Advertisement
ಮೊದಲೇ ಹೇಳಿಕೊಳ್ಳಬೇಕು. ಸಂವಹನದಲ್ಲಿ ಭಾಷೆಗೆ ಮಹತ್ವವಿದೆ. ಆದರೆ ಭಾಷೆಯೊಂದೇ ಸಂವಹನದ ಮಾಧ್ಯಮವಲ್ಲ ಅಥವಾ ಭಾಷೆಯೇ ಎಲ್ಲವೂ ಅಲ್ಲ. ಭಾಷೆ ಮತ್ತು ಬಾಡಿ ಲ್ಯಾಂಗ್‌ವೇಜ್ ಪರಸ್ಪರ ವಿರುದ್ಧ ಸಿಗ್ನಲ್‌ಗಳನ್ನು ಹೊರಸೂಸಿದರೆ ವ್ಯಕ್ತಿತ್ವ ತಪ್ಪು ರೀತಿಯಲ್ಲಿ ಅರ್ಥವಾಗಬಲ್ಲ ಸಾಧ್ಯತೆ ಇರುತ್ತದೆ. ಇದು ಗಾಂಧಿಗೆ ಗೊತ್ತಿತ್ತು. ಆದ್ದರಿಂದ ಗಾಂಧಿ ತಮ್ಮ ನುಡಿ ಮತ್ತು ನಡೆಯಲ್ಲಿ ವ್ಯತ್ಯಾಸ ಬರದಂತೆ ಎಚ್ಚರ ವಹಿಸಿಕೊಳ್ಳುತ್ತಿದ್ದರು. ಭಾಷೆ ಮತ್ತು ಕ್ರಿಯೆ ಸೇರಿಕೊಂಡು ಸಂವಹಿಸಿದಾಗ, ಒಂದು ಅದ್ಭುತವಾದ, ಅಣುಬಾಂಬಿನಂತಹ ಶಕ್ತಿಯುಳ್ಳ ಸಂವಹನ ಸಿದ್ಧಿಯಾಗುತ್ತದೆ. ವ್ಯಕ್ತಿಯೊಬ್ಬನಿಗೆ ಅತಿಮಾನುಷ ಶಕ್ತಿ ಪ್ರಾಪ್ತವಾಗುತ್ತದೆ. ಆತ ನಾಯಕನಾಗುತ್ತಾನೆ, ಗಾಂಧೀಜಿಯ ಹಾಗೆ, ಲಿಂಕನ್ ಹಾಗೆ. ಹಿಟ್ಲರ್ ಹಾಗೆ. ಜನರು ಆತನನ್ನು ಪ್ರೀತಿಸುತ್ತಾರೆ. ವಿಶ್ವಾಸವಿಡುತ್ತಾರೆ. ಆತನಿಗಾಗಿ ಕಣ್ಣೀರಿಡುತ್ತಾರೆ ಏಕೆಂದರೆ ಆತ ತನ್ನ ಜನರ ವ್ಯಕ್ತಿತ್ವದ ಭಾಗವಾಗಿ ಹೋಗುತ್ತಾನೆ.
