Advertisement

ಉಪದೇಶ ಪಾಲನೆಯಿಂದ ಮೋಕ್ಷ ಪ್ರಾಪ್ತಿ

02:46 PM Apr 06, 2017 | |

ಹುಬ್ಬಳ್ಳಿ: ಮಹಾವೀರ ತೀರ್ಥಂಕರರ ಉಪದೇಶವೇ ನಮ್ಮ ಎರಡು ಕಣ್ಣುಗಳಾಗಿದ್ದು, ಸ್ವಾಮಿಯ ಮಾರ್ಗದಲ್ಲೇ ಜೀವನ ಸಾಗಿಸು ತ್ತೇವೆಂದು ಮುಂದೆ ಸಾಗಿದರೆ ಮೋಕ್ಷಪ್ರಾಪ್ತಿ ಪಡೆಯಬಹುದೆಂದು ಹೊಂಬುಜದ ಶ್ರೀ ಜೈನ ಮಠದ ಡಾ| ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನುಡಿದರು. 

Advertisement

ಇಲ್ಲಿನ ಮಹಾವೀರ ಗಲ್ಲಿಯ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿರುವ ಮಹಾವೀರ ತೀರ್ಥಂಕರರ 2616ನೇ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಶಾಂತಿನಾಥ ತೀರ್ಥಂಕರರು ಮಾರ್ಗ ತಪ್ಪಿ ಹೋಗುತ್ತಿದ್ದಾಗ ಅವರಿಗೆ ಸರಿಯಾದ ಮಾರ್ಗ ತೋರಿದ ಬೇಡನು ಶ್ರೀಗಳ ಆಶೀರ್ವಾದದ ಫಲದಿಂದಾಗಿ ಮಹಾವೀರರಾಗಿ ಜನಿಸಿದರು.

ಮಹಾವೀರ ತೀರ್ಥಂಕರರು ಅಪಾರ ಪುಣ್ಯಪ್ರಾಪ್ತಿ ಮಾಡಿಕೊಂಡು ಮೋಕ್ಷ ಹೊಂದಿದರು. ಇಂದಿಗೂ ತೀರ್ಥಂಕರರ ಅನುಶಾಸನ, ಉಪದೇಶ, ಮಾರ್ಗದರ್ಶನದಂತೆ ಮೋಕ್ಷ ಮಾರ್ಗ ನಡೆಯುತ್ತಿದೆ ಎಂದರು. ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಡಿಆರ್‌ಎಂ ಅರುಣ ಜೈನ ಮಾತನಾಡಿ, ಸದ್ಯದಲ್ಲೇ ಹುಬ್ಬಳ್ಳಿ-ಶ್ರವಣಬೆಳಗೊಳಕ್ಕೆ ರೈಲು ಆರಂಭಿಸಲಾಗುವುದು.

ಅಲ್ಲದೆ ಈ ರೈಲಿಗೆ ಧಾರವಾಡದಿಂದ ಎರಡು ಹೆಚ್ಚುವರಿ ಬೋಗಿ ಅಳವಡಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಸ್ಥಳೀಯ ದಿಗಂಬರ ಜೈನ ಸಮಾಜದ ಅಧ್ಯಕ್ಷ ಶಾಂತಿನಾಥ ಹೋತಪೇಟಿ ಮಾತನಾಡಿ, ಮಹಾಮಸ್ತಕಾಭಿಷೇಕ ನಿಮಿತ್ತ ನಗರಕ್ಕೆ ಅನೇಕ ತ್ಯಾಗಿಗಳು ಬರುತ್ತಾರೆ. ಸಮಾಜದವರು ತ್ಯಾಗಿಗಳ ಸೇವೆಯಲ್ಲಿ ಪಾಲ್ಗೊಳ್ಳಿರಿ. ಯುವ ಜನಾಂಗವು ಸಮಾಜ ಸೇವೆಯಲ್ಲಿ ತೊಡಗಿರುವುದು ಸಂತಸದ ವಿಷಯ.

ಸಮಾಜದಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಪ್ರೀತಿ-ವಿಶ್ವಾಸದಿಂದ ಸಮಾಜ ಬಲಗೊಳಿಸೋಣವೆಂದರು. ಇದೇ ಸಂದರ್ಭದಲ್ಲಿ ಶ್ರೀಗಳು ಸಮಾಜದಲ್ಲಿ ವಿವಿಧ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿದರು. ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿಮಲ ತಾಳಿಕೋಟಿ, ರಾಜೇಂದ್ರ ಬೀಳಗಿ, ಶ್ರೇಣಿಕರಾಜ ರಾಜಮಾನೆ, ಆರ್‌.ಟಿ. ತವನಪ್ಪನವರ, ಮಹಾವೀರ ಸೂಜಿ, ರಾಮಚಂದ್ರ ದಿನಕರ ಇದ್ದರು. ಭರತಕುಮಾರ ಮುತ್ತಗಿ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next