Advertisement

ಪ್ರವಾಹ ಸಾಧ್ಯತೆ; ಎಚ್ಚರ ವಹಿಸಿ

11:33 AM Jul 17, 2020 | Suhan S |

ಕಲಬುರಗಿ: ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನದಿಪಾತ್ರದ ಗ್ರಾಮಗಳ ಜನರು ಎಚ್ಚರಿಕೆಯಿಂದಿರುವಂತೆ ಜಿಲ್ಲಾಧಿಕಾರಿ ಶರತ್‌. ಬಿ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.

Advertisement

ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು, ಎಲ್ಲಾ ತಹಶೀಲ್ದಾರರು, ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಮುಂತಾದವರೊಂದಿಗೆ ವಿಡಿಯೋ ಕಾನ್ಫೆರೆನ್ಸ್‌ ಸಭೆ ನಡೆಸಿ ಮಾತನಾಡಿದ ಅವರು, ನದಿ ತೀರದಲ್ಲಿರುವ ಗ್ರಾಮಗಳ ಜನತೆ ಬಟ್ಟೆ ತೊಳೆಯಲು, ವಾಹನ ತೊಳೆಯಲು, ದನಕರುಗಳಿಗೆ ನೀರು ಕುಡಿಸಲು, ಚಿಕ್ಕಮಕ್ಕಳು ಆಟವಾಡಲು ಮತ್ತಿತರ ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಮಹಾರಾಷ್ಟ್ರದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನೆರೆಯ ರಾಜ್ಯದ ಡ್ಯಾಂಗಳಿಂದ ಪ್ರತಿದಿನ ನದಿಗೆ ಬಿಡುವ ನೀರಿನ ಹೊರಹರಿವಿನ ಪ್ರಮಾಣ ಮಾಹಿತಿ ಸಂಗ್ರಹಿಸಬೇಕು. ಈ ಸಂಬಂಧ ಮಹಾರಾಷ್ಟ್ರದ ನೀರಾವರಿ ಇಲಾಖೆ ಇಂಜಿನಿಯರ್‌ ಮತ್ತು ಜಿಲ್ಲೆಯ ಅಧಿಕಾರಿಗಳನ್ನೊಳಗೊಂಡ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿ, ನಿತ್ಯ ನೀರಿನ ಹರಿವಿನ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ, ಎಸ್ಪಿ ಅವರಿಗೆ ಮಾಹಿತಿ ನೀಡಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹೇಳಿದರು.

ಚಿಂಚೋಳಿ ತಾಲೂಕಿನಲ್ಲಿ 65 ಮನೆಗಳು ಬಿದ್ದು, 128 ಮನೆಗಳಿಗೆ ನೀರು ನುಗ್ಗಿದ್ದು, ಈ ಪೈಕಿ 89 ಮನೆಗಳು ನಗರ ಪ್ರದೇಶದವು. ಚಿತ್ತಾಪುರದಲ್ಲಿ 90 ಮನೆಗಳಿಗೆ ಹಾನಿ, ಅಫಜಪುರದಲ್ಲಿ 46 ಮನೆಗಳಿಗೆ ಹಾನಿ, ಜೇವರ್ಗಿಯಲ್ಲಿ 26 ಮನೆಗೆ ಹಾನಿ, ಒಬ್ಬ ವ್ಯಕ್ತಿಯ ಕಾಲಿಗೆ ಪೆಟ್ಟು ಎಂಬ ಮಾಹಿತಿ ನೀಡಿದರು. ಸೇಡಂನಲ್ಲಿ 9 ಮನೆ ಬಿದ್ದಿದ್ದು, 38 ಮನೆಗಳಿಗೆ  ನೀರು ನುಗ್ಗಿದೆ. ಅಳಂದದಲ್ಲಿ 19 ಮನೆ ಬಿದ್ದು, ಕೆರೆ ಅಂಬಲಗಾ ಚಿಂಚನೂರು ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿದೆ. ಕಲಬುರಗಿಯಲ್ಲಿ 46 ಮನೆ ಬಿದ್ದು, ಕಲಬುರಗಿ ಮತ್ತು ಕಮಾಲಾಪುರ ತಾಲೂಕುಗಳಲ್ಲಿ 8 ಜಾನುವಾರುಗಳು ಸಾವನ್ನಪ್ಪಿವೆ. ಕಾಳಗಿ 36 ಮನೆ, ಶಹಾಬಾದ್‌ 5 ಮನೆಗಳಿಗೆ ಹಾನಿಯಾಗಿವೆ ಎಂದು ವಿವರಿಸಿದರು.

ನಿನ್ನೆ ಮುಲ್ಲಾಮರಿ ಕೆಳದಂಡೆ ಬ್ಯಾರೇಜ್‌ನಿಂದ ನದಿದಂಡೆಯ ಜನತೆಗೆ ಮಾಹಿತಿ ನೀಡದೆ, ಏಕಾಏಕಿ ನೀರನ್ನು ನದಿಗೆ ಬಿಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳು ಕಾರ್ಯನಿರ್ವಾಹಕ ಇಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ಅಪಾಯದ ಅಂಚಿನಲ್ಲಿರುವ ನೆರೆ ಜಿಲ್ಲೆಯ ಗಡಿಯ ಸೇತುವೆಗಳಿಗೆ ನಮ್ಮ ಕಡೆಯಿಂದ ಬ್ಯಾರಿಕೇಡ್‌ ಹಾಕಿ, ಜನರು ಓಡಾಡದಂತೆ ಕ್ರಮವಹಿಸಲಾಗುವುದು ಎಂದರು. ಜಿಪಂ ಸಿಇಒ ಡಾ. ರಾಜಾ ಪಿ. ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next