ಚಿಕ್ಕಬಳ್ಳಾಪುರ: ಸಂತ ಶ್ರೀ ಸೇವಾಲಾಲ್‌ರವರ ಹಿತೋಪದೇಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಚಿಕ್ಕಬಳ್ಳಾಪುರ ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಸೇವೆ ಸಲ್ಲಿಸಿದಂತಹ ಸುಧಾರಕರ ಜಯಂತಿಗಳನ್ನು ಸರ್ಕಾರವು ಆಚರಿಸಿಕೊಂಡು ಬರುತ್ತಿದ್ದು, ಅಂತಹವರಲ್ಲಿ ಸಂತ ಸೇವಾಲಾಲ್‌ರವರು ಒಬ್ಬರಾಗಿದ್ದಾರೆ. ಸಮಾಜದಲ್ಲಿ ಹಿಂದುಳಿದ ಲಂಬಾಣಿಯವರ ಏಳಿಗೆಯನ್ನೇ ಅಲ್ಲದೇ ಎಲ್ಲರ ಒಳಿತಿಗಾಗಿ ಹೋರಾಡಿದ್ದಾರೆ ಎಂದರು.
ಮುಖ್ಯವಾಹಿನಿಗೆ ತರಬೇಕು: ರೋಣೂರಿನ ಸರ್ಕಾರಿ ಫ್ರೌಢ ಶಾಲೆಯ ಸಹ ಶಿಕ್ಷಕರಾದ ಟಿ.ವೆಂಕಟರಮಣನಾಯಕ್ ವಿಶೇಷ ಉಪನ್ಯಾಸ ನೀಡಿ, ತಾಂಡ ಅಥವಾ ಲಂಬಾಣಿ ಎಂದು ಕರೆಯಲ್ಪಡುವ ಇವರು ವಿಭಿನ್ನ ವೇಷಭೂಷಣಗಳೊಂದಿಗೆ ಸಂಸೃತಿಯನ್ನು ಒಳಗೊಂಡ ಒಂದು ಪಂಗಡದವರಾಗಿದ್ದು, ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವಾಗಬೇಕಾಗಿದೆ ಎಂದರು.
ಕಂದಾಯ ನೀತಿ ವಿರುದ್ಧ ಹೋರಾಟ: ಸಂತ ಸೇವಾಲಾಲರು ಕೇವಲ ಸಮುದಾಯಕ್ಕೆ ಸೀಮಿತರಾಗದೆ, ಟಿಪ್ಪುಸಲ್ತಾನ್ ಕಾಲದಲ್ಲಿನ ಸ್ವಾತಂತ್ರ ಹೋರಾಟಗಾರರು ಹಾಗೂ “ಬ್ರಿಟೀಷ್ ಕಂದಾಯ ನೀತಿಯ ವಿರುದ್ಧ ಹೋರಾಡಿದ ವ್ಯಕಿ ಆಗಿರುವುದು ವಿಶೇಷ. ಲಂಬಾಣಿ ಜನಪದದಲ್ಲಿ ಶ್ರೀಮಂತ ಸಂಸೃತಿಯನ್ನು ಹೊರತರುವ ಕೆಲಸ ಮಾಡಿದ್ದಾರೆ ಎಂದರು. ಭೀಮಾನಾಯಕ್ ಮತ್ತು ಧರ್ಮಿಣಿ ಬಾಯಿಯವರಿಗೆ 14 ವರ್ಷಗಳ ನಂತರ ಹುಟ್ಟಿದ ಮಗುವೇ ಸಂತ ಶ್ರೀಸೇವಾಲಾಲ್.
ಸಮುದಾಯದ ಲಾವಣಿಗಳಲ್ಲಿ ಇವರಿಗೆ ವಿಶಿಷ್ಟ ಸ್ಥಾನವನ್ನು ನೀಡಿದ್ದರು. ಶಿಕ್ಷಣದ ಬಗ್ಗೆಯೂ ಕಾಳಜಿ ಹೊಂದಿದವರಾಗಿದ್ದು, ಶಿಕ್ಷಣ ಪಡೆದವರು ರಾಜ್ಯಭಾರ ಮಾಡುತ್ತಾರೆ. ವಿದ್ಯೆ ಪಡೆದವರಿಗೆ ಸಿಗುವುದು ತುಪ್ಪದ ಬಟ್ಟಲು ಎಂದಿದ್ದರು. ಸೇವಾಲಾಲ್‌ರವರು ಜನರನ್ನು ಕುರಿತು ತಮ್ಮ ಕಡಿಗಳಲ್ಲಿ(ಲಾವಣಿ) ಉತ್ತಮವಾಗಿ ಆಲಿಸು, ಆಲಿಸದ್ದನ್ನು ಶೋಧಿಸು, ಶೋಧಿಸಿದರಲ್ಲಿ ಉತ್ತಮವಾದುದನ್ನು ಅಳವಡಿಸಿಕೊಳ್ಳಿ. ಆಗ ಮಾತ್ರ ಸಮಾಜದ ಏಳಿಗೆ ಸಾಧ್ಯ.
ಯಾರಿಗೂ ನೀವು ದುಃಖ ನೀಡಬೇಡಿ- ನಮ್ಮ ಬದುಕಿಗೆ ನಾವೇ ಯಜಮಾನರಾದಾಗ ಮಾತ್ರ ಅಭಿವೃದ್ಧಿ ಕಾಣಬಹುದಾಗಿದೆ ಎಂಬ ಸಂದೇಶವನ್ನು ಸಾರಿದ್ದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ.ರವಿಕುಮಾರ್, ಶಿಡ್ಲಘಟ್ಟದ ವೈದ್ಯಾಧಿಕಾರಿಗಳಾದ ಮಂಜಾನಾಯಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಭೀಮಾನಾಯ್ಕ ಉಪಸ್ಥಿತರಿದ್ದರು.