Related Articles
Advertisement
ಹೆಚ್ಚಿನ ಸಂಕೀರ್ಣತೆಯುಳ್ಳ ಸನ್ನಿವೇಶಗಳಲ್ಲಿ ಸಂವಹನಕ್ಕೆ ತುಂಬ ಸವಾಲುಗಳಿರುತ್ತವೆ. ಅವುಗಳನ್ನು ಹೀಗೆ ಬೇರೆ ಬೇರೆ ರೀತಿಯ ವಾಕ್ಯಗಳ ಮೂಲಕ ಪರಿಹರಿಸಬಹುದು. ವಾಕ್ಯರಚನೆಯಲ್ಲಿ ಪ್ರತಿಯೊಂದು ಮಾತನ್ನೂ ಹೇಳಲು ಅಪರಿಮಿತ ಅವಕಾಶಗಳಿರುತ್ತವೆ. ಪ್ರತಿಯೊಂದು ವಾಕ್ಯರಚನೆಗೂ ಕಾಂಬಿನೇಶನ್‌ಗಳಿರುತ್ತವೆ. ಅವನ್ನು ಗ್ರಹಿಸಿದರೆ ಸಂವಹನ ನಿಜಕ್ಕೂ ಶಕ್ತಿಯುತವಾಗುತ್ತದೆ. ಹಾಗೆಯೇ ವಾಕ್ಯಗಳಲ್ಲಿ ಶಬ್ದಗಳು ತುಸು ಹಿಂದೆ ಮುಂದಾದರೂ ಅವು ಸಂಕಟಗಳನ್ನು ಉಂಟು ಮಾಡುತ್ತವೆ. ಉದಾಹರಣೆಗೆ “”ನೀವು ಬನ್ನಿ, ಅವರೂ ಬರುತ್ತಿದ್ದಾರೆ” ಎಂದು ಹೇಳಿ ನೋಡಿ! ಎದುರು ಕುಳಿತವ ಬೀಗುತ್ತಾನೆ. ಆದರೆ “”ಅವರು ಬರುತ್ತಿದ್ದಾರೆ, ನೀವೂ ಬನ್ನಿ” ಎಂದು ಹೇಳಿ ನೋಡಿ. ಎದುರು ಕುಳಿತವನ ಮುಖ ಸಪ್ಪಗಾಗುತ್ತದೆ. ಏಕೆಂದರೆ ಎರಡನೆಯ ವಾಕ್ಯ ಜೋಡಣೆಯಲ್ಲಿ ಎದುರು ಕುಳಿತವನು ಅಮುಖ್ಯವಾಗಿ ಬಿಡುತ್ತಾನೆ. ಆತನಿಗೆ ಅದು ಬೇಕಂತಲೇ ಮಾಡಿದ ಅವಮಾನವೆನಿಸುತ್ತದೆ. ಇರುವುದು ಚಿಕ್ಕ ವ್ಯತ್ಯಾಸ ಅಷ್ಟೇ.
ಶಬ್ದಗಳು ಮತ್ತು ವಾಕ್ಯ ರಚನೆಯ ಕಲೆಯನ್ನು ತಿಳಿದವ ನಿಜವಾಗಿ ಶ್ರೇಷ್ಠ ಸಂವಾಹಕ. ಆತನಿಗೆ ಎಲ್ಲಿ ನೇರವಾಗಿ ಹೇಳಬೇಕು. ಎಲ್ಲಿ ಹೇಳಬೇಕು? ಎಲ್ಲಿ ಪ್ರಶ್ನೆಯ ಮೂಲಕ ಉತ್ತರ ಕೊಡಬೇಕು? ಎಲ್ಲಿ ಯಾವ ಶಬ್ದ ಬಳಸಬೇಕು? ಯಾವ ರೀತಿಯ ವಾಕ್ಯ ಸಂಯೋಜನೆಯಲ್ಲಿ ಹೇಳಬೇಕು ಇತ್ಯಾದಿ ತಿಳಿದಿರುತ್ತವೆ. ಇದೆಲ್ಲವೂ ಹುಟ್ಟಿನಿಂದ ಬರಲು ಸಾಧ್ಯವಿಲ್ಲ. ಎಚ್ಚರಿಕೆಯಿಂದ ಭಾಷೆಯನ್ನು ನೋಡಿಕೊಳ್ಳುತ್ತಾ ಹೋದಂತೆ ಸೂಕ್ಷ್ಮತೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತದೆ.
