Advertisement

JDS ಪಕ್ಷದಲ್ಲೀಗ ಅಧ್ಯಕ್ಷ ಸ್ಥಾನ ಗೌಣ!- ಜೆಡಿಎಸ್‌ ಪಕ್ಷದ ಮೇಲೆ ಕುಟುಂಬ ಹಿಡಿತ

12:40 AM Oct 11, 2023 | Team Udayavani |

ಬೆಂಗಳೂರು, ಅ. 10: ಆರಂಭದಿಂದಲೂ ಕುಟುಂಬ ಪಾರುಪತ್ಯ ಹೊಂದಿರುವ ಜೆಡಿಎಸ್‌ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಮಹತ್ವ ಗೌಣವಾಗಿದೆ.
ಜೆಡಿಎಸ್‌-ಬಿಜೆಪಿ ಮೈತ್ರಿ ಪ್ರಹಸನದಲ್ಲಿ ತಮ್ಮನ್ನು ಅಸ್ಪೃಶ್ಯರಂತೆ ನಡೆಸಿಕೊಂಡಿರುವುದಕ್ಕೆ ಹಾಲಿ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮುನಿಸಿಕೊಂಡಿದ್ದರೆ, ಇಬ್ರಾಹಿಂ ಸಾಹೇಬರನ್ನು ರಾಜ್ಯಾ
ಧ್ಯಕ್ಷರನ್ನಾಗಿ ಮಾಡಿ ನಾವೇನು ಸಂಪಾದನೆ ಮಾಡಿದ್ದೇವೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳುವ ಮೂಲಕ ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕಿರುವ ಕಿಮ್ಮತ್ತನ್ನು ಪರೋಕ್ಷವಾಗಿ ಹೇಳಿದ್ದಾರೆ.

Advertisement

ಜನತಾದಳ ಇಬ್ಭಾಗವಾಗಿ 1999ರಲ್ಲಿ ಜೆಡಿಎಸ್‌ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿವರೆಗೆ ಒಟ್ಟು 11 ಮಂದಿ ರಾಜ್ಯಾಧ್ಯಕ್ಷರಾಗಿದ್ದಾರೆ. ಇದರಲ್ಲಿ ಅತೀ ಹೆಚ್ಚು ಅವಧಿಗೆ ಅಂದರೆ ಸುಮಾರು 8 ವರ್ಷ ರಾಜ್ಯಾಧ್ಯಕ್ಷರಾಗಿದ್ದವರು ಮಾಜಿ ಸಿಎಂ ಎಚ್‌.ಡಿ. ಕುಮಾರ ಸ್ವಾಮಿಯವರು. ಅದು ಬಿಟ್ಟರೆ ಜೆಡಿಎಸ್‌ನ ಮೊದಲ ರಾಜ್ಯಾಧ್ಯಕ್ಷರಾಗಿದ್ದ ಹಾಲಿ ಸಿಎಂ ಸಿದ್ದರಾಮಯ್ಯ ನವರು 1999ರಿಂದ 2004ರವರೆಗೆ 5 ವರ್ಷ ಅಧ್ಯಕ್ಷ ಹುದ್ದೆಯಲ್ಲಿದ್ದರು. ಉಳಿದ 9 ಮಂದಿ ಅಧ್ಯಕ್ಷರು ಒಂದೆರಡು ವರ್ಷಕ್ಕೆ ಬಂದು ಹೋದವರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ಎನ್ನುವುದು ರಬ್ಬರ್‌ ಸ್ಟಾಂಪ್‌, ಡಮ್ಮಿ, ಹಲ್ಲು ಕಿತ್ತ ಹಾವು, ನಾಮಕಾವಾಸ್ತೆ, ಅಧಿಕಾರವಿಲ್ಲದ ಹುದ್ದೆ, ಉತ್ಸವ ಮೂರ್ತಿ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಆರಂಭದಿಂದಲೂ ಕೇಳಿ ಬರುತ್ತವೆ. ಎಚ್‌.ಡಿ. ಕುಮಾರಸ್ವಾಮಿಯವರ ಅವಧಿ ಬಿಟ್ಟರೆ ಉಳಿದೆಲ್ಲ ಸಂದರ್ಭಗಳಲ್ಲೂ ಆ ಮಾತು ಋಜುವಾತುಗೊಂಡಿದೆ.
ಜೆಡಿಎಸ್‌ ಪಕ್ಷದ ಮೇಲೆ ಕುಟುಂಬದ ಹಿಡಿತ ಎಷ್ಟು ಬಿಗಿಯಾಗಿದೆಯೆಂದರೆ ಅಧ್ಯಕ್ಷರಾದವರ ಪೈಕಿ ಬಹುತೇಕರು ನಮಗೆ ಹುದ್ದೆ ಸಿಕ್ಕರೆ ಸಾಕು ಅಧಿಕಾರದ ಉಸಾಬರಿ ನಮಗ್ಯಾಕೆ ಅನ್ನುವ ಶರಣಾ
ಗತಿ ತಣ್ತೀ ಅನುಸರಿಸುತ್ತಿದ್ದರು. ಎಚ್‌. ವಿಶ್ವನಾಥ್‌ ಅವರೊಬ್ಬರೇ ಬಂಡಾಯ ಎದ್ದಿದ್ದರು. ಈಗ ಸಿ.ಎಂ. ಇಬ್ರಾಹಿಂ ಮುನಿಸು ತೋರಿದ್ದಾರೆ. ಅವರ ಈ ಮುನಿಸಿ ಮುಂದೇನಾಗುತ್ತದೆಂದು ಕಾದು ನೋಡಬೇಕಿದೆ.

