ಒಮ್ಮೆ ಪಂಡಿತ ಮತ್ತು ರೈತ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ರೈತನಿಗೆ ಪಕ್ಕದ ಹಳ್ಳಿಯ ಸಂತೆಗೆ ಹೋಗಬೇಕಿತ್ತು. ತನಗೆ ಸನ್ಮಾನ ಕಾರ್ಯಕ್ರಮವಿದ್ದುದರಿಂದ ಪಂಡಿತನೂ ಪಕ್ಕದ ಹಳ್ಳಿಗೆ ಹೊರಟಿದ್ದ. ಪಂಡಿತನಿಗೆ ಸುತ್ತಮುತ್ತಲ ಊರಿನಲ್ಲೆಲ್ಲಾ ತನ್ನಷ್ಟು ಪ್ರಕಾಂಡ ಪಂಡಿತ ಯಾರೂ ಇಲ್ಲವೆಂಬ ಅಹಂ ಇತ್ತು. ಬಹಳಷ್ಟು ಬಾರಿ ಊರಿನಲ್ಲಿ ಚರ್ಚಾಸ್ಪರ್ಧೆಗಳೇರ್ಪಟ್ಟಾಗ ಅನೇಕ ಘಟಾನುಘಟಿ ಚರ್ಚಾಪಟುಗಳನ್ನೆಲ್ಲಾ ತನ್ನ ಪಾಂಡಿತ್ಯದಿಂದ ಮಣ್ಣು ಮುಕ್ಕಿಸಿದ್ದ. ಇವೆಲ್ಲದರಿಂದಾಗಿಯೇ ಆತನಿಗೆ ತಲೆ ಮೇಲೆ ಕೊಂಬು ಬಂದಿತ್ತು.
ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಪಂಡಿತನಿಗೆ ಸುಮ್ಮನೆ ಕೂತುಕೊಳ್ಳಲಾಗಲಿಲ್ಲ. ರೈತನನ್ನ ಮಾತಿಗೆಳೆದ. ಆತನ ಮುಂದೆ ತನ್ನ ಪಾಂಡಿತ್ಯವನ್ನು ಪ್ರದರ್ಶಿಸಬೇಕೆಂದು ಮನಸ್ಸಾಯಿತು. ಅದಕ್ಕೇ ಪಂಡಿತ ಮಾತುಕತೆ ಶುರುಮಾಡಿದ “ಮಹಾನುಭಾವರು ಶಾಸ್ತ್ರಗಳನ್ನು ಓದಿಕೊಂಡಿದ್ದೀರೋ?’
ರೈತ ವಿನಮ್ರನಾಗಿ ನುಡಿದ “ಸ್ವಾಮಿಗಳು ಮನ್ನಿಸಬೇಕು. ನಾನದನ್ನು ಓದಿಕೊಂಡಿಲ್ಲ’. ಮುಂದುವರಿದು ಪಂಡಿತ ಕೇಳಿದ “ವ್ಯಾಕರಣ?’
ರೈತನೆಂದ “ಇಲ್ಲ ಸ್ವಾಮಿ’. ಅಷ್ಟಕ್ಕೇ ಸುಮ್ಮನಾಗದೆ ” ಹೋಗಲಿ ವೇದ ಪುರಾಣಗಳನ್ನಾದರೂ ಓದಿದ್ದೀರಾ?’ ಎಂದು ಪಂಡಿತ ಕೇಳಿದ. ರೈತ ಇಲ್ಲವೆಂದು ತಲೆಯಲ್ಲಾಡಿಸಿದ. ಪಂಡಿತ ಕುಹಕ ನಗೆಯಾಡುತ್ತಾ “ಛೆ, ನಿನಗೆ ಯಾವ ವಿದ್ಯೆಯೂ ಬರುವುದಿಲ್ಲ. ನಿನ್ನ
ಬದುಕೇ ವ್ಯರ್ಥ’. ತಣ್ಣಗೆ ರೈತ ಅಂದ “ಇಲ್ಲ ಸ್ವಾಮಿ. ವ್ಯರ್ಥವಲ್ಲ. ನನಗೆ ಈಜು ಬರುತ್ತೆ. ನನ್ನ ಬದುಕನ್ನುಳಿಸಲು ಅದೊಂದು ಸಾಕು.’ “ಅದು ಹೇಗೆ?’ ಎಂಬ ಪಂಡಿತನ ಪ್ರಶ್ನೆಗೆ ರೈತ “ದೋಣಿ ಮುಳುಗುತ್ತಿದೆ. ನಾನಂತೂ ಈಜಿ ದಡ ಸೇರುತ್ತೇನೆ’ ಎಂದು ಹೇಳಿ ನೀರಿಗೆ ಹಾರಿದ.
–
ಹವನ