ಭಾಷೆಗೆ ಇನ್ನೊಂದು ಆಯಾಮ ಇದೆ. ಅದೇನೆಂದರೆ ಮಾತನಾಡಬೇಕಾದರೆ ಭಾಷೆಯ ಪಿಚ್ ಮತ್ತು ಟೋನ್ ಬಳಕೆ. ಇಲ್ಲಿ ಕೆಲವು ತಪ್ಪು ಕಲ್ಪನೆಗಳನ್ನು ಅಭಿಪ್ರಾಯಗಳನ್ನು ನಿವಾರಿಸಿ ಕೊಳ್ಳಬೇಕು. ಒಂದನೆಯದೆಂದರೆ ದೊಡ್ಡದಾಗಿ ಆಕ್ರಮಣ ಕಾರಿಯಾಗಿ ಮಾತನಾಡುವುದೇ ನಾಯಕತ್ವದ ಅಥವಾ ಸಂವಹನ ಕಲೆಯ ಗುಣ ಎಂಬ ಭಾವನೆಯೂ ಸಮಾಜದಲ್ಲಿ ಇರುವ ಹಾಗೆ ಕಾಣಿಸುತ್ತದೆೆ. ಚೆನ್ನಾಗಿ ಹೇಳುವುದು ಎಂದರೆ ಕಿರುಚುವುದು ಎಂದು ಮಾತಿನ ಕ್ಷೇತ್ರದಲ್ಲಿರುವವರು ಭಾವಿಸಿಕೊಂಡ ಹಾಗೆ ಕಾಣುತ್ತದೆ. ಉದಾಹರಣೆಗೆ ಶಾಲೆ-ಕಾಲೇಜುಗಳ, ಶಿಕ್ಷಕರು ಹಲವೊಮ್ಮೆ ಎಷ್ಟು ದೊಡ್ಡ ದನಿಗಳಲ್ಲಿ ಕಿರಿಚುತ್ತಾರೆಂದರೆ ವಿದ್ಯಾರ್ಥಿಗಳ ಕಿವಿ ಬಿದ್ದು ಹೋಗಬೇಕು. ಹಾಗೆಯೇ ರಾಜಕಾರಣಿಗಳೂ. ಎತ್ತರದ ಧ್ವನಿಯಲ್ಲಿ ಮಾತನಾಡುವವನು ಒಳ್ಳೆಯ ಸಂವಹನಕಾರ ಎಂಬ ಭಾವನೆ ಅವರಿಗಿರುವ ಹಾಗೆ ಅನಿಸುತ್ತದೆ. ಕ್ರಮೇಣ ಇದು ಟೆಲಿವಿಷನ್ ಕ್ಷೇತ್ರಕ್ಕೂ ಬರುತ್ತಿದೆ. ಅಲ್ಲಿ ಚರ್ಚೆಗೆ ಬರುವ ವ್ಯಕ್ತಿಗಳು ಎಷ್ಟು ದೊಡ್ಡ ಧ್ವನಿಯಲ್ಲಿ ಕಿರಿಚುತ್ತಾರೆಂದರೆ ಅದು ಸಹಿಸಲಾಧ್ಯ. ಟಿ.ವಿ. ಚಿಕ್ಕದು ಮಾಡಿಯೇ ಕೇಳಬೇಕು.
ಗಮನಿಸಿಕೊಳ್ಳಬೇಕಾದದ್ದೆಂದರೆ ಧ್ವನಿಗೆ, ಸ್ವರಕ್ಕೆ ಪಿಚ್‌ಗೆ, ಟೋನೆY, ವಾಚ್ಯಾರ್ಥ ಹೇಳಿದ್ದಕ್ಕಿಂತಲೂ ಇನ್ನೂ ಒಂದು ವಿಶೇಷವಾದದ್ದು ಏನೋ ಹೇಳುವ ಶಕ್ತಿ ಇರುತ್ತದೆ. ಸ್ವರಕ್ಕೆ, ಧ್ವನಿಗೆ ಭಾವನೆಗಳಿರುತ್ತವೆ. ಉದಾಹರಣೆಗೆ: I Love You ಎನ್ನುವ ಶಬ್ದಗಳ ಹಿಂದೆ ಭಾವನೆಯ ಮಹಾಪೂರವೇ ಇರುತ್ತದೆ. ಸುಮ್ಮನೆ I Love You ಎಂದು ಏರಿಳಿತವಿಲ್ಲದ ಧ್ವನಿಯಲ್ಲಿ ಹೇಳಿದರೆ ಅದು ಭಾವನೆಯ ಮೇಘದೂತನನ್ನು ಹೊತ್ತೂಯ್ಯುವುದೇ ಇಲ್ಲ. ಮುಖ್ಯವಾಗಿ ಉತ್ಸಾಹ ತುಂಬಿಕೊಂಡು ಮಾತನ್ನು ಆಡುವುದು ಮತ್ತು ನಿರುತ್ಸಾಹದಿಂದ ಅದೇ ಮಾತನ್ನು ಆಡುವುದಕ್ಕೆ ಸಾಕಷ್ಟು ವ್ಯತ್ಯಾಸಗಳಿವೆ. ಮೆಲುವಾಗಿ ಹೇಳುವುದಕ್ಕೆ ವ್ಯತ್ಯಾಸವಿದೆ. ಗಡುಸಾಗಿ, ಬಿರುಸಾಗಿ ಹೇಳುವುದಕ್ಕೆ ವ್ಯತ್ಯಾಸಗಳಿವೆ.
