ನೆಲಮಂಗಲ: ಕಾರು ಶೋಕಿಗಾಗಿ ಚಾಲಕನ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಗಳ ಬಂಧನದ ವೇಳೆ ಪೊಲೀಸರ ಬಂದೂಕುಗಳು ಸದ್ದು ಮಾಡಿರುವ ಘಟನೆ ಮಂಗಳವಾರ ಬೆಳ್ಳಂಬೆಳ್ಳಗ್ಗೆ ಸಂಭವಿಸಿದೆ.
ಜಕ್ಕಸಂದ್ರ ಗ್ರಾಮದ ವಿನೋದ್‌ಕುಮಾರ್ (24)ಮತ್ತು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ ಹೇಮಂತ್‌ಸಾಗರ್(24)ಗೆ ಪೊಲೀಸರ ಗುಂಡೇಟು ಬಂದಿದೆ.
ಇಬ್ಬರ ಬಂಧನದ ವೇಳೆ ವೃತ್ತ ನಿರೀಕ್ಷಕ ಅನಿಲ್ಕುಮಾರ್ ಅವರ ತಂಡದಲ್ಲಿದ್ದ ಪಟ್ಟಣ ಪೊಲೀಸ್ ಠಾಣೆ ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಎಂ.ಬಿ.ನವೀನ್‌ಕುಮಾರ್ ಘಟನೆ ವೇಳೆ ಗಾಯಗೊಂಡಿದ್ದಾರೆ.
ಘಟನೆ ವಿವರ: ವಿನೋದ್‌ಕುಮಾರ್ ಮತ್ತು ಹೇಮಂತ್‌ಸಾಗರ್ ಎಂಬ ಬಂಧಿತ ಆರೋಪಿಗಳು ಮೂಲತಃ ಅಪರಾಧ ಹಿನ್ನಲೆಯುಳ್ಳವರಾಗಿದ್ದು ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿಯಲ್ಲಿ ಕ್ಯಾಬ್‌ಚಾಲಕನಾಗಿದ್ದ ಆಂಧ್ರ ಮೂಲದ ಕೆಂಪೇಗೌಡ ಎಂಬುವವರ ಇನ್ನೋವಾ ಕಾರನ್ನು ಬಾಡಿಗೆಗೆ ಪಡೆದು ಮಾರ್ಗಮಧ್ಯೆ ಹತ್ಯೆಗೈದು ನಂತರ ಮೃತದೇಹವನ್ನು ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಲ್ಲರಬಾಣವಾಡಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಸುಟ್ಟುಹಾಕಿ ಪರಾರಿಯಾಗಿದ್ದರು ಎಂದು ಪೊಲೀಸರ ಮೂಲಗಳು ತಿಳಿಸಿವೆ.
ಅಕ್ರಮಹಣ ಸಂಪಾದನೆ:ಸರಗಳ್ಳತನ ಹಾಗೂ ಮತ್ತಿತರ ಪ್ರಕರಣಗಳಲ್ಲಿ ಜೈಲು ಸೇರಿದ್ದ ವಿನೋದ್‌ಕುಮಾರ್ ಹಾಗೂ ಹೇಮಂತ್‌ಸಾಗರ್ ಇಬ್ಬರೂ ಜೈಲಿನಲ್ಲಿದ್ದಾಗಲೇ ಪರಸ್ಪರ ಸ್ನೇಹ ಬೆಳೆಸಿಕೊಂಡಿದ್ದರು. ಜಾಮೀನಿನ ಮೇಲೆ ಹೊರಬಂದ ಇಬ್ಬರು ತಮ್ಮಲ್ಲಿರುವ ಅಪರಾಧ ಚಟುವಟಿಕೆ ಮನಸ್ಥಿತಿಯನ್ನೇ ಬಂಡವಾಳವನ್ನಾಗಿಸಿಕೊಂಡು ಅಕ್ರಮ ಹಣ ಸಂಪಾದನೆಗೆ ಮುಂದಾಗಿದ್ದರು. ಈ ಹಿಂದೆಯೇ ಪರಿಚಿತರಾಗಿದ್ದ ಕಾರು ಚಾಲಕನ ಕಾರನ್ನು ಪ್ರವಾಸಕ್ಕೆಂದು ಬಾಡಿಗೆ ಪಡೆದು ಮಂಡ್ಯ ಮತ್ತಿತರೆಡೆಗೆ ಪ್ರವಾಸಕ್ಕೆ ತೆರಳಿ ನಂತರ ಹಾಸನ ಮೂಲಕ ಸಾಗುವ ವೇಳೆ ಕಾರು ಚಾಲಕ ಮತ್ತು ಪ್ರವಾಸಿಗರಿಬ್ಬರ ನಡುವೆ ಮಾತಿನ ಚಕಮಕಿ ಸಂಭವಿಸಿ ನಂತರ ಇಬ್ಬರು ಆರೋಪಿಗಳು ಚಾಲಕ ಕೆಂಪೇಗೌಡನನ್ನು ಹತ್ಯೆಗೈದು ನಂತರ ಮಂಗಳೂರು ಬೆಂಗಳೂರು ಮಾರ್ಗದ ಮೂಲಕ ಸಾಗಿ ನೆಲಮಂಗಲ ಹೊರವಲಯದ ಮಲ್ಲರಬಾಣವಾಡಿ ಗ್ರಾಮದ ನಿರ್ಜನ ಪ್ರದೇಶಕ್ಕೆ ಶವ ತಂದು ಸುಟ್ಟುಹಾಕಿದ್ದರು. ಗ್ರಾಮಸ್ಥರಿಂದ ಬೆಳಕಿಗೆ ಬಂದಿದ್ದ ಹತ್ಯೆ ಪ್ರಕರಣವನ್ನು ಬೆನ್ನತ್ತಿದ್ದ ವೃತ್ತ ನಿರೀಕ್ಷಕ ಅನಿಲ್ಕುಮಾರ್ ಮತ್ತು ತಂಡ, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿತ್ತು.
ಸಾಮಾನ್ಯರಲ್ಲ: ಬಂಧಿತರು ಸಿಲಿಕಾನ್ ಸಿಟಿ ವಿವಿಧ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಚಟುವ ಟಿಕೆಗಳಲ್ಲಿ ಭಾಗಿಯಾದ್ದು ಪೊಲೀಸರಿಗೆ ತಲೆನೋವಾಗಿದ್ದರು.
ಚೇತರಿಕೆ: ಆರೋಪಿಗಳನ್ನು ಬಂಧಿಸುವ ವೇಳೆ ಗಾಯಗೊಂಡ ಪಿಎಸ್‌ಐ ಎಂ.ಬಿ.ನವೀನ್‌ಕುಮಾರ್ ಹಾಗೂ ಆರೋಪಿಗಳನ್ನು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿದೆ. ನವೀನ್‌ಕುಮಾರ್‌ರ ಎಡಗೈಗೆ ತೀವ್ರವಾಗಿ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳ ಕಾಲಿಗೆ ಗುಂಡು:
ಸೋಮವಾರ ತಡರಾತ್ರಿ ಸೊಂಡೆಕೊಪ್ಪ ಕಡೆಯಿಂದ ಪಟ್ಟಣಕ್ಕೆ ಬರುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಸೊಂಡೆಕೊಪ್ಪರಸ್ತೆಯ ಬಯಲು ಉದ್ಬವ ಗಣಪತಿ ದೇವಸ್ಥಾನದ ಬಳಿ ಆರೋಪಿಗಳನ್ನು ಅಡ್ಡಗಟ್ಟಿ ಹಿಡಿಯಲು ಮುಂದಾದ ಸಬ್‌ಇನ್ಸ್‌ಪೆಕ್ಟರ್ ಎಂ.ಬಿ.ನವೀನ್‌ಕುಮಾರ್‌ರಿಗೆ ಆರೋಪಿಗಳು ಡ್ರಾಗರ್‌ನಿಂದ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ವೃತ್ತ್ತನಿರೀಕ್ಷಕ ಅನಿಲ್ಕುಮಾರ್ ಗಾಳಿಯಲ್ಲಿ ಗುಂಡುಹಾರಿಸಿ ಎಚ್ಚರಿಕೆ ನೀಡಿದರೂ ಲೆಕ್ಕಿಸದ ಆರೋಪಿ ಸಬ್‌ಇನ್ಸ್‌ಪೆಕ್ಟರ್ ನವೀನ್‌ಕುಮಾರ್‌ರ ಮೇಲೆ ಹಲ್ಲೆಗೆ ಮುಂದಾಗಿದ್ದರಿಂದ ಆರೋಪಿಗಳ ಕಾಲಿಗೆ ಗುಂಡುಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.