Advertisement

ಮಟ್ಕಾ ದಂಧೆ ಭೇದಿಸಲು ಪೊಲೀಸರು ಸಜ್ಜು

06:16 PM Oct 17, 2021 | Team Udayavani |

ತುಮಕೂರು: ಜಿಲ್ಲೆಯ ಪಾವಗಡ ಸೇರಿದಂತೆ ಇತರ ಕಡೆ ವ್ಯಾಪಿಸಿದ್ದ ಮಟ್ಕಾ ದಂಧೆ ಈಗ ಆನ್‌ಲೈನ್‌ ಮೂಲಕ ಎಲ್ಲಾ ಕಡೆ ವ್ಯಾಪಿಸಿದ್ದು, ಅಂತರ್‌ ರಾಷ್ಟ್ರೀಯಮಟ್ಟದಲ್ಲಿ ಆನ್‌ಲೈನ್‌ ಮೂಲಕ ವ್ಯಾಪಿಸಿರುವ ಮಟ್ಕಾ ದಂಧೆಯನ್ನು ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪೂರ್‌ವಾಡ್‌ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ.

Advertisement

ಕಳೆದ ಎರಡು ವರ್ಷದಿಂದ ಸಾಮಾನ್ಯ ಜನರು ಕೊರೊನಾದಿಂದ ಸಂಕಷ್ಟ ಅನುಭವಿಸಿದ್ದಾರೆ. ಕೆಲವರು ತಮ್ಮ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ವ್ಯಾಪಾರ ನಷ್ಟವಾಗಿ ಖರ್ಚಿಗೆ ಕಾಸಿಲ್ಲ ಎಂದು ಪರದಾಡುತ್ತಿದ್ದಾರೆ.

ಆದರೆ, ಬೆಟ್ಟಿಂಗ್‌, ಮಟ್ಕಾ, ಜೂಜುಕೋರರು ಮಾತ್ರ ಪೊಲೀಸರ ಕಣ್ಣು ತಪ್ಪಿಸಿ ಯಾವ ಚಿಂತೆ ಇಲ್ಲದೆ ಭರ್ಜರಿ ಹಣ ಮಾಡುತ್ತಿದ್ದು, ಮಟ್ಕಾ ದಂಧೆಯನ್ನು ಮಟ್ಟಹಾಕಲು ಪೊಲೀಸರು ಮಾಹಿತಿ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಪೊಲೀಸರಿಗೆ ತಲೆನೋವು: ಜಿಲ್ಲೆಯ ಪಾವಗಡದಲ್ಲಿ ಇತ್ತೀಚೆಗೆ ಮಿತಿ ಮೀರಿದ ಮಟ್ಕಾ ದಂಧೆಯನ್ನು ಪೊಲೀಸರು ಒಂದು ಹಂತಕ್ಕೆ ನಿಯಂತ್ರಣಕ್ಕೆ ತಂದಿದ್ದರು. ಆದರೆ, ದಂಧೆಕೋರರು ಮಾತ್ರ ಪೊಲೀಸರ ಕಣ್ಣು ತಪ್ಪಿಸಿ ತಂತ್ರಜ್ಞಾನದ ಮೂಲಕ ದಂಧೆಯನ್ನು ಮುಂದುವರಿಸಿದ್ದರು. ತಮ್ಮದೇ ಆದ ಪ್ರತ್ಯೇಕ ಆ್ಯಪ್‌ ಕ್ರಿಯೇಟ್‌ ಮಾಡಿಕೊಂಡು ತಮ್ಮ ಗ್ರಾಹಕರ ಮೊಬೈಲ್‌ ಗೆ ಕಳುಹಿಸುತ್ತಿದ್ದಾರೆ.

ಇದನ್ನೂ ಓದಿ;- ಸಂವಿಧಾನ ಓದು ಅಭಿಯಾನದಡಿ ಮನೆ-ಮನೆಗೂ ಸಂವಿಧಾನ ಕಾರ್ಯಕ್ರಮ

Advertisement

ಇದರಿಂದ ಆರೋಪಿ ಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಆನ್‌ ಲೈನ್‌ ಮಟ್ಕಾ ದಂಧೆ ಕುರಿತು ಮಾಹಿತಿ ಪಡೆದಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಜಿಲ್ಲೆಯಲ್ಲಿ ಮಟ್ಕಾ ನಿಯಂತ್ರಿಸಲು ಮುಂದಾಗಿದ್ದಾರೆ. ಮಾಹಿತಿ ತಂತ್ರಜ್ಞಾನದ ಮೊರೆ: ಮಾಹಿತಿ ತಂತ್ರಜ್ಞಾನದ ಮೊರೆ ಹೋಗಿರುವ ಜಿಲ್ಲೆಯ ಪೊಲೀಸರು, ಇದಕ್ಕಾಗಿ ನುರಿತ ತಂತ್ರಜ್ಞರನ್ನು ಸಂಪರ್ಕಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದಷ್ಟೇ ಪಾವಗಡದಲ್ಲಿ ಮಟ್ಕಾ ದಂಧೆಕೋರ ಅಶ್ವಥ್‌ ಮತ್ತು ಆತನ ಸಹಚರರನ್ನು ಹಾಗೂ ಸಹೋದರನ್ನು ಪೊಲೀಸರು ಬಂಧಿಸಿ, ಅಪಾರ ಪ್ರಮಾಣದ ಹಣ ಮತ್ತು ದಾಖಲೆ ವಶಕ್ಕೆ ತೆಗೆದುಕೊಂಡಿದ್ದರು. ಇದೀಗ ಮತ್ತೆ ಮಟ್ಕಾ ದಂಧೆಕೋರರು ಆನ್‌ಲೈನ್‌ ಮೂಲಕ ವಹಿವಾಟು ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಇದಕ್ಕೆ ಬ್ರೇಕ್‌ ಹಾಕಲು ಸಿದ್ಧರಾಗಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು, ಆನ್‌ಲೈನ್‌ ಜಾಲವನ್ನು ಭೇದಿಸಲು ಸಿದ್ಧರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next