ಯಾಕೇಜಿನಲ್ಲಿ ಸೇರಿಸಲಿ.
-ಮಹಾಂತೇಶ ಅಣೆಪ್ಪನವರ, ಮಾಲೀಕರು, ಪುರಾತನೇಶ್ವರ ಆಫ್‌ಸೆಟ್ ಪ್ರಿಂಟರ್ಸ, ಅಥಣಿ
-ಸಂತೋಷ ರಾ. ಬಡಕಂಬಿ