ನಮ್ಮ ಹಲವು ನಾಯಕರುಗಳ ಮಾತುಗಳು ಮಾತು ಜನರನ್ನು ಮುಟ್ಟದಿರುವುದಕ್ಕೆ ಕಾರಣವಿದೆ. ಏನೆಂದರೆ ಅವರಿಗೆ ತಾವು ಆಡುತ್ತಿರುವ ಮಾತುಗಳ ಕುರಿತು ಅಷ್ಟೊಂದು ಉತ್ಸಾಹ ಇರುವಂತೆ ಕಾಣುವುದಿಲ್ಲ. ಪ್ರೀತಿ ಮತ್ತು ನಂಬಿಕೆ ಇರುವಂತೆ ಕಾಣುವುದಿಲ್ಲ. ಸಂವಹನ ವೈಫಲ್ಯವಾಗಿ ಹೋಗುತ್ತದೆ. ಇನ್ನೂ ಒಂದು ವಿಷಯವೆಂದರೆ ಗಡಸು ಮಾತಿನ ಅಗತ್ಯವಿಲ್ಲದಿದ್ದರೂ ಮೆಲು ಮಾತೇ ಒಳ್ಳೆಯ ಕೆಲಸ ಮಾಡಬಹುದಾಗಿದ್ದಾಗಿಲೂ ಹಲವರು ಆಡುವುದು ಗಡುಸಾದ ಮಾತನ್ನೇ. ಮುಖ್ಯವಾಗಿ ಗಂಡ-ಹೆಂಡಿರ ಸಂಬಂಧದಲ್ಲಿ ಇದು ಬಹಳ ಮಹತ್ವದ ವಿಷಯ. ಸಾಮಾನ್ಯವಾಗಿ ಗಂಡ-ಹೆಂಡಿರು ಒಬ್ಬರನ್ನೊಬ್ಬರು Taken for granted ಮಾಡಿಕೊಂಡುಬಿಡುತ್ತಾರೆ. ಗಂಡ-ಹೆಂಡತಿಯಲ್ಲಿ ಏನು ಫಾರ್ಮಲಿಟಿ ಎನ್ನುವ ವಾದ ಅವರದು. ಆದರೆ ವಿಷಯ ಹಾಗಿರುವುದಿಲ್ಲ. ಕ್ರಮೇಣ ಈ ಬಿರು ಮಾತುಗಳಿಂದ ಗಂಡ ಅಥವಾ ಹೆಂಡತಿ ಅಥವಾ ಇಬ್ಬರು ಬೇಸತ್ತು ಹೋಗುತ್ತಾರೆ. ಹಾಗಾಗಿ ಸಾಧ್ಯವಾದಷ್ಟು ಮಟ್ಟಿಗೆ ಮೆಲುವಾಗಿ, ಮೆದುವಾಗಿ ಮಾತನಾಡುವುದು ಒಳ್ಳೆಯದು. ಗಟ್ಟಿ ನಿರ್ಣಯಗಳನ್ನು ಕೂಡ, ಕೇಳುಗನಿಗೆ ಅಪ್ರಿಯವಾದ ವಿಷಯಗಳನ್ನು ಕೂಡ ಮೆಲು ಮಾತಿನಲ್ಲಿ ಹೇಳಲು ಸಾಧ್ಯವಿದೆ. ಈ ರೀತಿ ಮಾತನಾಡಲು ಕಲಿಯುವುದೇ ಒಂದು ಜೀವನ ಕಲೆ.
