ಯಾದಗಿರಿ: ತರಕಾರಿಗೂ ಬಂಗಾರದ ಬೆಲೆ ಬಂದಿದ್ದು, ಖರೀದಿಗೆ ಜನ ಹಿಂಜರಿಯುವಂತೆ ಆಗಿದ್ದು, ನಗರದ ಮಹಾತ್ಮಗಾಂಧಿ ವೃತ್ತ, ಸ್ಟೇಷನ್ ಏರಿಯಾದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕೇರಿದ್ದನ್ನು ಕಂಡು ಗ್ರಾಹಕರು ಚೌಕಾಶಿ ಮಾಡುತ್ತಿದ್ದು ಕಂಡುಬಂತು.
ಹಸಿ ಮೆಣಸಿನ ಕಾಯಿ ಕೆ.ಜಿ.ಗೆ 120 ರೂ, ಟಮೋಟೋ ದರ 80 ರೂ, ಗಜ್ಜರೆ 120 ರೂ. ಸೌತೆಕಾಯಿ 80 ರೂ. ಕೆಜಿ, ನುಗ್ಗೆಕಾಯಿ 100 ರೂ. ಕೆ.ಜಿ., ಹಾಗಲಕಾಯಿ 80 ರೂ., ಬೆಂಡೆಕಾಯಿ 60 ರೂ. ಮೆಂತೆ ಸೊಪ್ಪು 10 ರೂ.ಗೆ ಒಂದು ಕಟ್ಟು, ಪುದಿನಾ30 ರೂ.ಗೆ ಒಂದು ಕಟ್ಟು ಹೀಗೆ ದುಬಾರಿ ಬೆಲೆಯಲ್ಲಿ ತರಕಾರಿ ಮಾರಾಟ ಮಾಡಲಾಗುತ್ತಿದೆ. ತರಕಾರಿ ದರ ಗಗನಕ್ಕೇರಿರುವುದರಿಂದ
ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ಸಂಪೂರ್ಣ ಕಡಿಮೆಯಾಗಿದೆ. ಕಳೆದ ಒಂದು ವಾರದಿಂದ ತರಕಾರಿ ದರ ಹೆಚ್ಚಳವಾಗಿರುವುದರಿಂದ ಜನಸಾಮಾನ್ಯರು ಹೆಚ್ಚಿನ ತರಕಾರಿ ಖರೀದಿ ಮಾಡಲು ಮುಂದಾಗುತ್ತಿಲ್ಲ ಇದರಿಂದ ನಮ್ಮ ವ್ಯಾಪಾರ ಕುಸಿದಿದ್ದು, ಜೀವನ ನಡೆಸುವುದು ದುರಸ್ತರವಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಯಾದಗಿರಿ ಜಿಲ್ಲೆಗೆ ಬೆಳಗಾವಿ ಹಾಗೂ ಮಹಾರಾಷ್ಟ್ರದಿಂದ ತರಕಾರಿಗಳು ಪೂರೈಕೆಯಾಗುತ್ತಿದ್ದು, ಅಲ್ಲಿ ಭಾರಿ ಮಳೆ ಸುರಿದ ಪರಿಣಾಮ ಜಿಲ್ಲೆಗೆ ತರಕಾರಿ ಪೂರೈಕೆ ಕಡಿಮೆ ಆಗುತ್ತಿರುವುದರಿಂದಲೇ ತರಕಾರಿ ಬೆಲೆ ದುಬಾರಿಯಾಗಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಜಿಎಸ್‌ಟಿಯಿಂದಾಗಿಯೇ ಸರಕು ಸಾಗಣೆ ದರ ಹೆಚ್ಚಳ ಆಗಿರುವುದರಿಂದ ತರಕಾರಿ ದರ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ. ಪ್ರತಿದಿನ ಹಸಿ ಮೆಣಸಿಕಾಯಿ, ಟೋಮಟೋ ಅವಶ್ಯಕ. ಬೆಲೆ ದುಬಾರಿಯಾಗಿದ್ದ ರಿಂದ ತರಕಾರಿ ಖರೀದಿಗೆ ಮುಂದಾಗುತ್ತಿಲ್ಲ ಎಂದು ಗ್ರಾಹಕ ರಮೇಶ ಕುಲಕರ್ಣಿ ಹಾಗೂ ಮತ್ತಿತರರು ತಿಳಿಸುತ್ತಾರೆ. ತರಕಾರಿ ಬೆಲೆ ದುಬಾರಿಯಾಗಿದ್ದರಿಂದ ವ್ಯವಹಾರ ಕಡಿಮೆಯಾಗಿದೆ
ಇದರಿಂದ ಕಷ್ಟ ಉಂಟಾಗುತ್ತಿದೆ ಎಂದು ತರಕಾರಿ ವ್ಯಾಪಾರಿ ಖಾಜಾ ಮೈನೋದ್ದೀನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.