ಪಕ್ಷ ಸಂಘಟನೆಗೆ ಪೆಟ್ಟು
ಪಕ್ಷದ ಸಂಘಟನ ಚೌಕಟ್ಟು ಮೀರಿ ತೀರ್ಮಾನಗಳು ಆಗಿದ್ದರಿಂದ ರಾಜ್ಯಾಧ್ಯಕ್ಷ ಸ್ಥಾನ ಎಲ್ಲ ಸಂದರ್ಭಗಳಲ್ಲೂ ಗೌಣವಾಗಿದ್ದರ ಪರಿಣಾಮ ಪಕ್ಷ ಸಂಘಟನೆಗೆ ಪೆಟ್ಟು ಬಿದ್ದಿದೆ ಎನ್ನುವುದನ್ನು ಜೆಡಿಎಸ್‌ ಪಕ್ಷದ ಅನೇಕರು ಆಂತರಿಕವಾಗಿ ಒಪ್ಪಿಕೊಳ್ಳುತ್ತಾರೆ. ರಾಜ್ಯಾಧ್ಯಕ್ಷರನ್ನು ಬದಿಗಿಟ್ಟು ಪಕ್ಷದ ತೀರ್ಮಾನಗಳು ನಡೆಯುತ್ತವೆ ಎಂದಾದರೆ, ಪಕ್ಷದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಥವೇ ಇಲ್ಲ. ಅನೇಕ ವಿಷಯಗಳು ಒಪ್ಪಿಗೆ ಇಲ್ಲದಿದ್ದರೂ ದೊಡ್ಡವರು, ಕುಟುಂಬದ ಕಾರಣಕ್ಕೆ ಒಪ್ಪಿಕೊಳ್ಳಬೇಕಾಗುತ್ತದೆ. ರಾಜ್ಯಾಧ್ಯಕ್ಷರಿಗೇ ಈ ಸ್ಥಿತಿ ಇದ್ದರೆ, ಪಕ್ಷದ ಬೇರೆ ಮುಂಚೂಣಿ ಘಟಕಗಳ ಸ್ಥಿತಿ ಕೇಳುವಂತಿಲ್ಲ ಎಂದು ಜೆಡಿಎಸ್‌ ಮುಖಂಡರೊಬ್ಬರು ಅಳಲು ತೋಡಿಕೊಂಡಿದ್ದಾರೆ.

 ರಫೀಕ್‌ ಅಹ್ಮದ್‌

Advertisement

 

Advertisement

Udayavani is now on Telegram. Click here to join our channel and stay updated with the latest news.

Next