Advertisement

ಅವ್ಯವಸ್ಥೆಯ ಆಗರವಾಗಿದೆ ಕಳಿಹಿತ್ಲು ಬಂದರು

09:43 PM Sep 18, 2019 | Sriram |

ಬೈಂದೂರು: ತಾಲೂಕಿನ ಪ್ರಮುಖ ಬಂದರು ಪ್ರದೇಶಗಳಲ್ಲಿ ಒಂದಾಗಿರುವ ಕಳಿಹಿತ್ಲು ಬಂದರು ಇಲಾಖೆಯ ನಿರ್ಲಕ್ಷ್ಯ ಹಾಗೂ ಜನ ಪ್ರತಿನಿಧಿಗಳ ನಿರಾಸ‌ಕ್ತಿ ಪರಿಣಾಮ ಅವ್ಯವಸ್ಥೆಯ ಆಗರವಾಗಿದೆ.

Advertisement

200ಕ್ಕೂ ಅಧಿಕ ದೋಣಿಗಳಿಗೆ ಆಶ್ರಯ
ಶಿರೂರು ಗ್ರಾ.ಪಂ. ವ್ಯಾಪ್ತಿಯ ಸಮುದ್ರ ಕಿನಾರೆ ಯಲ್ಲಿರುವ ಕಳಿಹಿತ್ಲು ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುವ ಪ್ರದೇಶವಾಗಿದೆ. ಹಲವು ವರ್ಷಗಳ ಹಿಂದೆ ಈ ಭಾಗ ತಾಲೂಕಿನ ದೊಡ್ಡ ಮೀನು ಸಂಗ್ರಹಣೆಯ ಮತ್ತು ಸಂಸ್ಕರಣೆಯ ಕೇಂದ್ರ ವಾಗಿತ್ತು. ಪ್ರತಿವರ್ಷ ಸಾಂಪ್ರದಾಯಿಕ ದೋಣಿ ಸ್ಪರ್ಧೆ ನಡೆಯುತ್ತಿತ್ತು ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ. ನದಿ ಸಾಗರ ಸಂಗಮ ಪ್ರದೇಶವಾದ ಇಲ್ಲಿ ಮಳೆಗಾಲ ಹೊರತುಪಡಿಸಿ ಉಳಿದೆಲ್ಲ ತಿಂಗಳುಗಳಲ್ಲೂ ಮೀನುಗಾರಿಕೆ ನಡೆಯುತ್ತವೆ. ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಉಪ್ಪುಂದ, ತಾರಾಪತಿ, ನಾಗೂರು ಮುಂತಾದ ಕಡೆ ಗಳಿಂದ ಸೇರಿ 200ಕ್ಕೂ ಅಧಿಕ ದೋಣಿಗಳು ಈ ಬಂದರು ಮೂಲಕವೆ ಮೀನು ವ್ಯವಹಾರ ನಡೆಸುತ್ತದೆ. ಮೂವತ್ತು ವರ್ಷಗಳ ಹಿಂದೆ ತಡೆಗೋಡೆ ನಿರ್ಮಾಣವಾಗಿತ್ತು.

ಕೆಸರುಮಯವಾದ ರಸ್ತೆ, ಮೀನು ಮಾರಾಟಕ್ಕಿಲ್ಲ ಸ್ಥಳಾವಕಾಶ
ಕರಾವಳಿ ಮಾರ್ಗ ಹಾಗೂ ಶಿರೂರು ಕೆಳಪೇಟೆಯಿಂದ ಬರುವ ವಾಹನಗಳು ರುದ್ರ ಭೂಮಿ ಕ್ರಾಸ್‌ನಿಂದ ಕಳಿಹಿತ್ಲುವರೆಗೆ ಮಣ್ಣಿನ ರಸ್ತೆಯಲ್ಲಿಯೆ ಸಂಪರ್ಕಿಸಬೇಕು. ಕಳೆದ ಹಲವು ವರ್ಷಗಳಿಂದ ಮನವಿ ನೀಡಿದರೂ ರಸ್ತೆ ನಿರ್ಮಾಣವಾಗಿಲ್ಲ. ಮಳೆಗಾಲದ ಅಬ್ಬರ ಮತ್ತು ನಿರಂತರ ವಾಹನ ಸಂಚಾರದಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ದ್ವಿಚಕ್ರ ವಾಹನ ಕೂಡ ಸಂಚರಿಸಲಾಗದ ಪರಿಸ್ಥಿತಿ ಇದೆ. ಮಾತ್ರವಲ್ಲದೆ ಇಲ್ಲಿನ ಶಾಲೆ ಹಾಗೂ ಅಂಗನವಾಡಿ ಕೆಸರುಮಯ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾಗಿದೆ.

