Advertisement

ಅಂಚೆ ಕಚೇರಿ ಕೇಂದ್ರದ ಯೋಜನೆ ತಲುಪಿಸುವ ವಾಹಕ

03:19 PM Jul 14, 2018 | |

ಚಿಕ್ಕಮಗಳೂರು: ಜಿಲ್ಲಾದ್ಯಂತ ಅಂಚೆಕಚೇರಿಗಳ ಕಟ್ಟಡ ನಿರ್ಮಾಣ ಹಾಗೂ ದುರಸ್ತಿಗೆ 2.86 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ವ್ಯಯಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ನಗರದ ಎಪಿಎಂಸಿ ಆವರಣದ ಸಮೀಪ 1.67 ಕೋಟಿ ರೂ. ವೆಚ್ಚದಲ್ಲಿ ದಿವ್ಯಾಂಗರ ಸ್ನೇಹಿಯಾಗೂ ನಿರ್ಮಿಸಿರುವ ಅಂಚೆ ಅಧೀಕ್ಷಕರ ನೂತನ ವಿಭಾಗೀಯ ಕಚೇರಿ ಹಾಗೂ ಜ್ಯೋತಿನಗರ ಅಂಚೆ ಕಚೇರಿ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತೀ ತಿಂಗಳು ದುಬಾರಿ ಬಾಡಿಗೆ ನೀಡಿ ಕಚೇರಿಗಳನ್ನು ಖಾಸಗಿ ಕಟ್ಟಡದಲ್ಲಿ ನಡೆಸುವುದಕ್ಕಿಂತ ಸ್ವಂತ ಕಚೇರಿಗಳನ್ನು ಹೊಂದಿರಬೇಕೆಂಬ ತಮ್ಮ ಒತ್ತಾಯದಿಂದ ಇಂದು ಜಿಲ್ಲೆಯಲ್ಲಿ ಅಂಚೆ ಕಚೇರಿಗಳು ಸ್ವಂತ ಕಟ್ಟಡದಲ್ಲಿವೆ ಎಂದರು.

ಹಿಂದಿನಂತೆ ಅಂಚೆ ಕಚೇರಿಗಳು ಕೇವಲ ಕಾಗದ ಪತ್ರ ತಲುಪಿಸುವ ಕಚೇರಿಗಳಾಗದೆ ಇಂದು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಹೊಸ ಜವಾಬ್ದಾರಿಗಳನ್ನು ಹೊರುತ್ತಿವೆ. ಜೀವನ್‌ಜ್ಯೋತಿ ಬಿಮಾ ಯೋಜನೆ, ಜೀವನ್‌ ಸುರಕ್ಷಾ ಬಿಮಾ ಯೋಜನೆ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳನ್ನು ಅಂಚೆ ಕಚೇರಿ ಮೂಲಕವೇ ಜನರಿಗೆ ತಲುಪಿಸಲಾಗುತ್ತಿದೆ. ಚಿಕ್ಕಮಗಳೂರು
ಜಿಲ್ಲೆಯೊಂದರಲ್ಲೇ ಸುಕನ್ಯಾ ಸಮೃದ್ಧಿ ಯೋಜನೆಯ ಲಾಭವನ್ನು 25,451 ಮಕ್ಕಳು ಪಡೆದಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಕಚೇರಿ ಕಟ್ಟಡಗಳು ಜನಸ್ನೇಹಿಯಾಗಿರಬೇಕು ಹಾಗೂ ದಿವ್ಯಾಂಗರು ಬಂದು ಹೋಗಲು ಪೂರಕವಾಗಿರುವಂತೆ ನಿರ್ಮಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛೆಯಂತೆಯೇ ಈ ಕಟ್ಟಡ ನಿರ್ಮಿಸಲಾಗಿದೆ ಎಂದರು.

Advertisement

ಈವರೆಗೂ ಅಂಚೆ ಕಚೇರಿಗಳಲ್ಲಿ 5 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಅಂಚೆ ನೌಕರರನ್ನು 7ನೇ ವೇತನ ಆಯೋಗದಲ್ಲಿ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಮುಖ್ಯ ಪ್ರಧಾನ ಅಂಚೆ ಅಧೀಕ್ಷಕ ಡಾ| ಚಾರ್ಲ್ಸ್‌ ಲೋಬೋ, ರಾಜ್ಯದಲ್ಲಿರುವ 33 ವಿಭಾಗೀಯ ಕಚೇರಿಗಳು ಈಗ ಸ್ವಂತ ಕಟ್ಟಡ ಹೊಂದಿವೆ. ಈಗಾಗಲೇ ಹಲವು ಅಂಚೆ ಕಚೇರಿಗಳಿಗೂ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿವೆ. ಮೈಸೂರಿನಲ್ಲಿರುವ ಅಂಚೆ ಇಲಾಖೆ ಮಹಿಳಾ ನೌಕರರ ತರಬೇತಿ ಕೇಂದ್ರ ಕಟ್ಟಡವೂ ಸಿದ್ಧಗೊಳ್ಳುತ್ತಿದೆ ಎಂದು ಹೇಳಿದರು.

