ಕಲಬುರಗಿ: ಮಾರುಕಟ್ಟೆಯಲ್ಲಿ ಈ ಭಾಗದ ವಾಣಿಜ್ಯ ಬೆಳೆ ತೊಗರಿ ಬೆಲೆ ಕುಸಿತವಾಗುತ್ತಿದೆ. ಮೂರ್‍ನಾಲ್ಕು ತಿಂಗಳಿನಿಂದ ಕ್ವಿಂಟಲ್‌ಗೆ ಏಳು ಸಾವಿರ ರೂ. ಇದ್ದ ಬೆಲೆ ಈಗ 6100-6200ರೂ.ಗೆ ಕುಸಿತವಾಗಿದೆ.
ತೊಗರಿ ರಾಶಿಯಾಗಿ ಮಾರುಕಟ್ಟೆಗೆ ಬರುವ ವೇಳೆಯಲ್ಲಿ ಬೆಲೆ ಕಡಿಮೆ ಇರುತ್ತಿತ್ತು. ಆದರೆ ಬಿತ್ತನೆ ಸಮಯದಲ್ಲಿ ಬೆಲೆ ಹೆಚ್ಚಳವಾಗುತ್ತಲೇ ಇರುವುದು ರೂಢಿ. ಈ ಸಲ ತೊಗರಿ ರಾಶಿಯಾಗಿ ಮಾರುಕಟ್ಟೆಗೆ ಬಂದ ಸಂದರ್ಭದಲ್ಲೇ 6500ರೂ. ಬೆಲೆ ಇತ್ತು. ತೊಗರಿ ಬಿತ್ತನೆ ಸಮಯದಲ್ಲಿ ಅಂದರೆ ಮೇ ಕೊನೆ ವಾರ ಹಾಗೂ ಜೂನ್ ತಿಂಗಳಲ್ಲಿ ಬೆಲೆ ಹೆಚ್ಚಳವಾಗುವುದು ಸಾಮಾನ್ಯ. ಆದರೆ ಈ ಸಲ ಉಲ್ಟಾ ಎನ್ನುವಂತಾಗಿದೆ.
ಎಂಟು ಸಾವಿರ ರೂ. ಬೆಲೆಯಾಗುತ್ತದೆಂದು ಜೂನ್ ತಿಂಗಳಲ್ಲಿ ಬಿತ್ತನೆ ಸಲುವಾಗಿ ಬೀಜ, ಗೊಬ್ಬರ ಇತ್ಯಾದಿ ಖರ್ಚಿಗೆ ಹಣ ಬರಬಹುದೆಂದು ರಾಶಿಯಾಗಿ ಆರು ತಿಂಗಳಾದರೂ ರೈತ ತೊಗರಿಯನ್ನು ಇನ್ನೂ ಮಾರಾಟ ಮಾಡದೇ ಇಟ್ಟುಕೊಂಡಿದ್ದಾನೆ. ಆದರೆ ಬೆಲೆ ಕುಸಿತದಿಂದ ಆಕಾಶವೇ ಕಳಚಿ ಬಿದ್ಧಂತಾಗಿದೆ. ಕ್ವಿಂಟಲ್‌ಗೆ ಒಂದು ಇಲ್ಲವೇ ಎರಡು ಸಾವಿರ ರೂ. ದರ ಬಂದರೆ ಸ್ವಲ್ಪ ಕೃಷಿ ಕಾರ್ಯದ ಖರ್ಚಿಗೆ ಸಹಾಯ ಆಗಬಹುದೆಂಬ ರೈತರ ನಿರೀಕ್ಷೆಗೆ ಕೊಡಲಿ ಪೆಟ್ಟು ಬಿದ್ದಿದೆ. ಸೋಮವಾರ ಮಾರುಕಟ್ಟೆಯಲ್ಲಿ 5400ರೂ.ದಿಂದ 6200ರೂ.ಗೆ ಮಾರಾಟವಾಗಿದೆ.
