Advertisement

ಮುಂದಿನ ತಿಂಗಳು ಪೊಲೀಸ್‌ ಆಯುಕ್ತಾಲಯ ಕಾರ್ಯಾರಂಭ

10:19 AM Oct 24, 2017 | Team Udayavani |

ಕಲಬುರಗಿ: ಹಲವು ವರ್ಷಗಳಿಂದ ನಿರೀಕ್ಷೆಯಿಂದ ಕಾಯುತ್ತಿರುವ ಮಹಾನಗರದ ಪೊಲೀಸ್‌ ಆಯುಕ್ತಾಲಯ (ಕಮೀಷನರೇಟ್‌) ಬರುವ ಡಿಸೆಂಬರ್‌ನೊಳಗೆ ಕಾರ್ಯಾರಂಭ ಮಾಡಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಕಟಿಸಿದರು. ಸೋಮವಾರ ಕಲಬುರಗಿ ಡಿ.ಎ.ಆರ್‌. ಆವರಣದಲ್ಲಿ ನೂತನವಾಗಿ ನಿರ್ಮಿಸಿದ 120 ಪೊಲೀಸ್‌ ವಸತಿ ಗೃಹಗಳ ಹಾಗೂ ಸ್ಟೇಶನ್‌ ಬಜಾರ್‌ ಪೊಲೀಸ್‌ ಠಾಣೆಯ ನೂತನ ಕಚೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕಮೀಷನರೇಟ್‌ ಆರಂಭಿಸುವ ನಿಟ್ಟಿನಲ್ಲಿ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. 152 ಕೋಟಿ ರೂ. ಅನುದಾನ ಹಾಗೂ 500 ಕ್ಕಿಂತಲೂ ಹೆಚ್ಚುವರಿ ಸಿಬ್ಬಂದಿಯೊಂದಿಗೆ ಕಮೀಷನರೇಟ್‌ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಟ್ಟು 11 ಸಾವಿರ ವಸತಿ ಗೃಹಗಳನ್ನು ಪೊಲೀಸ್‌ ಸಿಬ್ಬಂದಿಗಾಗಿ ನಿರ್ಮಿಸಲಾಗುತ್ತಿದೆ. ಈ ಪೈಕಿ ಮೊದಲ ಹಂತದಲ್ಲಿ 2272 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. 2 ಮತ್ತು 3ನೇ ಹಂತದಲ್ಲಿ ಉಳಿದ ವಸತಿ ಗೃಹಗಳನ್ನು ನಿರ್ಮಿಸಲಾಗುವುದು. 2018ರೊಳಗೆ ಎಲ್ಲ ವಸತಿ ಗೃಹಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. 

ಮುಖ್ಯ ಅತಿಥಿಯಾಗಿದ್ದ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಶೀಘ್ರ ಪೊಲೀಸ್‌ ಆಯುಕ್ತಾಲಯ ಪ್ರಾರಂಭಿಸಬೇಕು. ಸ್ಟೇಶನ್‌ ಬಜಾರ್‌ ಠಾಣೆ 116.47 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಇಂದು ಉದ್ಘಾಟನೆ ಮಾಡಲ್ಪಟ್ಟಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದ್ದು, ಖಾಲಿಯಾಗುವ ಹಳೆ ಸ್ಟೇಶನ್‌ ಬಜಾರ್‌ ಠಾಣೆ ಕಟ್ಟಡದಲ್ಲಿ ಪೊಲೀಸ್‌ ಕಮೀಷನರೇಟ್‌ ಪ್ರಾರಂಭಿಸಬೇಕೆಂದರು. ಕಮೀಷನರೇಟ್‌ ನಿರ್ಮಾಣದಿಂದ ಸಂಪೂರ್ಣ ಅಧಿಕಾರ ಪೊಲೀಸ್‌ ಆಯುಕ್ತರಿಗಿರುತ್ತದೆ. ಇದರಿಂದ ಇಲಾಖೆ ಕೆಲಸದಲ್ಲಿ ಆಗುವ ವಿಳಂಬ ತಪ್ಪುತ್ತದೆ. ಆಳಂದ, ಸೇಡಂ, ಚಿಂಚೋಳಿ, ಕಲಬುರಗಿ ಗ್ರಾಮಾಂತರ ಸೇರಿದಂತೆ 8 ಪೊಲೀಸ್‌ ಠಾಣೆಗಳ
ಕಟ್ಟಡಗಳು ದುಸ್ಥಿಯಲ್ಲಿದ್ದು, ಇಲ್ಲಿ ಹೊಸ ಕಟ್ಟಡ ನಿರ್ಮಿಸಬೇಕೆಂದು ಗೃಹ ಸಚಿವರಿಗೆ ಮನವಿ ಮಾಡಿದರು.

ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಈಗಾಗಲೇ ಹೈದ್ರಾಬಾದ ಕರ್ನಾಟಕದ ಜಿಲ್ಲೆಗಳ ಪೊಲೀಸ್‌ ಇಲಾಖೆಗೆ 13 ಕೋಟಿ ರೂ. ಅನುದಾನವನ್ನು ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸ್‌ ಇಲಾಖೆಯ ಅಗತ್ಯ ಸವಲತ್ತು ಕಲ್ಪಿಸಲು ಮಂಡಳಿ ಸಿದ್ಧವಿದೆ ಎಂದರು.

