Advertisement
ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಬುಧವಾರ ಬಿಜೆಪಿ ಕಚೇರಿಗೆ ಆಗಮಿಸಿ, ನಾಯಕರು, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಚಿಕ್ಕಂದಿನಲ್ಲೇ ಸಂಘ ಪರಿವಾರದ ಕಾರ್ಯಕರ್ತನಾಗಿ ಹಲವು ಸವಾಲುಗಳ ಮಧ್ಯೆ ಈಜುತ್ತಲೇ ಇಲ್ಲಿವರೆಗೆ ಬಂದಿದ್ದೇನೆ. ಭಾರತ ಮಾತೆಯ ಗೌರವವನ್ನು ಬೆಳಗಿಸುವ ಉದ್ದೇಶದೊಂದಿಗೆ ಸಂಘದಲ್ಲಿ ತೊಡಗಿಕೊಂಡಿದ್ದ ನನ್ನನ್ನು ಬೆಳೆಸಿರುವುದು ಸಂಘ ಎಂದರು. ಪಕ್ಷದ ಕಾರ್ಯಾಲಯ ದೇವಾಲಯ; ಕಾರ್ಯಕರ್ತರು ನನ್ನ ಪಾಲಿನ ದೇವರು. ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪೂರ್ವದಲ್ಲಿ ಕಾರ್ಯಕರ್ತರನ್ನು ಭೇಟಿ ಯಾಗಿ ಕಟೀಲು ದೇವಿಯ ಅನುಗ್ರಹ ಪಡೆದು ಬೆಂಗಳೂರಿಗೆ ತೆರಳುತ್ತೇನೆ ಎಂದರು.
Related Articles
Advertisement
ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಸಂಘ ತೋರಿದ ದಾರಿಯಲ್ಲಿ ನಡೆದವರು ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ. 16ನೇ ವಯಸ್ಸಿನಿಂದ ಸಂಘದ ಜವಾಬ್ದಾರಿ ಹೊತ್ತ ನಳಿನ್‌ಗೆ ರಾಜ್ಯಾಧ್ಯಕ್ಷ ಸ್ಥಾನ ದೊರೆತಿದೆ. ಪಕ್ಷದ ಕಾರ್ಯಕರ್ತರು ಯಾವ ಸಂದರ್ಭದಲ್ಲೂ ಸಂಯಮ ಕಳೆದುಕೊಳ್ಳದೆ ಹಿರಿಯರ ಮಾತುಗಳನ್ನು ಪಾಲಿಸುತ್ತ ನಳಿನ್ ಅವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಪಕ್ಷದ ಮುಖಂಡರಾದ ಜಗದೀಶ್ ಅಧಿಕಾರಿ, ಕಿಶೋರ್ ರೈ, ರವಿಶಂಕರ್ ಮಿಜಾರು, ರಾಮಚಂದರ್ ಬೈಕಂಪಾಡಿ ಮೊದಲಾದವರು ಉಪಸ್ಥಿತರಿದ್ದರು.ಸುದರ್ಶನ್ ಅವರು ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು: ಅಧಿಕಾರ ಸಿಗದೇ ಇದ್ದಾಗ ನೋವು ಸಹಜ. ಹಾಗೆಂದು ನಾವೇ ಕಟ್ಟಿ ಬೆಳೆಸಿದ ಪಕ್ಷದ ವಿರುದ್ಧ ಮಾತನಾಡುವುದು ಸರಿಯಲ್ಲ. ಅಸಮಾಧಾನಗಳೇನೇ ಇದ್ದರೂ ಪಕ್ಷದೊಳಗೆ ಬಗೆಹರಿಸಬೇಕು ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಬುಧವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದ ಅತಿವೃಷ್ಟಿಗೆ ಕೇಂದ್ರದಿಂದ ಪರಿಹಾರ ಪಡೆಯಬೇಕಾದರೆ ಆಗಿರುವ ಹಾನಿಯ ಬಗ್ಗೆ ಸಮಗ್ರ ವರದಿ ಸಲ್ಲಿಕೆಯಾಗಬೇಕು. ಅನಂತರ ಕೇಂದ್ರದ ತಂಡ ಪರಿಶೀಲನೆ ನಡೆಸಬೇಕು. ಆ ಬಳಿಕವೇ ಪರಿಹಾರ ಮೊತ್ತ ಬಿಡುಗಡೆಗೊಳಿಸುವುದು ನಿಯಮ. ಆದರೂ ಸಚಿವರಿಲ್ಲದೆ ಏಕಾಂಗಿಯಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಿಸಿ ತತ್‌ಕ್ಷಣದ ಪರಿಹಾರ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರವೂ ಪರಿಹಾರ ಮೊತ್ತವನ್ನು ಪ್ರಕಟಿಸುವ ವಿಶ್ವಾಸವಿದೆ ಎಂದರು. ರಾಜ್ಯದ ಅಭ್ಯುದಯಕ್ಕೆ ಬದ್ಧ
ಸಂಸದ, ಪಕ್ಷದ ರಾಜ್ಯಾಧ್ಯಕ್ಷ ಎರಡೂ ಹೊಣೆಗಳನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ಇದೆ. ಈ ಹಿಂದೆ ಡಿ.ವಿ. ಸದಾನಂದ ಗೌಡ ಮತ್ತು ಪ್ರಹ್ಲಾದ ಜೋಶಿ ಇದೇ ಎರಡು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಈಗಲೂ ರಾಜ್ಯದ ವಿಚಾರದಲ್ಲಿ ಎಲ್ಲ ಸಂಸದರು ಒಟ್ಟಾಗಿ ಕೇಂದ್ರ ಸಚಿವರು ಅಥವಾ ಅಧಿಕಾರಿಗಳನ್ನು ಭೇಟಿ ಮಾಡುತ್ತೇವೆ. ಇದರಲ್ಲಿ ರಾಜಕೀಯದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನಳಿನ್ ತಿಳಿಸಿದರು. ಇಂದು ದಿಲ್ಲಿಯಲ್ಲಿ ವರಿಷ್ಠರ ಭೇಟಿ
ಬುಧವಾರ ಬೆಳಗ್ಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಬಂದಿಳಿದ ನಳಿನ್ ಅವರಿಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ದೊರೆಯಿತು. ಬಳಿಕ ಅವರು ತಮ್ಮ ನಿವಾಸಕ್ಕೆ ತೆರಳಿ ತಾಯಿಯ ಆಶೀರ್ವಾದ ಪಡೆದರು. ಪತ್ನಿ ಆರತಿ ಬೆಳಗಿ, ತಿಲಕವಿರಿಸಿ ಸ್ವಾಗತಿಸಿದರು. ಮನೆ ಮಂದಿ ಸಿಹಿಯನ್ನು ಬಾಯಿಗಿರಿಸಿ ಸಂಭ್ರಮಿಸಿದರು. ಬಳಿಕ ಸಂಘ ನಿಕೇತನದಲ್ಲಿ, ಬಿಜೆಪಿ ಕಚೇರಿಯಲ್ಲಿ ನಳಿನ್ ಅಭಿನಂದನೆ ಸ್ವೀಕರಿಸಿದರು. ಸಂಜೆ ಕಟೀಲು, ಶರವು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.
ಗುರುವಾರ ಬೆಳಗ್ಗೆ ನಳಿನ್ ಕುಮಾರ್ ಅವರು ದಿಲ್ಲಿಗೆ ತೆರಳಲಿದ್ದು, ಪಕ್ಷದ ವರಿಷ್ಠರನ್ನು ಭೇಟಿ ಮಾಡುವರು.