ಬಂದರು ಅಭಿವೃದ್ಧಿಯಾಗಬೇಕಾಗಿದೆ
ಕಳಿಹಿತ್ಲು ಬಂದರು ಅಭಿವೃದ್ಧಿಗೆ ವಿಪುಲ ಅವಕಾಶಗಳಿರುವ ಪ್ರದೇಶವಾಗಿದೆ. ನೂರಾರು ದೋಣಿಗಳು ಈ ಪ್ರದೇಶವನ್ನು ಅವಲಂಬಿಸಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಶೂನ್ಯವಾಗಿದೆ. ದೋಣಿಗಳಿಗೆ ಮೀನು ಖಾಲಿ ಮಾಡಲು ಸೂಕ್ತ ವ್ಯವಸ್ಥೆ, ಮತ್ಸé ವ್ಯಾಪಾರಕ್ಕೆ ಅವಶ್ಯವಿರುವ ಸೌಲಭ್ಯ, ಬೀದಿ ದೀಪ, ಕುಡಿಯುವ ನೀರು ಯಾವುದರ ಬಗ್ಗೆಯೂ ಕೂಡ ಇಲಾಖೆ ಗಮನಹರಿಸಿಲ್ಲ. ಶೌಚಾಲಯ ಇಲ್ಲದೆ ಜನರು ಪರದಾಡಬೇಕಾದ ಪರಿಸ್ಥಿತಿ ಇದೆ. ಈ ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರತಿ ವರ್ಷ ಬೀಚ್‌ ಉತ್ಸವ ನಡೆಸುವ ಮೂಲಕ ಕಳಿಹಿತ್ಲು ಪ್ರವಾಸೋದ‌Âಮ ಪ್ರದೇಶವಾಗಿ ಮಾರ್ಪಡಬೇಕು ಎಂದು ಸರಕಾರದ ಗಮನ ಸೆಳೆಯಲಾಗಿದೆ. ಮೀನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಇಲ್ಲಿನ ಸ್ಥಳೀಯರಿಗೆ ಕಳಿಹಿತ್ಲು ಅಭಿವೃದ್ಧಿಯಾದರೆ ಮೀನುಗಾರಿಕೆ ಸಂಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿ ಪ್ರವಾಸೋದ‌Âಮ ಅನುಕೂಲ ಪಡೆದುಕೊಳ್ಳಲು ಬಂದರು ಅಭಿವೃದ್ಧಿ ಮತ್ತು ರಸ್ತೆ ನಿರ್ಮಾಣದ ಬಗ್ಗೆ ಶೀಘ್ರ ಆಸಕ್ತಿ ವಹಿಸಬೇಕಾಗಿದೆ.

ನಡೆದಾಡುವುದೂ ಕಷ್ಟಕರ
ಕಳೆದ ಹಲವಾರು ವರ್ಷಗಳಿಂದ ಕಳಿಹಿತ್ಲು ಬಂದರು ಸಮಸ್ಯೆ ಕುರಿತು ಜನಪ್ರತಿನಿಧಿಗಳ ಗಮನ ಸೆಳೆಯ ಲಾಗುತ್ತಿದೆ.ಇದುವರೆಗೆ ಯಾವುದೇ ಅನುದಾನ ಬಂದಿಲ್ಲ.ಸೆಪ್ಟಂಬರ್‌ ತಿಂಗಳಲ್ಲಿ ನೂರಾರು ದೋಣಿಗಳು ಮೀನುಗಾರಿಕೆಗಾಗಿ ಕಳಿಹಿತ್ಲು ಬಂದರನ್ನು ಆವಲಂಬಿಸಿರುತ್ತವೆ. ಇಲ್ಲಿನ ರಸ್ತೆ ಸಂಪೂರ್ಣ ಕೆಸರುಮಯವಾಗಿ ನಡೆದಾಡಲೂ ಕಷ್ಟವಾಗುತ್ತಿದೆ.ಶೀಘ್ರವಾಗಿ ರಸ್ತೆ ನಿರ್ಮಾಣವಾಗಲು ಇಲಾಖೆ ಪ್ರಯತ್ನಿಸಬೇಕು.
– ಜಿ.ಅಜೀಜ್‌, ಅಧ್ಯಕ್ಷರು ಅಲ್ಪಸಂಖ್ಯಾಕರ ನಾಡದೋಣಿ ಮೀನುಗಾರರ ಸಂಘ ಕಳಿಹಿತ್ಲು

Advertisement

ಕಳಿಹಿತ್ಲು ರಸ್ತೆ ನಿರ್ಮಾಣಕ್ಕೆ ಪ್ರಯತ್ನ
ಕಳಿಹಿತ್ಲು ರಸ್ತೆ ಅಭಿವೃದ್ಧಿ ಕುರಿತು ಈಗಾಗಲೇ ಪ್ರಸ್ತಾವನೇ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ. ಶಾಸಕರು ಕೂಡ ಕಳಿಹಿತ್ಲು ರಸ್ತೆ ಅಭಿವೃದ್ಧಿ ಮತ್ತು ಬಂದರು ಪ್ರಗತಿ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ. ಅತೀ ಶೀಘ್ರದಲ್ಲಿ ಕಳಿಹಿತ್ಲು ರಸ್ತೆ ನಿರ್ಮಾಣದ ಪ್ರಯತ್ನ ಮಾಡಲಾಗುವುದು.
– ಸುರೇಶ್‌ ಬಟ್ವಾಡಿ,
ಜಿ.ಪಂ. ಸದಸ್ಯರು ಶಿರೂರು

ಬರಹ: ಅರುಣ ಕುಮಾರ್‌, ಶಿರೂರು
ಚಿತ್ರ: ಗಿರೀಶ್‌ ಕರಾವಳಿ

Advertisement

Udayavani is now on Telegram. Click here to join our channel and stay updated with the latest news.

Next