ಹಾಸನ: ನಸುಕಿನಲ್ಲಿ ಬಿಸಿ ಬಿಸಿ ಕಾಫಿ ಸವಿದು ಬೆಚ್ಚಗೆ ಮಾಡಿಕೊಂಡರೆ ದೇಹಕ್ಕೆ ವಿಶೇಷ ಅನುಭವ. ಆದರೀಗ ಕಾಫಿ ಪುಡಿ ದರ ಏರಿಕೆಯಿಂದಾಗಿ ಕಾಫಿ ಕುಡಿಯುವ ಮೊದಲೇ ತುಟಿ ಸುಡುವಂತಾಗಿದೆ.
ಕಾಫಿಗೆ ಈ ವರ್ಷ ಬಂಪರ್ ಬೆಲೆ ಸಿಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದರ ದುಪ್ಪಟ್ಟಾಗಿದ್ದು ಬೆಳೆಗಾರರು ಖುಷಿಯಾಗಿದ್ದಾರೆ. ಇದರ ಪರಿಣಾಮ ಕಾಫಿ ಪುಡಿ ದರವನ್ನೂ ವರ್ತಕರು ಏರಿಸಿದ್ದು, 1 ಕೆ.ಜಿ. ಕಾಫಿ ಪುಡಿ ಮಾರಾಟ ದರ 600 ರೂ.ಗೆ ತಲುಪಿದೆ.
ಹಾಸನ ನಗರದ ಕಾಫಿಪುಡಿ ವರ್ತಕರ ಸಂಘವು ಡಿ. 2ರಿಂದ ಜಾರಿಯಾಗುವಂತೆ ಒಂದು ಕೆ.ಜಿ. ಕಾಫಿ ಪುಡಿಗೆ 600 ರೂ. ನಿಗದಿಪಡಿದ್ದಾರೆ. ಇದುವರೆಗೂ 350ರಿಂದ 380 ರೂ. ಇದ್ದದ್ದು, ಇದೀಗ 600 ರೂ.ಗೆ ಏರಿಕೆಯಾಗಿದೆ. ಹಂತ-ಹಂತವಾಗಿ ದರ ಏರುತ್ತಿದ್ದು ಕಳೆದ ವರ್ಷ 250 ರೂ. ಇದ್ದರೆ ಈಗ ಕೆ.ಜಿ.ಗೆ 600 ರೂ.ಗೆ ಮುಟ್ಟಿದೆ.
ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೀಜದ ದರ ಏರುತ್ತಲೇ ಇದೆ. ಇದೀಗ 50 ಕೆ.ಜಿ. ಅರೇಬಿಕಾ ಪಾರ್ಚಮೆಂಟ್ (ಗುಣಮಟ್ಟ) ಕಾಫಿ ಬೀಜದ ದರ 20,800 ರೂ.ಗೆ ಏರಿದ್ದರೆ, ಅರೇಬಿಕಾ ಚೆರ್ರಿ (2ನೇ ದರ್ಜೆ) ದರ 11,900 ರೂ. ಇದೆ. ರೋಬಸ್ಟಾ ಪಾರ್ಚಮೆಂಟ್ ದರ 19,500 ರೂ. ಇದ್ದರೆ, ರೋಬಸ್ಟಾ ಚೆರ್ರಿ ದರ 11,130 ರೂ. ಇದೆ.
ಕಳೆದ ವರ್ಷ ಇದೇ ವೇಳೆ 50 ಕೆ.ಜಿ. ಅರೇಬಿಕಾ ಪಾರ್ಚಮೆಂಟ್ 11,000 ರೂ. ಇದ್ದರೆ. ರೋಬಸ್ಟಾ ಪಾರ್ಚಮೆಂಟ್ 9000 ರೂ. ದರ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ದರ ದುಪ್ಪಟ್ಟಾಗಿದೆ.
ಉತ್ಪಾದನೆ ಕುಸಿತ
ಕಳೆದ ವರ್ಷ ಅನಾವೃಷ್ಟಿ, ಈ ವರ್ಷ ಅತಿವೃಷ್ಟಿಯಿಂದ ಕಾಫಿ ಉತ್ಪಾದನೆ ಕುಸಿದಿದೆ. ಜತೆಗೆ ರೋಗ ಮತ್ತಿತರ ಕಾರಣಗಳಿಂದ ಕಾಫಿ ಉತ್ಪಾದನೆ ಇಳಿಕೆಯಾಗಿದೆ. ಕಾರ್ಮಿಕರ ಕೂಲಿ, ಗೊಬ್ಬರ, ಔಷಧದ ದರ ಹೆಚ್ಚಿದ್ದು, ಉತ್ಪಾದನಾ ವೆಚ್ಚ ದ್ವಿಗುಣವಾಗಿದೆ. ಈ ಪರಿಣಾಮ ಸಹಜವಾಗಿ ಕಾಫಿ ಬೆಲೆ ಅಧಿಕವಾಗಿದೆ. ಕಾಫಿಗೆ ದೇಶ, ವಿದೇಶದಲ್ಲಿ ಬೇಡಿಕೆಯಿದ್ದರೂ ಉತ್ಪಾದನೆ ಪ್ರದೇಶ ಕಡಿಮೆ. ಭಾರತದಲ್ಲಿ ಕಾಫಿ ಬೆಳೆಯುವುದು 2 ರಾಜ್ಯಗಳಲ್ಲಿ ಮಾತ್ರ. ಅದರಲ್ಲೂ ಕರ್ನಾಟಕದ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಮಾತ್ರ ಕಾಫಿ ಬೆಳೆಯುವುದು.
-ಎನ್. ನಂಜುಂಡೇಗೌಡ