ಆಮದು ಮಾಡಿಕೊಂಡಿದ್ದೇ ಬೆಲೆ ಕುಸಿತಕ್ಕೆ ಕಾರಣ: ಕೇಂದ್ರ ಸರ್ಕಾರ ಮ್ಯಾನ್ಮಾರದಿಂದ ಕಳೆದ ಏಪ್ರಿಲ್ ತಿಂಗಳಿನಲ್ಲಿ ನಾಲ್ಕು ಟನ್ ತೊಗರಿ ಬೇಳೆ ಹಾಗೂ 1.50 ಟನ್ ಹೆಸರು ಬೇಳೆ ಆಮದು ಮಾಡಿ ಕೊಂಡಿರುವುದೇ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿತವಾಗಲು ಕಾರಣ ಎನ್ನಲಾಗುತ್ತಿದೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸುಮಾರು 25 ಮಿಲಿಯನ್ ಟನ್ ದ್ವಿದಳ ಧಾನ್ಯ ಉತ್ಪಾದಿಸಲಾಗಿದೆ. ಇದನ್ನೇ ದೇಶದಾದ್ಯಂತ ಸರಬರಾಜು ಮಾಡಿದಲ್ಲಿ ಆಮದು ಮಾಡಿಕೊಳ್ಳವ ಅಗತ್ಯವೇ ಇರಲಿಲ್ಲ. ಆಮದು ಮಾಡಿಕೊಂಡಿರುವುದೇ ತೊಗರಿ ರೈತನಿಗೆ ಬರೆ ಎಳೆದಂತಾಗಿದೆ.
ಖರೀದಿ ಅವಧಿ ಮುಕ್ತಾಯ ನಂತರ ಬೆಲೆ ಕುಸಿತಾರಂಭ: ತೊಗರಿಗೆ 6000 ರೂ. ಕೇಂದ್ರದ ಬೆಂಬಲ ಬೆಲೆವಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ವಾದರೆ ಖರೀದಿ ಮಾಡಲೆಂದು ಜಿಲ್ಲೆ ಸೇರಿ 11 ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿಸಿಲು ಖರೀದಿ ಕೇಂದ್ರ ತೆರೆಯಲಾಗಿತ್ತು. ಖರೀದಿ ಕೇಂದ್ರಗಳಲ್ಲೇ ತೊಗರಿ ಮಾರಾಟ ಮಾಡಲು ಕಲಬುರಗಿ ಜಿಲ್ಲೆಯಲ್ಲಿ 50 ಸಾವಿರ ಸೇರಿದಂತೆ ಲಕ್ಷಾಂತರ ರೈತರು ಹೆಸರು ನೊಂದಾಯಿಸಿದ್ದರು. ಆದರೆ ಮಾರುಕಟ್ಟೆಯಲ್ಲಿ 6600 ರೂ.ದಿಂದ 6800 ಬೆಲೆ ಇರುವ ಕಾರಣ ರೈತ ಖರೀದಿ ಕೇಂದ್ರಗಳತ್ತ ಸುಳಿಯಲಿಲ್ಲ. ಮುಕ್ತ ಮಾರುಕಟ್ಟೆಯಲ್ಲೇ ಬೆಂಬಲ ಬೆಲೆಗಿಂತ ಬೆಲೆ ಜಾಸ್ತಿ ಇರುವ ಕಾರಣದಿಂದ ಖರೀದಿ ಕೇಂದ್ರಗಳು ಆರಂಭವಾಗಲೇ ಇಲ್ಲ.
ಖರೀದಿ ಅವಧಿಯಂತೂ ಕಳೆದ ತಿಂಗಳೇ ಮುಗಿದಿದೆ. ಒಂದು ವೇಳೆ ಮಾರ್ಚ್ ತಿಂಗಳಲ್ಲೇ ಬೆಲೆ ಕುಸಿತವಾದಲ್ಲಿ ಬೆಂಬಲ ಬೆಲೆಯಲ್ಲಾದರೂ ಮಾರಾಟ ಮಾಡಲು ಅವಕಾಶ ಇತ್ತು. ಆದರೆ ಈಗ ಕಾಲ ಮಿಂಚಿದೆ. ಇತಿಹಾಸ ನಿರ್ಮಿಸಿದ ರಾಜ್ಯ ಸರ್ಕಾರ: ಕೇಂದ್ರದ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ಕಳೆದ ಒಂದೂವರೆ ದಶಕದಿಂದ 350 ರೂ.ದಿಂದ 500 ರೂ. ಪ್ರೋತ್ಸಾಹ ಧನ ನೀಡುತ್ತಾ ಬರಲಾಗಿದೆ. ಆದರೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ನಯಾಪೈಸೆ ತೊಗರಿಗೆ ಪ್ರೋತ್ಸಾಹ ಧನ ನೀಡಲಿಲ್ಲ. ಒಂದು ವೇಳೆ 500ರೂ. ಪ್ರೋತ್ಸಾಹ ಧನ ನೀಡಿದಲ್ಲಿ ಮಾರುಕಟ್ಟೆಯಲ್ಲಿ ಏಳು ಸಾವಿರಕ್ಕಿಂತ ಹೆಚ್ಚಿನ ಬೆಲೆಗೆ ತೊಗರಿ ಮಾರಾಟವಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಪ್ರೋತ್ಸಾಹ ಧನ ನೀಡದೇ ಇತಿಹಾಸ ನಿರ್ಮಿಸಿದೆ.