ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ ಎಂಬ ಬೇಸರ ಒಂದೆರಡು ವರ್ಷಗಳದ್ದಲ್ಲ. ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಇದ್ದರೂ ಬೆಂಗಳೂರಿಗೆ ಕಪ್ ಗೆಲ್ಲಲು ಯಾಕೆ ಆಗಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ. ಇದರ ಜತೆಗೆ ಇನ್ನೊಂದು ಪ್ರಶ್ನೆಯನ್ನು ಬಹಳ ಹಿಂದಿನಿಂದ ಅಭಿಮಾನಿಗಳು ಕೇಳಿಕೊಂಡೇ ಬರುತ್ತಿದ್ದಾರೆ. ಬೆಂಗಳೂರು ತಂಡದಲ್ಲಿ ಕರ್ನಾಟಕದ ಕ್ರಿಕೆಟಿಗರಿಗೆ ಸ್ಥಾನ ಯಾಕಿರುವುದಿಲ್ಲ? ನಾವೇಕೆ ಆರ್‌ಸಿಬಿಯನ್ನು ಬೆಂಬಲಿಸಬೇಕು? ಈ ಕನ್ನಡದ ಧ್ವನಿಗೆ ಸಮಂಜಸವಾದ, ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ.
ಐಪಿಎಲ್ ಮೊದಲ ಆವೃತ್ತಿಯಲ್ಲಿ ಆರ್‌ಸಿಬಿ ತಂಡಕ್ಕೆ ರಾಹುಲ್ ದ್ರಾವಿಡ್ ನಾಯಕರಾಗಿದ್ದರು. ಆದರೆ ಆ ವರ್ಷ ತಂಡ 7ನೇ ಸ್ಥಾನ ಪಡೆಯಿತು. ಕೂಡಲೇ ದ್ರಾವಿಡ್ ನಾಯಕತ್ವ ಕಳೆದುಕೊಂಡರು. ಮುಂದಿನ ಕೆಲವು ಆವೃತ್ತಿಗಳಲ್ಲಿ ಅನಿಲ್ ಕುಂಬ್ಳೆ ನಾಯಕರಾದರು. ಇಲ್ಲಿ ತಂಡ ಫೈನಲ್‌ಗೇರಿತು. ಹೀಗೆ ಹುಡುಕಿದರೆ ಅಲ್ಲಲ್ಲಿ ಮಾತ್ರ ಆರ್‌ಸಿಬಿಯಲ್ಲಿ ಕರ್ನಾಟಕ ದವರು ಮುಖ್ಯಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ. ಕೆ.ಎಲ್. ರಾಹುಲ್ ಕೆಲವು ಋತುಗಳಲ್ಲಿ ಕಾಣಿಸಿದ್ದು ಬಿಟ್ಟರೆ ದೇವದತ್ತ ಪಡಿಕ್ಕಲ್ ಹಿಂದಿನೆರಡು ಋತು ಗಳಲ್ಲಿ ಮಿಂಚಿದ್ದಾರೆ. ಇನ್ನು ಅನಿರುದ್ಧ ಜೋಶಿ, ಪವನ್ ದೇಶ ಪಾಂಡೆ ಯಂತಹ ಆಟಗಾರರು ಲೆಕ್ಕ ಭರ್ತಿಗೆ ಎಂಬಂತೆ ಕಾಣಿಸಿಕೊಂಡಿದ್ದಾರೆ.
ಆದರೆ ಎಂದಿಗೂ ಈ ತಂಡದಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಕನ್ನಡಿಗರು ಒಂದೇ ಬಾರಿ ಕಾಣಿಸಿಕೊಂಡಿಲ್ಲ.
ರಾಜ್ಯದ ಪ್ರಮುಖ ಆಟಗಾರರು ಬೇರೆಬೇರೆ ತಂಡಗಳಲ್ಲಿ ಕಾಣಿಸಿಕೊಂಡು ಭರ್ಜರಿಯಾಗಿ ಮಿಂಚಿದ್ದಾರೆ. ಆದರೆ ಅವರನ್ನು ಖರೀದಿಸಲು ಆರ್‌ಸಿಬಿ ಉತ್ಸಾಹ ತೋರಿದ್ದು ಕಡಿಮೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಾರೆ. ಈ ಬಾರಿಯ ಹರಾ ಜನ್ನು ಪರಿಗಣಿಸಿದರೆ ಮನೀಷ್ ಪಾಂಡೆ, ದೇವದತ್ತ ಪಡಿಕ್ಕಲ್, ಪ್ರಸಿದ್ಧ ಕೃಷ್ಣ, ಕೆ. ಗೌತಮ್ ಅವರನ್ನೆಲ್ಲ ಬೆಂಗಳೂರು ಸುಲಭವಾಗಿ ಬಿಟ್ಟುಕೊಟ್ಟಿತು. ಇವರೆಲ್ಲ ಅದ್ಭುತ ಆಟಗಾರರೆಂದು ಈಗಾಗಲೇ ನಿರೂಪಿಸಿದ್ದಾರೆ. ಇನ್ನು ಕೆ.ಎಲ್. ರಾಹುಲ್ ಐಪಿಎಲ್ ಹರಾಜಿಗೆ ಮುನ್ನವೇ ಲಕ್ನೋ ತಂಡಕ್ಕೆ ನಾಯಕರಾಗಿ ದ್ದರು! ಮಾಯಾಂಕ್ ಅಗರ್ವಾಲ್ ಪಂಜಾಬ್‌ನ ಅತೀ ಮುಖ್ಯ ಆಟಗಾರ. ಇವರನ್ನೆಲ್ಲ ಸೆಳೆಯಲು ಆರ್‌ಸಿಬಿ ಯಾಕೆ ಯತ್ನಿಸು ವುದಿಲ್ಲ? ಇದು ಪ್ರಶ್ನೆಯಾಗಿಯೇ ಉಳಿದಿದೆ.