ಈ ಹಿನ್ನೆಲೆಯಲ್ಲಿ ಧ್ವನಿಯ ಮೊಡುಲೇಶನ್ ಅನ್ನು ನಾವು ಗ್ರಹಿಸಬೇಕಿದೆ. ಕೇಳುಗರಿಗೆ ಸಿಹಿಯಾಗಿ ಕೇಳಿಸಲು ಎಷ್ಟು ಧ್ವನಿಯನ್ನು ಹೊರಬಿಡುವ ಅಗತ್ಯವಿದೆಯೇ ಅಷ್ಟನ್ನೇ ಹೊರಬಿಡಬೇಕು. ಜನ ಹೆಚ್ಚಾದಂತೆ ತುಸು-ತುಸುವೇ ಧ್ವನಿಯನ್ನು ವಿಸ್ತರಿಸುತ್ತಾ ಹೋಗಬೇಕು. ಇಂತಹ ಮಾತು ಸಂಗೀತವಾಗುತ್ತದೆ. ಧ್ವನಿ ಮತ್ತು ಸ್ವರಗಳ ವಿಶೇಷತೆಯೆಂದರೆ ಅವುಗಳಿಂದ ವ್ಯಂಗ್ಯಾಥìವನ್ನು, ವಿರುದ್ಧಾರ್ಥವನ್ನು ಕೂಡಾ ಹೊರಡಿಸಬಹುದು. ಇಂತಹದೊಂದು ಸನ್ನಿವೇಶ ಶೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ ಜೂಲಿಯಸ್ ಸೀಸರ್‌ನಲ್ಲಿ ಬರುತ್ತದೆ. ಮಾರ್ಕ್ ಎಂಟನಿಗೆ ಮಾತಿನಲ್ಲಿ ವಿರುದ್ಧಾರ್ಥ ಹೊರಡಿಸಬೇಕಿರುತ್ತದೆ. ಅದಕ್ಕಾಗಿ ಆತ “ಗೌರವಾನ್ವಿತ’ ಬ್ರೂಟಸ್ ಎಂದು ಸೀಸರ್‌ನ ಕೊಲೆಗಾರನ ಕುರಿತು ಹೇಳುತ್ತಾ ಹೋಗುತ್ತಾನೆ. ಮೊದ-ಮೊದಲು “ಗೌರವಾನ್ವಿತ’ ಎಂದೇ ಅನಿಸುವ ಶಬ್ದ ಕ್ರಮೇಣ ಅದರ ವಿರುದ್ಧಾರ್ಥವನ್ನು ಮೊಳಗಿಸಲು ಆರಂಭಿಸುತ್ತದೆ. ಇದು ಸಂವಹನದಲ್ಲಿ ಬಹಳ ಮಹತ್ವವಾದದ್ದು. ಸಂವಹಿಸುವವನಿಗೆ ಭಾಷೆ ತಿಳಿದಿರಬೇಕು ಎನ್ನುವುದರ ಅರ್ಥ ಇದು. ಭಾಷೆ ಇಂತಹ ಜ್ಞಾನ ಅಸಾಧಾರಣ ಮಾಂತ್ರಿಕ ಶಕ್ತಿಯನ್ನು ಸಂವಹನಿಗೆ ಒದಗಿಸುತ್ತದೆ.
ಮಾತು ಹೇಗೆ ವ್ಯಕ್ತಿಗಳನ್ನು ಗೆಲ್ಲಬಹುದೆನ್ನುವುದರ ಕುರಿತು ಒಂದು ಉದಾಹರಣೆ ಹೇಳಬಯಸುತ್ತೇನೆ. ಗೆಳೆಯ ತಮಿಳುನಾಡಿನ ಇಂಜಿನಿಯರಿಂಗ್ ಕಾಲೇಜೊಂದಕ್ಕೆ ಹೋಗಿದ್ದ. ಗೆಸ್ಟ್‌ಹೌಸ್‌ನಲ್ಲಿದ್ದ. ಬೆಳಿಗ್ಗೆ ನೋಡಿದರೆ ಸೋಪ್ ಇಲ್ಲ. ಅಂಗಡಿಗಳು ಅಲ್ಲಿಂದ ದೂರ. ಆತ ಗೆಸ್ಟ್ ಹೌಸ್‌ನ ಹುಡುಗನನ್ನು ಒಂದು ಸೋಪ್ ತಂದುಕೊಡಲು ಸಾಧ್ಯವಾಗುತ್ತದಾ? ಎಂದು ಕೇಳಿದ. ಆದರೆ ಆ ಹುಡುಗ ನಿರಾಕರಿಸಿ “”ಇಲ್ಲ, ಸರ್, ನಗರ ತುಂಬ ದೂರವಾಗುತ್ತದೆ. ಹೋಗಲಾರೆ ಎಂದ. ನಮ್ಮ ಬಿಟ್ಟುಕೊಡಲಿಲ್ಲ. ಪ್ಲೀಸ್ ಹೆಲ್ಪ್ ಎಂದು ವಿನಂತಿಸಿದ. ಈಗ ಆ ಹುಡುಗನಿಗೆ ಏನನಿಸಿತೋ ಏನೋ, ತಟ್ಟೆಂದು ಅವನ ಬೈಕ್ ಹತ್ತಿಹೋಗಿ ಸೋಪ್ ತಂದಿದ್ದಷ್ಟೇ ಅಲ್ಲ. “”ಹಣ ಬೇಡ ಸರ್, ಹಣಕ್ಕಾಗಿ ಇದನ್ನು ನಾನು ಮಾಡಿದವನಲ್ಲ, ತಾವು ಪ್ಲೀಸ್ ಎಂದು ಹೇಳಿದ್ದಕ್ಕಾಗಿ ಮಾಡಿದ್ದು”ಎಂದು ಹೇಳಿದ.
