ಬೆಂಗಳೂರು: ಕೋವಿಡ್ ನಾಲ್ಕನೇ ಅಲೆ ಭೀತಿ ಹಿನ್ನೆಲೆಯಲ್ಲಿ ಅನಾವಶ್ಯಕ ನಿರ್ಬಂಧ ಹೇರದಂತೆ ಪ್ರಧಾನಿ ಸೂಚಿಸಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವಿಡಿಯೋ ಸವಾದದ ನಂತರ ಹೇಳಿಕೆ ನೀಡಿದ ಸಿಎಂ, ‘ಪ್ರಧಾನಿಗಳು ಸುದೀರ್ಘವಾದ ವರದಿ ತೆಗೆದುಕೊಂಡರು. ಕೆಲವು ನಿರ್ದೇಶನ ಕೊಟ್ಟರು.ನಾವು ರಾಜ್ಯದ ಸ್ಥಿತಿ ಬಗ್ಗೆ ಹೇಳಿದ್ದೇವೆ. ಏಪ್ರಿಲ್ 9 ರ ಬಳಿಕ ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಳವಾಗುತ್ತಿದೆ. ಟೆಸ್ಟಿಂಗ್ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದೇವೆ’ ಎಂದರು.
‘ಸರ್ಕಾರಿ 50 ಸಾವಿರ ಬೆಡ್, ಖಾಸಗಿ 1 ಲಕ್ಷ ಬೆಡ್, ಆಸ್ಪತ್ರೆ ವ್ಯವಸ್ಥೆ ಬಗ್ಗೆ ಹೇಳಿದ್ದೇವೆ. ಬೆಂಗಳೂರಿಗೆ ಹೆಚ್ಚಿನ ಗಮನ, ಹೆಚ್ಚಿನ ಟೆಸ್ಟಿಂಗ್ ಮಾಡಲಾಗುತ್ತದೆ’ ಎಂದು ಸಿಎಂ ತಿಳಿಸಿದರು.
’15-18 ವರ್ಷದ ಮಕ್ಕಳ ಲಸಿಕೆ ಚುರುಕಿಗೆ ಸೂಚಿಸಿದ್ದಾರೆ. ನಾವು ಸನ್ನದ್ಧರಾಗಿದ್ದೇವೆ ಅಂತ ಹೇಳಿದ್ದೇವೆ. 6-12 ವರ್ಷದ ಮಕ್ಕಳಿಗೆ ಶಾಲೆಯಲ್ಲಿ ಲಸಿಕೆಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಈಗ 6-12, 12-18 ನೇ ವಯಸ್ಸಿನ ಮಕ್ಕಳಿಗೆ ಲಸಿಕೆ ಅಭಿಯಾನಕ್ಕೆ ವೇಗ ಕೊಡಲು ನಿರ್ಧಾರ ಮಾಡಲಾಗಿದೆ.ಲಸಿಕೆ ಅಭಿಯಾನ ಉತ್ತಮವಾಗಿ ಮಾಡಿದ್ದರಿಂದ ಮೂರನೇ ಅಲೆ ಸಮರ್ಥವಾಗಿ ಎದುರಿಸಿದ್ದೇವೆ’ ಅಂದರು.
‘ಪ್ರಧಾನಿ ಪೆಟ್ರೋಲ್, ಡೀಸೆಲ್ ಸೆಸ್ ಇಳಿಕೆ ಬಗ್ಗೆ ರಾಜ್ಯದ ಉದಾಹರಣೆ ಕೊಟ್ಟರು.ಮತ್ತೆ ಸೆಸ್ ಇಳಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ , ಈಗ ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮುಂದುವರೆಯುತ್ತೇವೆ’ ಎಂದರು.