ಕಲಬುರಗಿ: ಸಮಾಜದಲ್ಲಿ ನಾಗರಿಕರು ಶಾಂತಿಯುತವಾಗಿ ಬದುಕಲು ಪೊಲೀಸರ ಸೇವೆ ಕಾರಣವಾಗಿದೆ. ದಿನದ 24 ಗಂಟೆಯೂ ಪೊಲೀಸರು ಸೇವೆಯಲ್ಲಿ ತೊಡಗುವ ಮೂಲಕ ಸಮಾಜದ ರಕ್ಷಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಹೇಳಿದರು. ನಗರದ ಡಿಎಆರ್ ಮೈದಾನದ ಪೊಲೀಸ್ ಹುತಾತ್ಮ ಸ್ಮಾರಕ ಸ್ಥಳದಲ್ಲಿ ರವಿವಾರ ನಡೆದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಅವರು ಮಾತನಾಡಿದರು.
ಪೊಲೀಸರು ದೇಶ ಸೇವೆಯಲ್ಲಿ ತೊಡಗಿ ತಮ್ಮ ಪ್ರಾಣ ಅರ್ಪಿಸುತ್ತಾರೆ. ಗಡಿಯಲ್ಲಿ ಸಹ ದೇಶದ ಭದ್ರತೆಗಾಗಿ ಹೋರಾಡಿ ಪೊಲೀಸರು, ಯೋಧರು ಹುತಾತ್ಮರಾಗುತ್ತಾರೆ. ಪೊಲೀಸರ ಅರ್ಪಣಾ ಮನೋಭಾವದ ಕಾರ್ಯ ಇತಿಹಾಸದಿಂದಲೂ ನಡೆದು ಬಂದಿದೆ ಎಂದು ಹೇಳಿದರು.
ಪೊಲೀಸರು ಒದಗಿಸುವ ನಿಸ್ವಾರ್ಥ ಭದ್ರತೆಯೇ ನಮ್ಮೆಲ್ಲರ ನೆಮ್ಮದಿ ಬದುಕಿಗೆ ಕಾರಣವಾಗಿದೆ. ದುಷ್ಟರನ್ನು ಸೆದೆ ಬಡಿದು ಜನಸಮುದಾಯದಲ್ಲಿ ಶಿಸ್ತನ್ನು ಪೊಲೀಸರು ಮೂಡಿಸುತ್ತಾರೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವುದಿಲ್ಲ ಎಂದು ಹೇಳಿದರು.
ಈ ಹಿಂದೆ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಕೊರತೆ ಹೆಚ್ಚಾಗಿತ್ತು. ಈಗ ಇಂತಹ ಪರಿಸ್ಥಿತಿ ಇಲ್ಲ ಎಂಬುವುದು ಖುಷಿ ಹಾಗೂ ಸಂತೋಷದ ವಿಷಯ. ಸಿಬ್ಬಂದಿ ಲಭ್ಯತೆಯಿಂದ ಒತ್ತಡವಿಲ್ಲದ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತದೆ. ಸರ್ಕಾರ ಕೂಡ ಪೊಲೀಸ್ ಇಲಾಖೆ ಸಮಸ್ಯೆ ನಿವಾರಿಸಲು ಹೆಚ್ಚು ಒತ್ತು ನೀಡಿತ್ತಿದೆ. ಎಲ್ಲ ಸಿಬ್ಬಂದಿ ಆರೋಗ್ಯ ಹಾಗೂ ಉತ್ತಮ ಜೀವನ ಸಾಗಿಸಲು ಸರ್ಕಾರ ಸಹಾಯ ಮಾಡುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ದೇಶದ ಉತ್ತರ ಗಡಿ ಭಾಗ ಲಖಾಡ್‌ನಲ್ಲಿ 1959ರ ಅ. 21ರಂದು ಭಾರತದ 10 ಜನ ಯೋಧರು ಚೀನಾ ಸೈನಿಕರೊಂದಿಗೆ ಅವಿತರಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದ್ದರು. ಇದರ ನೆನಪಿಗಾಗಿ ಪ್ರತಿ ವರ್ಷ ಅ. 21ರಂದು ಪೊಲೀಸ್ ಹುತಾತ್ಮ ದಿನಾಚರಣೆ ಹಮ್ಮಿಕೊಂಡು ಕರ್ತವ್ಯನಿರತ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದರು. ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ ಒಟ್ಟು 414 ಪೊಲೀಸರು ಹಾಗೂ ಅರೆಸೇನೆ ಪಡೆಯ ಸಿಬ್ಬಂದಿ ಸೇವೆಯಲ್ಲಿ ನಿರತರಾಗಿದ್ದಾಗಿ ಮಡಿದಿದ್ದಾರೆ.
ಇದರಲ್ಲಿ 15 ಜನ ಸಿಬ್ಬಂದಿ ಕರ್ನಾಟಕದವರು ಸೇರಿದ್ದಾರೆ. ಭಯೋತ್ಪಾದಕರು, ಉಗ್ರಗಾಮಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ಪೊಲೀಸರು ದರೋಡೆ ನಿರ್ಮೂಲನಾ ಕಾರ್ಯಾಚರಣೆ, ದೊಂಬಿ ಚದುರಿಸುವ, ಅಪರಾಧ ತನಿಖೆಯಲ್ಲಿ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಿದಾಗ ತಮ್ಮ ಪ್ರಾಣ ತ್ಯಾಗ ಮಾಡುತ್ತಾರೆ ಎಂದು ಹೇಳಿದರು.
ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಪರೇಡ್ ಕಮಾಂಡರ್ ಚಿನ್ನಬಸಪ್ಪ ನೇತೃತ್ವದ ಕವಾಯತು ತಂಡದಿಂದ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಎರಡು ನಿಮಿಷಗಳ ಮೌನಾಚರಣೆ ಸಲ್ಲಿಸಿ ಪೊಲೀಸ್ ಬ್ಯಾಂಡ್‌ನಿಂದ ಶೋಕಗೀತೆ ನುಡಿಸಲಾಯಿತು. ಇದಕ್ಕೂ ಮುನ್ನ ಗಣ್ಯರು, ಸಾರ್ವಜನಿಕರು ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಹೂಗುತ್ಛ ಅರ್ಪಿಸಿ ನಮನ ಸಲ್ಲಿಸಿದರು.
ಎಲ್ಲ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಕೈಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡಿದ್ದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ., ಮಹಾನಗರ ಪಾಲಿಕೆ ಆಯುಕ್ತ ಪೆದ್ದಪ್ಪಯ್ಯ, ಎಎಸ್‌ಪಿ ಲೋಕೇಶ್, ಕೆಎಸ್‌ಆರ್‌ಪಿ ಕಮಾಂಡೆಂಟ್ ಬಸವರಾಜ ಜಿಳ್ಳೆ, ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಕುಟುಂಬದವರು ಪಾಲ್ಗೊಂಡಿದ್ದರು. ಚಿತ್ತಾಪುರ ಸಿಪಿಐ ವಿ.ಪಿ. ಸಾಲಿಮಠ ನಿರೂಪಿಸಿದರು.