ಘಟನೆ ತುಂಬಾ ಅರ್ಥವತ್ತಾಗಿದ್ದು. ಅಂದರೆ ಪ್ಲೀಸ್ ಅಥವಾ ದಯವಿಟ್ಟು ಎನ್ನುವ ಶಬ್ದಗಳಿಗೆ ತುಂಬ ಮಹತ್ವವಿದೆ. ಅವು ಕೇಳುಗನನ್ನು ಕಟ್ಟಿ ಹಾಕಿ ಆತನಿಂದ ಕೆಲಸ ಮಾಡಿಸುತ್ತದೆ. ಬಹುಶಃ ಸುಮಧುರವಾಗಿ ಮಾಡಿದ ವಿನಂತಿಯಷ್ಟು ಪ್ರಬಲವಾಗಿದ್ದು ಜಗತ್ತಿನಲ್ಲಿ ಬೇರಾವುದೂ ಇಲ್ಲ. ಹಲವೊಮ್ಮೆ ಅಪ್ಪಣೆಯಿಂದ ಆಗದ ಕೆಲಸ, “”ಪ್ಲೀಸ್” ಹೇಳಿದರೆ ಆಗುತ್ತದೆ. ಹಾಗಾಗಿ ನಾವು ಹೆಚ್ಚು ಹೆಚ್ಚು ಹೇಳಬೇಕಾದ ಶಬ್ದ ಕೃತಜ್ಞತೆ ಮತ್ತು ಪ್ಲೀಸ್. ಇವು ಜನರ ಹೃದಯವನ್ನು ಮುಟ್ಟುವ ಶಬ್ದಗಳು.
ಹಾಗೆಂದು ಒಂದು ಅತಿ ಮಹತ್ವದ ವಿಷಯವಿದೆ. ಭಾಷೆ ಎದುರಿಗೆ ಇರುವ ವ್ಯಕ್ತಿಯನ್ನು ಆದಷ್ಟು ನೋಯಿಸಬಾರದು ಸರಿ. ಅತನ ಅಹಂ ಅನ್ನು ಹರ್ಟ್ ಮಾಡಬಾರದು. ಆದರೆ ಅದೇ ಸಂದರ್ಭದಲ್ಲಿಯೇ ಸ್ವಂತ ವ್ಯಕ್ತಿತ್ವವನ್ನು ಕೀಳಾಗಿ ಬಿಂಬಿಸಬಾರದು ಕೂಡಾ. ಅಂದರೆ ನಮ್ಮ ವ್ಯಕ್ತಿತ್ವದ ಘನತೆಯನ್ನು ನಾವು ಕಡಿಮೆ ಮಾಡಿಕೊಳ್ಳಬಾರದು. ಹೀಗೆ ಬೇರೆಯವರನ್ನು ನೋಯಿಸದ ಆದರೆ ನಮ್ಮ ವ್ಯಕ್ತಿತ್ವವನ್ನು ಅಸರ್ಟ್ ಮಾಡಿಕೊಳ್ಳುವ, ತನ್ಮೂಲಕ ಒಳ್ಳೆಯ ಮಾನವ ಸಂಬಂಧಗಳನ್ನು ರಚಿಸುವ ಕಲೆ ಸಂವಹನ. ಭಾಷೆಗೆ ಈಗಲೇ ಹೇಳಿದ ಹಾಗೆ ಸಂವಹನ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವಿದೆ.
(ಲೇಖಕರು ಪ್ರಸಿದ್ಧ ಸಾಫ್ಟ್ಸ್ಕಿಲ್ ತರಬೇತುದಾರರು)
ಡಾ. ಆರ್.ಜಿ. ಹೆಗಡೆ