ಬೆಂಗಳೂರು: ಪೊಲೀಸ್ ಠಾಣೆ ಎಂದರೆ ಮಕ್ಕಳಿಗೆ ಭಯ. ಆದರೆ, ಈ ಭಯ ಹೋಗಲಾಡಿಸಲು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಪೊಲೀಸ್ ಠಾಣೆಯನ್ನೇ “ಮಕ್ಕಳ ಮನೆ’ ಮಾಡಿ ಗಮನಸೆಳೆದಿದ್ದಾರೆ! ಮಕ್ಕಳನ್ನು ಪೊಲೀಸ್ ಠಾಣೆಗೆ ಮುಕ್ತವಾಗಿ ಆಹ್ವಾನಿಸಿ, ಧೈರ್ಯ ತುಂಬುವ ಉದ್ದೇಶದಿಂದ ಇದೇ ಮೊದಲ ಬಾರಿ ಆಗ್ನೇಯ ವಿಭಾಗದ ಎಚ್‌ಎಸ್‌ಆರ್ ಠಾಣೆ ಪೊಲೀಸರು ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಅವರು ಶನಿವಾರ “ಮಕ್ಕಳ ಮನೆ’ (ಚಿಲ್ಡ್ರನ್ ಪ್ಲೇ ಹೋಮ್) ಅನ್ನು ಉದ್ಘಾಟಿಸಿದರು.
ಮುಂದಿನ ದಿನಗಳಲ್ಲಿ ಆಗ್ನೇಯ ವಿಭಾಗದ ಎಲ್ಲಾ ಠಾಣೆಯಲ್ಲೂ ಪ್ಲೇ ಹೋಂ ತೆರೆಯವುದಾಗಿ ಡಿಸಿಪಿ ಇದೇ ವೇಳೆ ತಿಳಿಸಿದರು. ಮಕ್ಕಳ ಮನೆಯ ಗೋಡೆಗಳಲ್ಲಿ ಮಕ್ಕಳನ್ನು ಆಕರ್ಷಿಸುವ ಪ್ರಾಣಿ, ಪಕ್ಷಿ, ಗಿಡ ಮರಗಳ ಚಿತ್ರಗಳನ್ನು ಬಿಡಿಸಲಾಗಿದೆ. ಅಲ್ಲದೆ, ಮಕ್ಕಳಿಗೆ ಅಗತ್ಯವಿರುವ ಆಟದ ವಸ್ತುಗಳು, ಕಾರುಗಳು, ಸಣ್ಣ ಜಾರುಬಂಡೆ ಇಡಲಾಗಿದೆ. ಇಡೀ ಮನೆಯನ್ನು ಸಂಪೂರ್ಣವಾಗಿ ಖಾಸಗಿ ಪ್ಲೇಂ ಹೋಂ ರೀತಿ ಸಿದ್ಧಪಡಿಸಿದ್ದು, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.
ಪೊಲೀಸ್ ಠಾಣೆ ಎಂದರೆ ಭರವಸೆ: ಪೊಲೀಸ್ ಠಾಣೆ ಬಗ್ಗೆ ಮೊದಲೇ ಭಯದ ಭಾವನೆ ಹೊಂದಿರುವ ಮಕ್ಕಳನ್ನು ಅಲ್ಲಿಗೆ ಕರೆದೊಯ್ದರೆ ಇನ್ನುಷ್ಟು ಆತಂಕಕ್ಕೆ ಒಳಗಾಗುತ್ತಾರೆ ಎಂಬ ಕಾರಣಕ್ಕೆ ಕೆಲ ಪೋಷಕರು ತಮ್ಮೊಡನೆ ಠಾಣೆಗೆ ಮಕ್ಕಳನ್ನು ಕರೆದೊಯ್ಯುವುದಿಲ್ಲ. ಹೀಗಾಗಿ ಮಕ್ಕಳಲ್ಲಿ “ಪೊಲೀಸ್ ಠಾಣೆ ಭಯವಲ್ಲ, ಅದೊಂದು ಭರವಸೆ’ ಎಂಬ ಭಾವನೆಯನ್ನು ಮೂಡಿಸಿ, ಮನೆಯ ವಾತಾವರಣ ಕಲ್ಪಿಸಲು ಈ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರಲು ಯತ್ನಿಸಲಾಗಿದೆ.
ಶನಿವಾರ ಸ್ಥಳೀಯ ಶಾಲಾ ಮಕ್ಕಳು “ಮಕ್ಕಳ ಮನೆ’ಯಲ್ಲಿ ಕೆಲ ಹೊತ್ತು ಆಟ ಆಡಿದರು ಎಂದು ಡಿಸಿಪಿ ಇಶಾ ಪಂತ್ ತಿಳಿಸಿದರು. ಶೀಘ್ರವೇ ಕೋರಮಂಗಲ ಠಾಣೆಯಲ್ಲೂ ಮಕ್ಕಳ ಮನೆ ಕೊಠಡಿ ಉದ್ಘಾಟನೆ ಆಗಲಿದ್ದು, ಆಗ್ನೇಯ ವಿಭಾಗದ ಎಲ್ಲಾ ಠಾಣೆಗಳಲ್ಲೂ ಯೋಜನೆ ಜಾರಿಗೆ ತರಲಾಗುವುದು. ಪ್ಲೇ ಹೋಂಗೆ ಅಗತ್ಯವಿರುವ ವಸ್ತುಗಳನ್ನು ದಾನಿಗಳು ನೀಡಿದ್ದಾರೆ ಎಂದು ಹೇಳಿದರು.