ಹೊಸದಿಲ್ಲಿ: “ಭಾರತ ಮತ್ತು ಅಮೆರಿಕದ ನಡುವೆ ಈಗ ಹಿಂದೆಂದೂ ಇಲ್ಲದಂಥ ನಂಬಿಕೆ-ವಿಶ್ವಾಸ ಹುಟ್ಟಿಕೊಂಡಿದೆ. ನನ್ನ ಅಮೆರಿಕ ಭೇಟಿಯು ಉಭಯ ದೇಶಗಳ ಪಾಲುದಾರಿಕೆಯ ಆಳ ಮತ್ತು ವೈವಿಧ್ಯತೆ ಯನ್ನು ಮತ್ತಷ್ಟು ಎತ್ತರಕ್ಕೇರಿಸುವ ಅವಕಾಶವಿದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ತಮ್ಮ ಅಮೆರಿಕ ಪ್ರವಾಸ ಆರಂಭಿಸಿರುವ ಪ್ರಧಾನಿ ಮೋದಿಯವರು ಅಮೆರಿಕದ “ದಿ ವಾಲ್ ಸ್ಟ್ರೀಟ್” ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ ಹಾಗೂ ಪ್ರಯಾಣ ಆರಂಭಕ್ಕೂ ಮುನ್ನ ಮಾಧ್ಯಮಗಳಿಗೆ ನೀಡಿದ ಪ್ರಕಟನೆಯಲ್ಲಿ ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಒತ್ತು ನೀಡಿ ಮಾತನಾಡಿದ್ದಾರೆ. ಜತೆಗೆ ಭಾರತದ ಸ್ಥಾನಮಾನ, ಅರ್ಹತೆ, ಸಾಮರ್ಥ್ಯವನ್ನು ಇಡೀ ಜಗತ್ತು ಅರ್ಥಮಾಡಿಕೊಳ್ಳಬೇಕು. ಭಾರತದ ಅತ್ಯುನ್ನತ ಆದ್ಯತೆಯೇ “ಶಾಂತಿ’ ಎನ್ನುವುದು ಎಲ್ಲರಿಗೂ ಗೊತ್ತು ಎಂದೂ ಮೋದಿ ಹೇಳಿದ್ದಾರೆ.
ಸಂದರ್ಶನದಲ್ಲಿ ಪ್ರಧಾನಿ ಮೋದಿಯವರು ಭಾರತ-ಚೀನ ಸಂಬಂಧ, ಉಕ್ರೇನ್ ಯುದ್ಧ, ಭಯೋತ್ಪಾದನೆ, ವಿಸ್ತರಣಾವಾದ ಸೇರಿದಂತೆ ಹಲವು ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಶಾಂತಿಯ ಪರ: ಒಂದೂವರೆ ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ ಮೋದಿ “ಭಾರತ ಯಾವತ್ತಿದ್ದರೂ ಶಾಂತಿಯ ಪರ’ ಎಂದಿದ್ದಾರೆ. “ಕೆಲವರು ನಾವು ನಿರ್ಲಿಪ್ತರು, ಯಾರ ಪರವಾಗಿಯೂ ಇಲ್ಲ ಎಂದು ಹೇಳುತ್ತಾರೆ. ಆದರೆ ನಾವು ನಿರ್ಲಿಪ್ತರಲ್ಲ. ಶಾಂತಿಯ ಪರ ನಿಲ್ಲುವವರು’ ಎಂದಿದ್ದಾರೆ. ಯುದ್ಧ ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ಪುತಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಜತೆಗೆ ಮಾತನಾಡಿದ್ದೆ. ಇದಕ್ಕಾಗಿ ಎಲ್ಲ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇನೆ ಎಂದ ಪ್ರಧಾನಿ ಮೋದಿ, ಎಲ್ಲ ದೇಶಗಳು ಪರಸ್ಪರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿಕೊಳ್ಳಬೇಕು ಎಂದರು.
ಏಕತೆಯನ್ನು ಸಂಭ್ರಮಿಸುತ್ತದೆ: ಎಲ್ಲ ಸಮುದಾಯಗಳು ನಮ್ಮ ದೇಶದಲ್ಲಿ ನೂರಾರು ವರ್ಷಗಳಿಂದ ಶಾಂತಿಯುತವಾಗಿ ಜೀವನ ಮಾಡು ತ್ತಿದ್ದಾರೆ ಎಂದು ಹೇಳಿದ ಪ್ರಧಾನಿ, ಜಗತ್ತಿನ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ ಎಲ್ಲ ಸಮುದಾಯದವರು ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಜೀವಿಸುತ್ತಿದ್ದಾರೆ ಎಂದರು.
ಚೀನ ಕೆಂಗಣ್ಣು: ಇತ್ತ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಆರಂಭವಾಗುತ್ತಿದ್ದಂತೆ, ಅತ್ತ ಚೀನದ ಕಣ್ಣು ಕೆಂಪಗಾಗಿದೆ. “ಭಾರತದೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಸಂಬಂಧ ಬಲಿಷ್ಠಗೊಳಿಸುವ ಅಮೆರಿಕದ ಯತ್ನದ ಹಿಂದೆ ಭೌಗೋಳಿಕ ಮತ್ತು ರಾಜಕೀಯ ಲೆಕ್ಕಾಚಾರ ಅಡಗಿದೆ. ಆದರೆ ಅಮೆರಿಕದ ಈ ಪ್ರಯತ್ನ ಖಂಡಿತಾ ವಿಫಲಗೊಳ್ಳಲಿದೆ. ಅಮೆರಿಕದ ಸ್ವಾರ್ಥದ ಆಟದಿಂದ ಭಾರತ ದೂರವುಳಿಯುವುದು ಒಳಿತು’ ಎಂದು ಚೀನದ ಪ್ರಮುಖ ರಾಜತಾಂತ್ರಿಕ ಅಧಿಕಾರಿ ವಾಂಗ್ ಯಿ “ದಿ ಗ್ಲೋಬಲ್ ಟೈಮ್ಸ್’ಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ.
ಅಮೆರಿಕದಿಂದ ಅಪರೂಪದ ಗೌರವಕ್ಕೆ ಪಾತ್ರರಾದ ಕೆಲವೇ ಕೆಲವು ನಾಯಕರಲ್ಲಿ ಮೋದಿಜೀ ಅವರೂ ಒಬ್ಬರು. ನೆಲ್ಸನ್ ಮಂಡೇಲಾ, ವಿನ್‌ಸ್ಟನ್ ಚರ್ಚಿಲ್‌ರಂಥ ನಾಯಕರಿಗೆ ಅಮೆರಿಕ ಸಂಸತ್ ಉದ್ದೇಶಿಸಿ 2 ಬಾರಿ ಭಾಷಣ ಮಾಡುವ ಅವಕಾಶ ಸಿಕ್ಕಿತ್ತು. ಈಗ ಅಂಥ ಅವಕಾಶ ಪಡೆದಿರುವ ಪ್ರಪ್ರಥಮ ಭಾರತೀಯ ಎಂಬ ಖ್ಯಾತಿಗೆ ಪ್ರಧಾನಿ ಮೋದಿ ಪಾತ್ರರಾಗುತ್ತಿದ್ದಾರೆ.
ಹರ್‌ದೀಪ್ ಸಿಂಗ್ ಪುರಿ, ಕೇಂದ್ರ ಸಚಿವ