ಅಂಚೆ ಇಲಾಖೆ ಈಗ ಪಾಸ್‌ಪೋರ್ಟ್‌ ಸೇರಿದಂತೆ ಆಧಾರ್‌ ಕಾರ್ಡ್‌ ವಿತರಿಸುವ ಕೇಂದ್ರವಾಗೂ ಕಾರ್ಯ ನಿರ್ವಹಿಸುತ್ತಿದೆ. ಚಿಕ್ಕಮಗಳೂರಿನ ನೂತನ ವಿಭಾಗೀಯ ಕಚೇರಿ ಹಾಗೂ ಜ್ಯೋತಿನಗರ ಅಂಚೆ ಕಚೇರಿ ಸೋಮವಾರದಿಂದ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ದಕ್ಷಿಣ ಕರ್ನಾಟಕ ವಲಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರ ಕುಮಾರ್‌ ಸ್ವಾಗತಿಸಿದರು. ವಿಭಾಗೀಯ ಅಂಚೆ ಅಧೀಕ್ಷಕ ಜಿ.ಎಸ್‌.ಶ್ರೀನಿವಾಸ್‌ ವಂದಿಸಿದರು.
 
ರಾಜ್ಯದ 12 ಜಿಲ್ಲೆಗಳಲ್ಲಿ ದರ್ಪಣ್‌ ಸೌಲಭ್ಯ ಆರಂಭ
ಚಿಕ್ಕಮಗಳೂರು:
ರಾಜ್ಯದ 12 ಜಿಲ್ಲೆಗಳಲ್ಲಿ ಅಂಚೆ ಸೇವೆಗೆ ದರ್ಪಣ್‌ (ಡಿಜಿಟಲ್‌ ಅಡ್ವಾನ್ಸ್‌ಮೆಂಟ್‌ ಆಫ್‌ ರೂರಲ್‌ ಪೋಸ್ಟ್‌ ಆಫೀಸ್ ಇನ್‌ ನ್ಯೂ ಇಂಡಿಯಾ) ಸೌಲಭ್ಯವನ್ನು ನೀಡಲಾಗಿದೆ. ಉಳಿದ ಜಿಲ್ಲೆಗಳಿಗೆ ಸಪ್ಟೆಂಬರ್‌ ತಿಂಗಳ ಒಳಗೆ ಈ ಸೇವೆ ಒದಗಿಸಲಾಗುವುದು ಎಂದು ರಾಜ್ಯ ಅಂಚೆ ಇಲಾಖೆ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ| ಚಾರ್ಲ್ಸ್‌ ಲೋಬೋ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸೇವೆ ಮೂಲಕ ಪ್ರತಿಯೊಬ್ಬರ ಮನೆ ಬಾಗಿಲಿಗೆ ಹೋಗಿ ಹಣ ವರ್ಗಾವಣೆಯಿಂದ ಹಿಡಿದು ಇನ್ನಿತರ ಕೆಲಸಗಳನ್ನು ಸಣ್ಣ ಉಪಕರಣದ ಮೂಲಕ ಮಾಡಬಹುದೆಂದು ತಿಳಿಸಿದರು.