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ರೂಪಕ್‌ ಕುಮಾರ ದತ್ತಾ ಮಾತನಾಡಿ, ಪೊಲೀಸ್‌ ಇಲಾಖೆಯ ಮೂಲಭೂತ ಸೌಕರ್ಯ ಯೋಜನೆಗಳಿಗೆ ಎಚ್‌. ಕೆ.ಆರ್‌.ಡಿ.ಬಿ. ಅನುದಾನ ನೀಡಬೇಕು ಎಂದು ಕೋರಿದರು. ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ
ಸಂಜಯ ಸಹಾಯ್‌, ಕರ್ನಾಟಕ ರಾಜ್ಯ ಪೊಲೀಸ್‌ ಹೌಸಿಂಗ್‌ ನಿಗಮದ (ಕಾರ್ಪೋರೇಷನ್‌) ವಸತಿ ನಿರ್ಮಾಣದ ವಿವಿಧ ಕಾರ್ಯಗಳನ್ನು ವಿವರಿಸಿದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಈಶಾನ್ಯ ವಲಯದ ಪೊಲೀಸ್‌ ಮಹಾನಿರೀಕ್ಷಕರಾದ ಆಲೋಕಕುಮಾರ ಕಲಬುರಗಿಯಲ್ಲಿ ಪೊಲೀಸ್‌ ಟೌನ್‌ಶಿಪ್‌ ನಿರ್ಮಾಣ ಕುರಿತು ಗೃಹ ಸಚಿವರಿಗೆ ಮನವಿ ಮಾಡಿದರು. ಶಾಸಕರಾದ ಡಾ| ಉಮೇಶ ಜಾಧವ್‌, ಬಿ.ಜಿ. ಪಾಟೀಲ, ಮೇಯರ್‌ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಮಹ್ಮದ್‌ ಅಸಗರ ಚುಲಬುಲ್‌, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಇಲಿಯಾಸ್‌ ಬಾಗವಾನ್‌, ಪೊಲೀಸ್‌ ಮಹಾನಿರ್ದೇಶಕ (ತರಬೇತಿ) ಪ್ರೇಮ್‌ ಶಂಕರ ಮೀನಾ, ಪೊಲೀಸ್‌ ಇಲಾಖೆ ತರಬೇತಿ ವಿಭಾಗದ ಮಹಾನಿರ್ದೇಶಕ ಬಿ.ಕೆ. ಸಿಂಗ್‌, ಬೀದರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೇವರಾಜ್‌, ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಮುಂತಾದವರು ಇದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಜಯಪ್ರಕಾಶ ವಂದಿಸಿದರು.

ಎಲ್ಲದಕ್ಕೂ ಎಚ್‌ಕೆಆರ್‌ಡಿಬಿಯತ್ತ ಬೊಟ್ಟು ಮಾಡಬೇಡಿ ಹೈಕ ಭಾಗದ ಹಿಂದುಳಿಯುವಿಕೆ ಹೋಗಲಾಡಿಸುವ ನಿಟ್ಟಿನಲ್ಲಿ 371ನೇ (ಜೆ) ವಿಧಿ ಅಡಿ ಅಸ್ತಿತ್ವಕ್ಕೆ ಬಂದಿರುವ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 1500 ಕೋಟಿ ರೂ. ನೀಡಲಾಗುತ್ತಿದೆ. ಆದರೆ ಹಣ ವಿಶೇಷವಾಗಿ ಅಭಿವೃದ್ಧಿ ಕಾರ್ಯಗಳಿಗೆ ಅದರಲ್ಲೂ ಸರ್ಕಾರದ ವಿವಿಧ ಯೋಜನೆ ಅಡಿ ತಲುಪದ ಕಾರ್ಯಗಳಿಗೆ ಬಳಸಲು ಬರುತ್ತಿದೆ. ಆದರೆ ಎಲ್ಲದಕ್ಕೂ ಎಚ್‌ಕೆಡಿಬಿ ಅನುದಾನದತ್ತ ಬೊಟ್ಟು ಮಾಡಲಾಗುತ್ತಿದೆ. 

ಹಾಗೆ ಮಾಡಬೇಡಿ. ಪೊಲೀಸ್‌ ಇಲಾಖೆಗೆ 200 ಕೋಟಿ ರೂ. ಕೊಡಿ ಅಂದರೆ ಹೇಗೆ? ಇಲಾಖೆಗೆ ಅನುದಾನ ಬರುತ್ತದೆ. ಅದನ್ನೇ ಬಳಸಿಕೊಳ್ಳಿ. ಅದೇ ರೀತಿ ಯಾರೂ ಎಚ್‌ಕೆಡಿಬಿಯತ್ತ ಬೊಟ್ಟು ಮಾಡಬೇಡಿ. ನಿರಂತರದ ಅನುದಾನ ಮೊದಲು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಇತರ ಭಾಗದ ಸಚಿವರು, ಅಧಿಕಾರಿಗಳಿಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next