ಶನಿವಾರದ ಹರಾಜಿನ ಅನಂತರ ಕರ್ನಾಟಕದ ಆಟಗಾರರೇ ಇಲ್ಲದ ಆರ್‌ಸಿಬಿ ಪಂದ್ಯವನ್ನು ನಾವೇಕೆ ನೋಡಬೇಕು ಎಂಬ ಆಕ್ಷೇಪಣೆಯನ್ನು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಎತ್ತಿದರು. ಅದರ ಪರಿಣಾ ಮವೋ ಎಂಬಂತೆ 19 ವಯೋಮಿತಿ ವಿಶ್ವಕಪ್ ತಂಡದ 15ರ ಗುಂಪಿನ ಲ್ಲಿದ್ದ ಅನೀಶ್ವರ್ ಗೌತಮ್‌ರನ್ನು ಆರ್‌ಸಿಬಿ ಖರೀದಿಸಿತು. ಜತೆಗೆ ಲವ್ನಿàತ್ ಸಿಸೋಡಿಯರನ್ನು ಖರೀದಿಸಿತು. ಒಟ್ಟಾರೆ ಈ ತಂಡದಲ್ಲಿರುವುದು ಕೇವಲ ಇಬ್ಬರು ಕರ್ನಾಟಕದ ಆಟಗಾರರು. ಪ್ರತಿಭಾವಂತರೆಂದು ಜನಜನಿತ ರಾಗಿರುವ ರಾಜ್ಯದ ಆಟಗಾರರು ತಂಡದಲ್ಲಿಲ್ಲವೇ ಇಲ್ಲ.
ಐಪಿಎಲ್‌ನಂತಹ ಫ್ರಾಂಚೈಸಿ ಆಧಾರಿತ ಕ್ರಿಕೆಟ್‌ನಲ್ಲಿ ಅದೇ ರಾಜ್ಯದ ಆಟಗಾರರು ಇರಬೇಕು ಎಂಬ ನಿಯಮಗಳಿಲ್ಲ. ಹಾಗಿದ್ದರೂ ಸ್ಥಳೀಯ ಅಭಿಮಾನಿಗಳೊಂದಿಗೆ ತಂಡವೊಂದು ಭಾವನಾತ್ಮಕ ನಂಟು ಬೆಸೆದುಕೊ ಳ್ಳ ಬೇಕಿದ್ದರೆ ಸ್ಥಳೀಯ ಆಟಗಾರರಿರಬೇಕು. ಅಂಥದ್ದೊಂದು ಭಾವನಾತ್ಮಕ ಬೆಸುಗೆಯ ಕೊರತೆ ಆರ್‌ಸಿಬಿಯಲ್ಲಿ ಕಾಣುತ್ತಿದೆ. ಈ ಬೆಸುಗೆಯನ್ನು ಅಭಿಮಾನಿಗಳೂ ಬಯಸುತ್ತಿದ್ದಾರೆ. ಈ ರೀತಿಯ ವಿಚಾರವನ್ನೇ ಗಮನಿಸಿ ದರೆ ಮುಂಬಯಿ ಇಂಡಿಯನ್ಸ್ (ಹಿಂದೆ ಸಚಿನ್ ತೆಂಡುಲ್ಕರ್, ಈಗ ರೋಹಿತ್ ಶರ್ಮ), ಡೆಲ್ಲಿ ಕ್ಯಾಪಿಟಲ್ಸ್ (ಹಿಂದೆ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಪ್ರಸ್ತುತ ಯಶ್ ಧುಲ್), ಪಂಜಾಬ್ ಕಿಂಗ್ಸ್ (ಹಿಂದೆ ಯುವರಾಜ್ ಸಿಂಗ್, ಈಗ ಹರಪ್ರೀತ್ ಬ್ರಾರ್) ಮಾದರಿಯೆನಿಸುತ್ತವೆ. ಇದನ್ನು ಬೆಂಗಳೂರು ಗಮನಿಸಬೇಕೆನ್ನುವುದು ಎಲ್ಲರ ಬಯಕೆ.