ಅಂಚೆ ಕಚೇರಿಗಳು ಇಂದು ಕೇವಲ ಪತ್ರ ಸಾಗಣೆ ಮತ್ತು ವಿತರಣೆಗೆ ಮೀಸಲಾಗಿಲ್ಲ. ಹಿಂದಿನಂತೆಯೇ ಪಾರ್ಸೆಲ್‌ ಸರಬರಾಜು ಸೇವೆ ಸಹ ಒದಗಿಸುತ್ತಿದೆ. ಅಮೆಜಾನ್‌ ಮತ್ತು ಫ್ಲಿಪ್ಪ್‌ಕಾರ್ಟ್‌ನಂತಹ ಸಂಸ್ಥೆಗಳ ಪಾರ್ಸೆಲ್‌ಗ‌ಳನ್ನು ತಲುಪಿಸುವ ಕೆಲಸ ಮಾಡುತ್ತಿದೆ. ಇ-ವಾಣಿಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಈ ಕಾಲದ ಬೇಡಿಕೆಗೆ ಅನುಗುಣವಾಗಿ ಅಂಚೆ ಕಚೇರಿ ಸಹ ಬದಲಾಗುತ್ತಿದೆ ಎಂದು
ತಿಳಿಸಿದರು. ಅಂಚೆ ಕಚೇರಿಯಲ್ಲಿ ಈಗ ಠೇವಣಿ ಇಟ್ಟ ಹಣ ಪಡೆಯಲು ಸಂಬಂಧಿಸಿದ ಕಚೇರಿಗೆ ಹೋಗಬೇಕಾಗಿಲ್ಲ. ರಾಜ್ಯದ ಯಾವುದೇ ಅಂಚೆ ಕಚೇರಿಯಲ್ಲಿ ಹಣ ಪಡೆಯುವಂತೆ, ಎಟಿಎಂ ಕಾರ್ಡ್‌ ಬಳಸಿ ಅಂಚೆ ಕಚೇರಿಯಿಂದ ಹಾಗೂ ಇತರೆ ಬ್ಯಾಂಕ್‌ಗಳಲ್ಲಿರುವ ತಮ್ಮ ಖಾತೆಗಳಿಂದಲೂ ಹಣ ಪಡೆಯುವ ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಗೆ ಅಂಚೆ ಕಚೇರಿ ಒಳಗಾಗಿದೆ. ಅದು ಒಂದು ರೀತಿ
ಸೂಪರ್‌ ಮಾರ್ಕೇಟ್‌ ರೂಪ ಪಡೆದಿದೆ ಎಂದರು.

ಅಂಚೆ ಕಚೇರಿ ಮೂಲಕ ಕಳುಹಿಸಿದ ಯಾವುದೇ ಪಾರ್ಸೆಲ್‌ ಬಗ್ಗೆ ಟ್ರಾಫಿಕ್ ಆ್ಯಂಡ್‌ ಟ್ರೇಸ್‌ ವ್ಯವಸ್ಥೆ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ರೂಪಿಸಿದ ಹಲವು ಯೋಜನೆಗಳನ್ನು ಜನರಿಗೆ ತಲುಪಿಸುವ ವಾಹಕವಾಗಿ ಅಂಚೆ ಕಚೇರಿ ಇನ್ನಷ್ಟು ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ ಎಂದರು. ರಾಜ್ಯದಲ್ಲಿ 9 ಸಾವಿರ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದರೆ, ಚಿಕ್ಕಮಗಳೂರಿನಲ್ಲಿ 248 ಅಂಚೆ ಕಚೇರಿಗಳಿವೆ. ಈಗ ಅಂಚೆ ಕಚೇರಿಗಳು ಕಂಪ್ಯೂಟರಿಕರಣಕ್ಕೆ ಒಳಗಾಗಿವೆ. ಪೋಸ್ಟ್‌ ಇನ್‌ಫೊ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡರೆ ಹಲವು ಸೌಲಭ್ಯಗಳನ್ನು ಮೊಬೈಲ್‌ ಮೂಲಕವೇ ಪಡೆಯಬಹುದು ಎಂದರು. ಗ್ರಾಮೀಣ ಅಂಚೆ ನೌಕರರ ಮುಷ್ಕರದ ಬಗ್ಗೆ ಮಾತನಾಡಿದ ಅವರು, ಬ್ರಿಟಿಷರ ಕಾಲದಲ್ಲಿ ಜಾರಿಗೆ ಬಂದ ಈ ವ್ಯವಸ್ಥೆ ಇಂದೂ ಮುಂದುವರಿದಿದೆ. ಅವರ ಬಗ್ಗೆ ಇಲಾಖೆ ಆಲೋಚಿಸಿ ಅವರಿಗೆ ಜುಲೈ 15 ರಿಂದ ಕನಿಷ್ಠ 12 ಸಾವಿರ ವೇತನ ದೊರೆಯುವಂತೆ ಹಾಗೂ ಅದು ಗರಿಷ್ಠ 18 ಸಾವಿರ ರೂ. ಮಾಸಿಕ ವೇತನಕ್ಕೆ ಬಂದು ನಿಲ್ಲುವಂತೆ ಮಾಡಲಾಗಿದೆ. ಅವರು ಇಲಾಖೆಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಅಂಚೆ ಇಲಾಖೆಯಲ್ಲಿ ಗುಮಾಸ್ತರೂ ಆಗುವ ಅವಕಾಶ ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next